14 ಅತೃಪ್ತ ಶಾಸಕರ ಅನರ್ಹಗೊಳಿಸಿದ ಸ್ಪೀಕರ್

ಬೆಂಗಳೂರು, ಜು.28- ವಿಪ್ ಉಲ್ಲಂಘಿಸಿ ಅಧಿವೇಶನಕ್ಕೆ ಗೈರು ಹಾಜರಾಗಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ಕಾಂಗ್ರೆಸ್‍ನ 11 ಮತ್ತು ಜೆಡಿಎಸ್‍ನ ಮೂವರು ಸೇರಿ ಒಟ್ಟು 14 ಶಾಸಕರನ್ನು ಎರಡನೇ ಹಂತದಲ್ಲಿ ಸ್ಪೀಕರ್ ರಮೇಶ್‍ಕುಮಾರ್ ಅವರು ಇಂದು ಅನರ್ಹಗೊಳಿಸಿದ್ದಾರೆ. ಮೊದಲ ಹಂತದಲ್ಲಿ ಮೂವರು ಶಾಸಕರು ಅನರ್ಹಗೊಳಿಸಲಾಗಿತ್ತು.ಇದರಿಂದ ಕರ್ನಾಟಕ ವಿಧಾನಸಭೆಯ ಒಟ್ಟು 17 ಶಾಸಕರು ಅನರ್ಹಗೊಂಡಂತಾಗಿದೆ.

ಕಾಂಗ್ರೆಸ್ ಶಾಸಕರಾದ ಮಸ್ಕಿ ಕ್ಷೇತ್ರದ ಪ್ರತಾಪ್‍ಗೌಡ ಪಾಟೀಲ್, ಹಿರೇಕೆರೂರಿನ ಬಿ.ಸಿ.ಪಾಟೀಲ್, ಯಲ್ಲಾಪುರದ ಅರೆಬೈಲು ಶಿವರಾಮ್‍ಹೆಬ್ಬಾರ್, ಯಶವಂತಪುರದ ಎಸ್.ಟಿ.ಸೋಮಶೇಖರ್, ಕೆ.ಆರ್.ಪುರಂನ ಬೈರತಿ ಬಸವರಾಜ್, ವಿಜಯನಗರದ ಆನಂದ್‍ಸಿಂಗ್, ಶಿವಾಜಿನಗರದ ಆರ್.ರೋಷನ್ ಬೇಗ್, ರಾಜರಾಜೇಶ್ವರಿನಗರದ ಮುನಿರತ್ನ, ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ್, ಹೊಸಕೋಟೆಯ ಎಂ.ಟಿ.ಬಿ.ನಾಗರಾಜ್, ಕಾಗವಾಡದ ಶ್ರೀಮಂತ್‍ಬಾಳ ಸಾಹೇಬ ಪಾಟೀಲ್, ಜೆಡಿಎಸ್‍ನ ಹುಣಸೂರು ಕ್ಷೇತ್ರದ ಎಚ್.ವಿಶ್ವನಾಥ್, ಕೆ.ಆರ್.ಪೇಟೆ ಕ್ಷೇತ್ರದ ನಾರಾಯಣಗೌಡ, ಮಹಾಲಕ್ಷ್ಮಿ ಲೇಔಟ್‍ನ ಕೆ.ಗೋಪಾಲಯ್ಯ ಅವರುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ 15ನೇ ವಿಧಾನಸಭೆಯ ಅವಧಿ ಮುಕ್ತಾಯಗೊಳ್ಳುವವರೆಗೆ ಅಂದರೆ 2023ರವರೆಗೆ ಅನರ್ಹಗೊಳಿಸಲಾಗಿದೆ ಎಂದು ಸ್ಪೀಕರ್ ರಮೇಶ್‍ಕುಮಾರ್ ಅವರು ಶಾಸಕರ ಭವನದಲ್ಲಿಂದು ತುರ್ತು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಸದರಿ ಶಾಸಕರು ವಿಧಾನಸಭೆಯ ಅಧಿವೇಶನದಲ್ಲಿ ಭಾಗವಹಿಸದೆ ಸರ್ಕಾರದ ಪತನಕ್ಕೆ ಕಾರಣರಾಗಿದ್ದು, ಸಂವಿಧಾನದ ಪರಿಚ್ಛೇದ 10ರಡಿ ರಚನೆಯಾಗಿರುವ ಪಕ್ಷಾಂತರ ನಿಷೇಧ ಕಾಯ್ದೆಯ ಉದ್ದೇಶವನ್ನು ನಿರರ್ಥಕಗೊಳಿಸಿದ್ದಾರೆ. ಹೀಗಾಗಿ ಇವರನ್ನು ಕಾಯ್ದೆಯ ಅನುಸಾರ ಅನರ್ಹಗೊಳಿಸಬೇಕೆಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಸ್ಪೀಕರ್ ಅವರಿಗೆ ದೂರು ನೀಡಿದ್ದರು.

