ಟಿಪ್ಪು ಜಯಂತಿ ರದ್ದು ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು,ಜು.30- ಈ ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಟಿಪ್ಪು ಜಯಂತಿ ಆಚರಣೆಯನ್ನು ಪ್ರಸಕ್ತ ವರ್ಷದಿಂದಲೇ ರದ್ದು ಮಾಡಿದ ರಾಜ್ಯ ಸರ್ಕಾರ. ಈ ಸಂಬಂಧ ಸಿಎಂ ಯಡಿಯೂರಪ್ಪನವರಿಗೆ ಶಾಸಕ ಬೋಪಯ್ಯನವರು ಪತ್ರ ಬರೆದಿದ್ದರು, ನವೆಂಬರ್ 10ರಂದು ಈ ಹಿಂದೆ ರಾಜ್ಯ ಸರ್ಕಾರದ ವತಿಯಿಂದ ಟಿಪ್ಪು ಜಯಂತಿಯನ್ನು ಆಚರಣೆ ಮಾಡಲಾಗುತ್ತಿತ್ತು. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿ ಅನೇಕ ಕಡೆ ಗಲಭೆಗಳು ಸಂಭವಿಸಿವೆ.

ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಈ ವರ್ಷದಿಂದ ಟಿಪ್ಪು ಜಯಂತಿಯನ್ನು ಆಚರಣೆ ಮಾಡಬಾರದು. ತಕ್ಷಣವೇ ರದ್ದುಪಡಿಸಿ ಆದೇಶ ಹೊರಡಿಸಬೇಕೆಂದು ಬೋಪಯ್ಯನವರು ಪತ್ರದಲ್ಲಿ ಬರೆದಿದ್ದರು.

ಟಿಪ್ಪು ಜಯಂತಿ ಆಚರಣೆ ಮಾಡುವುದರಿಂದ ಮತ್ತೆ ಹಿಂದೆ ನಡೆದ ಘಟನಾವಳಿಗಳೇ ಮರುಕಳಿಸಿದರೂ ಆಶ್ಚರ್ಯವಲ್ಲ. ಇದು ಕೇವಲ ಒಂದು ಸಮುದಾಯವನ್ನು ಓಲೈಕೆ ಮಾಡುವ ಕಾರಣಕ್ಕಾಗಿ ಆಚರಣೆಗೆ ತರಲಾಗಿತ್ತು.

ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕಾರಾವಧಿಯಲ್ಲಿ ಪ್ರತಿ ವರ್ಷ ನ.10ರಂದು ಟಿಪ್ಪು ಜಯಂತಿಯನ್ನು ರಾಜ್ಯ ಸರ್ಕಾರದ ವತಿಯಿಂದ ಆಚರಣೆ ಮಾಡಲಾಗುತ್ತಿತ್ತು. ಆದರೆ ಇದಕ್ಕೆ ಬಿಜೆಪಿ ಸೇರಿದಂತೆ ಆರ್‍ಎಸ್‍ಎಸ್ ಬೆಂಬಲಿತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.

ಮಡಿಕೇರಿಯಲ್ಲಿ ಸಂಭವಿಸಿದ ಎರಡು ಸಮುದಾಯಗಳ ನಡುವಿನ ಗಲಭೆಯಲ್ಲಿ ವಿಎಚ್‍ಪಿ ಕಾರ್ಯಕರ್ತ ಕುಟ್ಟಪ್ಪ ಎಂಬುವರು ಸಾವನ್ನಪ್ಪಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