ಬೆಂಗಳೂರ: ಎಸ್ಎಂ ಕೃಷ್ಣ ಅಳಿಯ ಹಾಗೂ ಕೆಫೆ ಕಾಫಿ ಡೇ ಮುಖ್ಯಸ್ಥ ಸಿದ್ಧಾರ್ಥ್ ಹೆಗ್ಡೆ ಕಾಣೆಯಾಗಿ 14 ಗಂಟೆ ಕಳೆದರೂ ಅವರ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ. ಸದ್ಯ, ಮೂರು ವಿಶೇಷ ತಂಡಗಳು ಸಿದ್ಧಾರ್ಥ್ಗಾಗಿ ಹುಡುಕಾಟ ನಡೆಸುತ್ತಿವೆ.
ಉದ್ಯಮಕ್ಕೆ ಸಂಬಂಧಿಸಿದ ಕೆಲಸ ಎಂದು ಹೇಳಿ ಡ್ರೈವರ್ ಬಸವರಾಜು ಜೊತೆ ಸಿದ್ಧಾರ್ಥ್ ಮಂಗಳೂರಿಗೆ ತೆರಳುತ್ತಿದ್ದರು. ಕಾರಿನಲ್ಲಿ ತೆರಳುವಾಗ ಸಿದ್ಧಾರ್ಥ್ ಮೊಬೈಲ್ನಲ್ಲಿ ಮಾತನಾಡುತ್ತಲೇ ಇದ್ದರಂತೆ. ಮಂಗಳೂರಿನ ಉಳ್ಳಾಲ ಸಮೀಪ ಇರುವ ಒಂದು ಕಿ.ಮೀ ಉದ್ದದ ಬ್ರಿಡ್ಜ್ ಮೇಲೆ ಅವರು ಇಳಿದಿದ್ದರು.
ಚಾಲಕನ ಬಳಿ ಕಾರಿನಲ್ಲೇ ಇರುವಂತೆ ಸೂಚಿಸಿದ ಸಿದ್ಧಾರ್ಥ್ ಮೊಬೈಲ್ನಲ್ಲಿ ಮಾತನಾಡುತ್ತಾ ಸಾಗಿದ್ದರು. ಬ್ರಿಡ್ಜ್ನ ಮತ್ತೊಂದು ತುದಿಯಿಂದ ಬರುವಾಗ ಅವರು ಕಾಣೆಯಾಗಿದ್ದಾರೆ.
ಸಿದ್ಧಾರ್ಥ್ ನಾಪತ್ತೆಯಾದ ಬೆನ್ನಲ್ಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಳೆದ 15 ದಿನಗಳಿಂದ ಅವರು ಯಾರ್ಯಾರಿಗೆ ದೂರವಾಣಿ ಕರೆ ಮಾಡಿದ್ದಾರೆ ಎಂಬುದರ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಸದ್ಯ ಅವರ ಪತ್ತೆಗೆ ಮೂರು ವಿಶೇಷ ತಂಡ ನೇಮಕ ಮಾಡಲಾಗಿದೆ. 14 ಗಂಟೆಗಳ ಕಾಲ ಸಿದ್ಧಾರ್ಥ್ಗಾಗಿ ಹುಡುಕಾಟ ನಡೆಸಿದ್ದರೂ ಎಲ್ಲಿ ಹೋದರು ಎಂಬುದರ ಬಗ್ಗೆ ಒಂದೇ ಒಂದು ಸುಳಿವು ಕೂಡ ಸಿಕ್ಕಿಲ್ಲ.
ಇನ್ನು, ಎಸ್.ಎಂ. ಕೃಷ್ಣ ಕುಟುಂಬದ ನಿಗೂಢ ನಡೆ ಪೊಲೀಸರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸಿದ್ಧಾರ್ಥ್ ಅವರ ಇತ್ತೀಚಿನ ವ್ಯವಹಾರ,ಉದ್ಯಮದಲ್ಲಿ ಸಾವಿರಾರು ಕೋಟಿ ನಷ್ಟ ಉಂಟಾಗಿದೆ ಎನ್ನಲಾಗಿದೆ. ಈ ಬಗ್ಗೆ ಎಸ್.ಎಂ .ಕೆ ಕುಟುಂಬ ತುಟಿ ಬಿಚ್ಚಿಲ್ಲ. ಅವರ ಈ ಮೌನ ಪೊಲೀಸರಿಗೆ ತಲೆ ನೋವಾಗಿದೆ.
ಸಿದ್ಧಾರ್ಥ್ ಉದ್ಯಮದಲ್ಲಿ ಗುರುತಿಸಿಕೊಂಡವರು. ಕಾಫಿ ಬೆಳೆಯುವ ಕುಟುಂಬದ ಹಿನ್ನೆಲೆಯಿಂದ ಬಂದ ಅವರು ತಮ್ಮ ಹೊಸ ಹೊಸ ಯೋಜನೆಗಳಿಂದ ಅದನ್ನು ದೊಡ್ಡ ಉದ್ಯಮವನ್ನಾಗಿಸಿದರು. 1990ರಲ್ಲಿ ಕೆಫೆ ಕಾಫಿ ಡೇ ಆರಂಭಿಸಿದ್ದರು. ಇತ್ತೀಚೆಗೆ ಮೈಂಡ್ ಟ್ರೀನಲ್ಲಿದ್ದ ಶೇರುಗಳನ್ನು ಸಿದ್ಧಾರ್ಥ್ ಮಾರಾಟ ಮಾಡಿದ್ದರು. ಕೋಕಾ-ಕೋಲಾ ಸಂಸ್ಥೆಗೆ ಸಿಸಿಡಿ ಮಾರಾಟ ಮಾಡುವ ಉದ್ದೇಶವನ್ನೂ ಸಿದ್ಧಾರ್ಥ್ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.