ಪ್ರತಾಪ್‍ಗೌಡ ಪಾಟೀಲ್, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್, ಎಸ್.ಟಿ.ಸೋಮಶೇಖರ್, ಬಿ.ಎ.ಬಸವರಾಜ್, ಆನಂದ್‍ಸಿಂಗ್, ರೋಷನ್‍ಬೇಗ್, ಮುನಿರತ್ನ ಅವರ ವಿರುದ್ಧ ಜುಲೈ 10ರಂದು ಸಿದ್ದರಾಮಯ್ಯ ಮತ್ತು ದಿನೇಶ್‍ಗುಂಡೂರಾವ್ ಅವರು ಮೂರನೇ ಅರ್ಜಿಯಲ್ಲಿ ದೂರು ನೀಡಿದ್ದರು. ಜುಲೈ 11ರಂದು ನಾಲ್ಕನೇ ಅರ್ಜಿಯಲ್ಲಿ ಡಾ.ಕೆ.ಸುಧಾಕರ್, ಎಂ.ಟಿ.ಬಿ.ನಾಗರಾಜ್ ವಿರುದ್ಧ, ಜುಲೈ 20ರಂದು 8ನೇ ಅರ್ಜಿಯಲ್ಲಿ ಶ್ರೀಮಂತ್‍ಬಾಳ ಸಾಹೇಬ್ ಪಾಟೀಲ್ ವಿರುದ್ಧ ದೂರು ನೀಡಲಾಗಿತ್ತು.

ಕುಮಾರಸ್ವಾಮಿ ಅವರು ಐದನೇ ಅನರ್ಹತೆ ಅರ್ಜಿಯಲ್ಲಿ ಎಚ್.ವಿಶ್ವನಾಥ್, ಗೋಪಾಲಯ್ಯ ಮತ್ತು ನಾರಾಯಣಗೌಡ ವಿರುದ್ಧ ದೂರು ನೀಡಿದ್ದರು.

ದೂರು ಆಧರಿಸಿ ಜುಲೈ 18ರಂದು ಎಲ್ಲರಿಗೂ ನೋಟಿಸ್ ನೀಡಿ ಮೂರು ದಿನಗಳ ಒಳಗಾಗಿ ಉತ್ತರಿಸಬೇಕು ಮತ್ತು ಜು.22ರಂದು ನಡೆದ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಲಾಗಿತ್ತು. ಆದರೆ, ಯಾವ ಶಾಸಕರೂ ಖುದ್ದು ಹಾಜರಾಗದೆ ವಕೀಲರ ಮೂಲಕ ವಾದ ಮಂಡಿಸಿ ನಾಲ್ಕು ವಾರಗಳ ಕಾಲಾವಕಾಶ ಕೇಳಿದ್ದರು.ಇದನ್ನು ತಿರಸ್ಕರಿಸಲಾಗಿದೆ.

ಜುಲೈ 23ರಂದು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಸರ್ಕಾರದ ವಿಶ್ವಾಸ ಮತಯಾಚನೆಗೆ ಸದರಿ ಶಾಸಕರು ಗೈರು ಹಾಜರಾಗಿದ್ದರು.

