ಗಿಲ್‍ರಾಯ್(ಅಮೆರಿಕ), ಜು.29-ವಾರ್ಷಿಕ ಆಹಾರೋತ್ಸವದ ವೇಳೆ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಹತರಾಗಿ, ಇತರ 12 ಮಂದಿ ಗಾಯಗೊಂಡಿರುವ ಘಟನೆ ಅಮೆರಿಕದ ಉತ್ತರ ಕ್ಯಾಲಿಪೋರ್ನಿಯಾದಲ್ಲಿ ನಡೆದಿದೆ.
ಸ್ಯಾನ್ ಫ್ರಾನ್ಸಿಸ್ಕೋದಿಂದ 176 ಕಿ.ಮೀ ದೂರದ 50,000 ಜನರ ವಸತಿ ನಗರ ಗಿಲ್‍ರಾಯ್‍ನಲ್ಲಿ ಬೆಳ್ಳುಳ್ಳಿ ಆಹಾರೋತ್ಸವ ಆಯೋಜಿಸಲಾಗಿತ್ತು. ಮೂರು ದಿನಗಳ ಈ ಉತ್ಸವದಲ್ಲಿ ಆಹಾರ ತಯಾರಿಸುವ ಸ್ಪರ್ಧೆ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯುತ್ತಿತ್ತು. ಕೊನೆ ದಿನವಾದ ನಿನ್ನೆ ಸುಮಾರು ಒಂದು ಲಕ್ಷ ಮಂದಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಬಂದೂಕುಧಾರಿಯೊಬ್ಬ ಹಾರಿಸಿದ ಗುಂಡಿಗೆ ನಾಲ್ವರು ಹತರಾಗಿ 12ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡರು ಎಂದು ಗಿಲ್‍ರಾಯ್ ನಗರಸಭಾ ಸದಸ್ಯ ಡಿಯೋನ್ ಬ್ರಾಕೋ ತಿಳಿಸಿದ್ದಾರೆ.
ಈ ಗುಂಡಿನ ದಾಳಿ ನಂತರ ಅಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿ ಜನರು ದಿಕ್ಕಾಪಾಲಾಗಿ ಓಡಿದರು ಎಂದು ಉತ್ಸವದಲ್ಲಿ ಭಾಗವಹಿಸಿದ್ದ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಗಿಲ್‍ರಾಯ್ ಪಟ್ಟಣ ಪೋಲೀಸರು ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು, ಹಂತಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.