ತುಮಕೂರು, ಜು.29- ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬ ಸದಸ್ಯರು ವಿಶೇಷ ಪೂಜೆ ಹಾಗೂ ಹರಕೆ ಸಲ್ಲಿಸಿದರು.
ಯಡಿಯೂರಪ್ಪ ಅವರ ಮನೆ ದೇವರಾದ ಯಡಿಯೂರು ಸಿದ್ದಲಿಂಗೇಶ್ವರನಿಗೆ ಇಂದು ಮುಂಜಾನೆಯಿಂದಲೇ ಹಾಲಿನ ಅಭಿಷೇಕ, ಬೆಳ್ಳಿ ರಥೋತ್ಸವ, ಅಷ್ಟೋತ್ತರ ಸೇವೆ ಹಾಗೂ ರಾಜೋಪಚಾರಗಳನ್ನು ಯಡಿಯೂರಪ್ಪ ಅವರ ಪುತ್ರಿ ಪದ್ಮಾದೇವಿ, ಸೊಸೆ ಪ್ರೇಮಾ ವಿಜಯೇಂದ್ರ , ಮೊಮ್ಮಗ ಸುಭಾಷ್ ಸೇರಿದಂತೆ ಇನ್ನಿತರ ಕುಟುಂಬ ಸದಸ್ಯರು ಪೂಜೆಯಲ್ಲಿ ಪಾಲ್ಗೊಂಡು ಹರಕೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುತ್ರಿ ಪದ್ಮಾದೇವಿ ಇಂದು ನಡೆಯುವ ವಿಶ್ವಾಸ ಮತದಲ್ಲಿ ನಮ್ಮ ತಂದೆಯವರಿಗೆ ಯಶಸ್ಸು ಸಿಗಲೆಂದು ಪೂಜೆ ಸಲ್ಲಿಸಲಾಗಿದೆ. ಈ ಬಾರಿ ಅವರು ವಿಶ್ವಾಸ ಮತದಲ್ಲಿ ಭರ್ಜರಿ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.
ಪಕ್ಷದ ಎಲ್ಲಾ ಸದಸ್ಯರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದೇ ಅಲ್ಲದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹಾದಿಯಲ್ಲಿ ನಡೆದು ರಾಜ್ಯದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತಾರೆ. ರಾಜ್ಯದ ಸಮಸ್ಯೆಗಳನ್ನು ಬಗೆಹರಿಸಿ ರೈತರ ಪರ ಆಡಳಿತ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಡೀ ದೇಶಕ್ಕೆ ಮಾದರಿಯಾಗುವಂತಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಾರೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ. ವಿರೋಧ ಪಕ್ಷದ ಸ್ಥಾನದಲ್ಲಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಸಹ ಅವರಿಗೆ ಬೆಂಬಲ ನೀಡಿದರೆ ರಾಜ್ಯದ ಅಭಿವೃದ್ಧಿ ಸಾಧ್ಯ. ಈಗಾಗಲೇ ಭೀಕರ ಬರಗಾಲದಿಂದಾಗಿ ರೈತರು ಹಲವಾರು ಸಂಕಷ್ಟಗಳಿಂದ ತತ್ತರಿಸಿ ಹೋಗಿದ್ದಾರೆ.
ಈ ಪರಿಸ್ಥಿತಿಯಲ್ಲಿ ಪರಸ್ಪರ ರಾಜಕೀಯ ಪಕ್ಷಗಳು ಕಚ್ಚಾಡುವುದಕ್ಕಿಂತ ಪಕ್ಷ ಭೇದ ಮರೆತು ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಚುನಾವಣೆ ಸಂದರ್ಭದಲ್ಲಿ ಮಾತ್ರ ವೈರಿಗಳಂತೆ ಕೆಲಸ ಮಾಡಬೇಕು. ನಂತರ ಜನರ ಪರವಾಗಿ ಕೆಲಸ ಮಾಡಬೇಕು. ಆಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ಸಲ್ಲುತ್ತದೆ ಎಂದು ಹೇಳಿದರು.