ಹೀಗಾಗಿ ಎಲ್ಲಾ ಶಾಸಕರ ವಿರುದ್ಧ ಸೆಕ್ಷನ್ 191(2) ರ ಅನುಸಾರ ಕ್ರಮ ಕೈಗೊಳ್ಳಲಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಅನರ್ಹಗೊಳಿಸಲಾಗಿದೆ. 15ನೇ ವಿಧಾನಸಭೆ ಅವಧಿ ಮುಗಿಯುವವರೆಗೂ ಈ ಶಾಸಕರ ಅನರ್ಹತೆ ಚಾಲ್ತಿಯಲ್ಲಿರುತ್ತದೆ.

ಅನರ್ಹಗೊಂಡಿರುವವರ ಪೈಕಿ ಪ್ರತಾಪ್‍ಗೌಡ ಪಾಟೀಲ್, ಬಿ.ಸಿ.ಪಾಟೀಲ್, ಅರೆಬೈಲು ಶಿವರಾಮ್ ಹೆಬ್ಬಾರ್, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್, ಮುನಿರತ್ನ, ಎಂ.ಟಿ.ಬಿ.ನಾಗರಾಜ್, ವಿಶ್ವನಾಥ್, ನಾರಾಯಣಗೌಡ ಅವರು ಮುಂಬೈನ ಖಾಸಗಿ ಹೋಟೆಲ್‍ನಲ್ಲಿ ತಂಗಿದ್ದು, ಆನಂದ್‍ಸಿಂಗ್ ಮತ್ತು ಸುಧಾಕರ್ ಅಜ್ಞಾತ ಸ್ಥಳದಲ್ಲಿದ್ದಾರೆ. ರೋಷನ್ ಬೇಗ್ ಅವರು ಬೆಂಗಳೂರಿನಲ್ಲೇ ಇದ್ದು ಅಧಿವೇಶನಕ್ಕೆ ಗೈರು ಹಾಜರಾಗಿದ್ದರು.

ಶ್ರೀಮಂತ್ ಪಾಟೀಲ್ ಅವರ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸ್ಪೀಕರ್ ರಮೇಶ್‍ಕುಮಾರ್, ಅವರು ಆಸ್ಪತ್ರೆಗೆ ದಾಖಲಾಗಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ದಾಖಲೆಗಳಲ್ಲಿ ಖಚಿತಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

ಪಕ್ಷಾಂತರ ನಿಷೇಧ ಕಾಯ್ದೆ ಇನ್ನಷ್ಟು ಬಲಗೊಳ್ಳುವ ಅಗತ್ಯ ಇದೆ.ಎಲ್.ಕೆ.ಅಡ್ವಾಣಿ, ಸೋಮನಾಥ ಚಟರ್ಜಿ, ಮಧುದಂಡವತಿಯಂತಹ ಮಹಾನೀಯರು ಇದ್ದ ಸಂಸದೀಯ ವ್ಯವಸ್ಥೆಯಲ್ಲಿ ನಾವಿದ್ದೇವೆ. ಆದರೆ, ನಾವು ಯಾವ ಸ್ಥಿತಿಯಲ್ಲಿದ್ದೇವೆ ಎಂಬುದನ್ನು ನೆನೆಸಿಕೊಂಡರೆ ಭಯವಾಗುತ್ತದೆ.ನಾನು ಅತ್ಯಂತ ಭಯ, ಗೌರವ ಹಾಗೂ ಜವಾಬ್ದಾರಿಯಿಂದ ತೀರ್ಪು ನೀಡಿದ್ದೇನೆ. ಪ್ರತಿಯೊಂದು ಪ್ರಕರಣಗಳನ್ನು ವಿಶ್ಲೇಷಿಸಿ ಸಕಾರಣದೊಂದಿಗೆ ತೀರ್ಪು ಬರೆಯಲಾಗಿದೆ ಎಂದರು.
ಅನರ್ಹಗೊಂಡವರು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‍ಗೆ ಹೋಗಿ ನನ್ನ ತೀರ್ಪುನ್ನು ಪ್ರಶ್ನಿಸಲು ಮುಕ್ತ ಸ್ವಾತಂತ್ರ್ಯಹೊಂದಿದ್ದಾರೆ.ಅವರು ಯಾವುದೇ ಆರೋಪ ಮಾಡಿದರೂ ಅದಕ್ಕೆ ಉತ್ತರ ಕೊಡುವ ಅಗತ್ಯವಿಲ್ಲ ಎಂದು ಹೇಳಿದರು.

