ನವದೆಹಲಿ, ಜು. 27- ಕರ್ನಾಟಕದ ರಾಜ್ಯದಲ್ಲಿ ಶುದ್ಧ ಹಾಗೂ ಪಾರದರ್ಶಕ ಆಡಳಿತ ನೀಡಲು ಬಿಜೆಪಿ ಬದ್ಧವಾಗಿದೆ ಎಂದು ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಭರವಸೆ ನೀಡಿದ್ದಾರೆ.
ಕರ್ನಾಟಕದಲ್ಲಿ 14 ತಿಂಗಳು ಕಾಲ ಆಡಳಿತ ನಡೆಸಿದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಂತಃಕಲಹ ಮತ್ತು ದುರಾಡಳಿತದಿಂದ ಪತನಗೊಂಡಿತು ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಎರಡನೆಯ ಅವಧಿಗೆ ಆಡಳಿತ ನಡೆಸುತ್ತಿರುವ ಎನ್ ಡಿಎ ಸರ್ಕಾರ 50 ದಿನ ಪೂರೈಸಿರುವ ಹಿನ್ನೆಲೆಯಲ್ಲಿ, ಜೆ.ಪಿ.ನಡ್ಡಾ, ಸರ್ಕಾರವನ್ನು ಶ್ಲಾಘಿಸಿದ್ದು, ರೈತರು, ಗ್ರಾಮೀಣ ಭಾಗದ ಬಡವರು ಹಾಗೂ ಮಹಿಳೆಯರ ಸಶಕ್ತೀಕರಣಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.
ಪ್ರಧಾನಿ ಮೋದಿ ಸರ್ಕಾರದ ಪ್ರಗತಿ ವರದಿ ನೀಡಿ ಮಾತನಾಡಿದ ನಡ್ಡಾ, ಸಾಮಾನ್ಯವಾಗಿ 100 ದಿನ ಪೂರೈಸಿದ ನಂತರ ಮೆಚ್ಚುಗೆಗೆ ಪಾತ್ರವಾಗುವ ಕೆಲಸಗಳನ್ನು ಎನ್ ಡಿಎ ಸರ್ಕಾರ 50 ದಿನಗಳಲ್ಲೇ ಮಾಡಿದೆ ಎಂದರು.
ಐಆರ್ಎಸ್ನ ಕೆಲ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ಆದೇಶ ನೀಡಿರುವುದನ್ನು ಉಲ್ಲೇಖಿಸಿ, ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ ಹೊಂದಿರುವುದನ್ನು ಬಿಜೆಪಿ ಸಾಬೀತು ಪಡಿಸಿದೆ ಎಂದು ನಡ್ಡಾ ತಿಳಿಸಿದರು.