ಬೆಂಗಳೂರು, ಆ.2- ಬಿಬಿಎಂಪಿಯಲ್ಲಿ ಎರವಲು ಸೇವೆ ಮೇಲೆ ಬಂದವರದ್ದೇ ಕಾರುಬಾರಾಗಿದ್ದುಇಲ್ಲಿನ ಮೂಲಸಿಬ್ಬಂದಿಗೆ ಬೆಲೆಯೇ ಇಲ್ಲದಂತಾಗಿಬಿಟ್ಟಿದೆ.
ಪಾಲಿಕೆಯಲ್ಲಿ ಎರವಲು ಸೇವೆ ಮೇಲೆ ಬಂದವರ ಮೇಲೆ ಪ್ರೀತಿ ಹೆಚ್ಚಾಗಿ ಮೂಲ ಸಿಬ್ಬಂದಿಗೆ ಅನ್ಯಾಯ ಮಾಡಲಾಗುತ್ತಿದೆ.ಕಳೆದ ಹತ್ತು ವರ್ಷಗಳಿಂದ ಇಲ್ಲೇ ಜಾಂಡಾ ಊರಿರುವ ಎರವಲು ಸಿಬ್ಬಂದಿ ಕುರ್ಚಿ ಬಿಟ್ಟು ಅಲಗಾಡುತ್ತಿಲ್ಲ. ಹಾಗಾಗಿ “ನಾ ಕೊಡೆ ನೀ ಬಿಡೆ” ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ.
ಬಿಬಿಎಂಪಿಯಲ್ಲಿ ಮೂಲ ಸಿಬ್ಬಂದಿಗಿಂತ ವಲಸೆ ಸಿಬ್ಬಂದಿಗಳ ಹಾವಳಿ ಹೆಚ್ಚಾಗಿದೆ. ವರ್ಗಾವಣೆಯಾಗಿದ್ದರೂ ಅವರು ಇಲ್ಲೇ ಇರುವುದರಿಂದ ಬಿಬಿಎಂಪಿ ತನ್ನ ಸಿಬ್ಬಂದಿಗೆ ಅನ್ಯಾಯ ಮಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಲೇ ಇದೆ.
ಡೆಪ್ಯೂಟೇಶನ್ ಮೇಲೆ ಬಂದಿರುವ ಸಿಬ್ಬಂದಿ ಸುಮಾರು 10-12ವರ್ಷಗಳಿಂದ ಇಲ್ಲೇ ಠಿಕಾಣಿ ಹೂಡಿ ಪಾಲಿಕೆಯನ್ನೇ ಆಶ್ರಯತಾಣವನ್ನಾಗಿ ಮಾಡಿಕೊಂಡಿದ್ದಾರೆ. ಹಾಗಾಗಿ ಮೂಲ ಸಿಬ್ಬಂದಿಗೆ ಬಡ್ತಿ ಭಾಗ್ಯವೇ ಇಲ್ಲದಂತಾಗಿದೆ.
350ಕ್ಕೂ ಹೆಚ್ಚು ಸಿಬ್ಬಂದಿ ಮಾತೃ ಇಲಾಖೆಗೆ ಹೋಗದೆ ಪಾಲಿಕೆಯಲ್ಲೇ ಬೀಡುಬಿಟ್ಟಿದ್ದಾರೆ.ಹೀಗೆ ಎರವಲು ಸೇವೆ ಮೇಲೆ ಬಂದವರು ಮೂರು ವರ್ಷಗಳು ಸೇವೆ ಸಲ್ಲಿಸಿದ ಬಳಿಕ ಮಾತೃ ಇಲಾಖೆಗೆ ಹೋಗಬೇಕು. ಈ ಬಗ್ಗೆ ಬಿಬಿಎಂಪಿ ಆಯುಕ್ತರು ಆದೇಶ ನೀಡಿದ್ದರೂ ಇದಕ್ಕೆ ಕವಡೆ ಕಾಸಿನ ಕಿಮ್ಮತ್ತನ್ನು ಎರವಲು ಸೇವೆ ಮೇಲೆ ಬಂದ ಸಿಬ್ಬಂದಿ ನೀಡಿಲ್ಲ.
ಬಡ್ತಿ ಹೊಂದಿ ಅಧಿಕಾರ ಅನುಭವಿಸಬೇಕಾದ ಮೂಲ ಸಿಬ್ಬಂದಿ ಒಳಗೊಳಗೆ ತಮ್ಮ ನೋವು-ಬೇಸರವನ್ನು ನುಂಗಿಕೊಂಡು ನಿವೃತ್ತಿಯಾಗುತ್ತಿದ್ದಾರೆ.
ಇದೀಗ ಕೆಲವರು ಮೂಲ ಸಿಬ್ಬಂದಿ ಎಚ್ಚೆತ್ತುಕೊಂಡು ಮಾತೃ ಇಲಾಖೆಗೆ ತೆರಳದ ಸಿಬ್ಬಂದಿ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.