ಅಮೆರಿಕಾದಲ್ಲಿ 1893ರ ಸುಮಾರಿನಲ್ಲಿ ಕಳಪೆ ಕುದುರೆಗಳ ಲೋಪ ಮುಚ್ಚಿಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಿಸುವುದು, ಉತ್ತಮ ಕುದುರೆಗಳ ಬೆಲೆಯನ್ನು ಅಪಮೌಲ್ಯಗೊಳಿಸಿ ಕಡಿಮೆ ಬೆಲೆಗೆ ಮಾರಾಟ ಮಾಡಿಸುವ ದಲ್ಲಾಳಿಗಳ ವ್ಯಾಪಾರಕ್ಕೆ ಹಾರ್ಸ್‍ಟ್ರೇಡಿಂಗ್ ಎಂಬ ಹೆಸರು ಬಂದಿತ್ತು. ಅದನ್ನು ಶಾಸಕರಿಗೆ ಬಳಸುತ್ತಿರುವುದು ದುರ್ದೈವ. ಕರ್ನಾಟಕದಲ್ಲಿ ವೀರೇಂದ್ರಪಾಟೀಲ್ ಅವರ ಸರ್ಕಾರ ಪತನಗೊಳ್ಳುವ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ದೇವರಾಜ ಅರಸು ಅವರು ಮೊದಲ ಬಾರಿಗೆ ಶಾಸಕರ ಕುದುರೆ ವ್ಯಾಪಾರವನ್ನು ಪ್ರಸ್ತಾಪಿಸಿದ್ದರು ಎಂದು ರಮೇಶ್‍ಕುಮಾರ್ ಇದೇ ಸಂದರ್ಭದಲ್ಲಿ ವಿಶ್ಲೇಷಿಸಿದರು.

ಬಿಎಸ್‍ಪಿ ಮಹೇಶ್ ವಿರುದ್ಧವೂ ದೂರು:
ಕುಮಾರಸ್ವಾಮಿ ಅವರ ಸರ್ಕಾರದ ವಿಶ್ವಾಸಮತಯಾಚನೆಗೆ ಗೈರು ಹಾಜರಾಗಿದ್ದ ಬಿಎಸ್‍ಪಿ ಶಾಸಕ ಎನ್.ಮಹೇಶ್ ವಿರುದ್ಧ ಸ್ಪೀಕರ್ ಅವರಿಗೆ ದೂರು ಸಲ್ಲಿಸಲಾಗಿದೆ.

ನಿನ್ನೆ ರಾತ್ರಿ ಬಿಎಸ್‍ಪಿ ಪಕ್ಷದಿಂದ ದೂರು ಸಲ್ಲಿಕೆಯಾಗಿದ್ದು, ಯಾವ ಸ್ವರೂಪದಲ್ಲಿದೆ ಎಂಬುದು ನನಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ನಾಳೆ ನಡೆಯಲಿರುವ ಅಧಿವೇಶನದ ತಯಾರಿ ಮತ್ತು ಬಾಕಿ ಇದ್ದ ಶಾಸಕರ ಅನರ್ಹತೆ ಪ್ರಕರಣಗಳ ತೀರ್ಪು ಬರೆಯುವುದರಲ್ಲಿ ನಾನು ತೊಡಗಿದ್ದೆ.ಮಹೇಶ್ ಅವರ ವಿರುದ್ಧ ದಾಖಲಾಗಿರುವ ದೂರನ್ನು ಇನ್ನೂ ಪರಿಶೀಲನೆ ಮಾಡಿಲ್ಲ ಎಂದು ಸ್ಪೀಕರ್ ರಮೇಶ್‍ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