ಸವಿತಾ ಸಮಾಜಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ

ಬೆಂಗಳೂರು, ಆ.2- ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಸವಿತಾ ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶಕ್ತಿ ತುಂಬಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ತಿಳಿಸಿದರು.

ನಗರದ ಜೆಪಿ ಭವನದಲ್ಲಿಂದು ಆಯೋಜಿಸಿದ್ದ ಸವಿತಾ ಸಮಾಜ ಮುಖಂಡರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ಸವಿತಾ ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದರು. ಆದರೆ ಇನ್ನೂ ಉದ್ಯೋಗ ಮತ್ತು ರಾಜಕೀಯ ಮೀಸಲಾತಿ ಈ ಸಮುದಾಯಕ್ಕೆ ಸಿಕ್ಕಿಲ್ಲ ಎಂದು ಹೇಳಿದರು.

ಸಂಖ್ಯೆ ಕಡಿಮೆಯಿದ್ದರು, ರಾಜಕೀಯ ಬದಲಾವಣೆಗೆ ಸಮುದಾಯಕ್ಕೆ ಶಕ್ತಿ-ಸಾಮಥ್ರ್ಯಯಿದೆ. ಹಾಗಿದ್ದು ಸೂಕ್ತ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. 1994ರಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಸಂಪುಟಕ್ಕೆ ಹಿಂದುಳಿದ ವರ್ಗದವರನ್ನೇ ಸೇರ್ಪಡೆ ಮಾಡಿಕೊಂಡು ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಕೆಲಸ ಮಾಡಿದ್ದರು, ಒಳ ಮೀಸಲಾತಿ ಹೋರಾಟ ಇನ್ನು ನಡೆಯುತ್ತಿದೆ ಎಂದರು.

ಕುಮಾರಸ್ವಾಮಿ ಮತ್ತು ದೇವೇಗೌಡರ ಕೈ ಬಲಪಡಿಸಲು ಹಾಗೂ ಪಕ್ಷ ಕಟ್ಟಿ ಬೆಳೆಸಲು ಎಲ್ಲರೂ ಕೈ ಜೋಡಿಸುವ ಅಗತ್ಯವಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸವಿತಾ, ಉಪ್ಪಾರ ಸೇರಿದಂತೆ ಪ್ರತಿಯೊಂದು ಸಮಾಜವನ್ನು ಗುರುತಿಸುವ ಕೆಲಸ ಮಾಡಿದ್ಧಾರೆ. ಬಜೆಟ್‍ನಲ್ಲಿ ಅನುದಾನ ಒದಗಿಸಿದ್ದಾರೆ. ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮನವರಿಕೆ ಮಾಡಿ. ಪಕ್ಷ ಸಂಘಟನೆಗೆ ಮುಂದಾಗುವಂತೆ ಕರೆ ನೀಡಿದರು.

ಸವಿತಾ ಸಮಾಜ ಮುಖಂಡ ಎಮ್.ನರಸಿಂಹ ಮಾತನಾಡಿ, ಸಮುದಾಯದ ನಿಗಮ ಸ್ಥಾಪಿಸಿದ್ದ ಕುಮಾರಸ್ವಾಮಿಯವರು ಬಜೆಟ್‍ನಲ್ಲಿ ಇದಕ್ಕಾಗಿ 20ಕೋಟಿ ರೂ.ಗಳನ್ನು ಮೀಸಲಿರಿಸಿದ್ದರು ಎಂದು ಹೇಳಿದರು.

ಇಂದು ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ಗೋವಿಂದರಾಜನಗರ, ವಿಜಯನಗರ, ಯಶವಂತಪುರ, ಆರ್‍ಆರ್‍ನಗರ, ಬಸವನಗುಡಿ, ಮಹಾಲಕ್ಷ್ಮೀ ಲೇಔಟ್ ಸೇರಿದಂತೆ ವಿವಿಧ ಕ್ಷೇತ್ರದ ಮುಖಂಡರು ಪಕ್ಷಕ್ಕೆ ಸೇರ್ಪಡೆಯಾದರು.

ಬೆಂಗಳೂರು ನಗರ ಘಟಕ ಅಧ್ಯಕ್ಷ ಆರ್.ಪ್ರಕಾಶ್, ಮಹಿಳಾ ಘಟಕದ ಅಧ್ಯಕ್ಷೆ ರೂತ್‍ಮನೋರಮಾ, ಶರವಣ ಮುಖಂಡರಾದ ಹರೀಶ್ ಪಾಲ್ಗೊಂಡಿದ್ದರು.

ಮೈತ್ರಿ ಸರ್ಕಾರ ಬಜೆಟ್‍ನಲ್ಲಿ ಸವಿತಾ ಸಮಾಜಕ್ಕೆ 20ಕೋಟಿ ರೂಪಾಯಿ ಅನುದಾನ ಒದಗಿಸಿದ್ದು, ಬಿಜೆಪಿ ಸರ್ಕಾರ ಅದನ್ನು ಕಡಿತ ಮಾಡಿದ್ದರ ಹೋರಾಟ ಮಾಡುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದ್ದಾರೆ.

ಜೆಪಿ ಭವನದಲ್ಲಿ ಇಂದು ನಡೆದ ಸವಿತಾ ಸಮಾಜದ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