ಇಂದು ಭಾರತಕ್ಕೆ ಆಗಮಿಸಲಿರುವ ನಾಲ್ಕು ಅಪಾಚೆ ಹೆಲಿಕಾಪ್ಟರ್

ನವದೆಹಲಿ, ಜು.27- ಭಾರತೀಯ ವಾಯುಪಡೆ ಸಾಮಥ್ರ್ಯಕ್ಕೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಅಮೆರಿಕದ ನಾಲ್ಕು ಎಎಚ್-64ಇ ಅಪಾಚೆ ಗಾರ್ಡಿಯನ್ ಅಟ್ಯಾಕ್ ಹೆಲಿಕಾಪ್ಟರ್‍ಗಳ ಮೊದಲ ತಂಡ ಇಂದು ಸಂಜೆ ಭಾರತಕ್ಕೆ ಆಗಮಿಸಲಿವೆ.

ಗಾಜಿಯಾಬಾಂದ್‍ನ ಹಿಂದೋನ್ ವಾಯುನೆಲೆಗೆ ಇಂದು ಸಂಜೆ ವೇಳೆಗೆ ಮೊದಲ ತಂಡದ ನಾಲ್ಕು ಹೆಲಿಕಾಪ್ಟರ್‍ಗಳು ಆಗಮಿಸಲಿವೆ ಎಂದು ವರದಿಗಳು ತಿಳಿಸಿವೆ.

ಭಾರತಕ್ಕೆ 930 ದಶಲಕ್ಷ ಡಾಲರ್‍ಗಳಿಗೆ ಆರು ಅಪಾಚೆ ದಾಳಿ ಹೆಲಿಕಾಪ್ಟರ್‍ಗಳನ್ನು ಮಾರಾಟ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಡಳಿತ ಅನುಮೋದನೆ ನೀಡಿತ್ತು. ಇದರೊಂದಿಗೆ ಭಾರತದ ಶಸ್ತ್ರಾಸ್ತ್ರ ಬಲಕ್ಕೆ ಹೊಸ ಅತ್ಯಾಧುನಿಕ ಅಸ್ತ್ರವೊಂದು ಸೇರ್ಪಡೆಯಾದಂತಾಗಿದೆ.

ತಾಯ್ನಾಡು ರಕ್ಷಣೆ ಹಾಗೂ ಪ್ರಾದೇಶಿಕ ಆತಂಕವನ್ನು ಸಮರ್ಥವಾಗಿ ಎದುರಿಸಲು ಭಾರತಕ್ಕೆ ಆರು ಎಎಚ್-64ಇ ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್‍ಗಳನ್ನು ಟ್ರಂಪ್ ಆಡಳಿತ ಮಾರಾಟ ಮಾಡಲು ಸಮ್ಮತಿ ನೀಡಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ಪೆಂಟಗನ್ ಈ ಹಿಂದೆ ತಿಳಿಸಿತ್ತು.

ಈ ಸಂಬಂಧ ವಿದೇಶಾಂಗ ಇಲಾಖೆ ನಿರ್ಧಾರವನ್ನು ಪೆಂಟಗನ್ ರಕ್ಷಣಾ ಭದ್ರತೆ ಸಹಕಾರ ಸಂಸ್ಥೆಯು ಅಮೆರಿಕ ಕಾಂಗ್ರೆಸ್‍ಗೆ ತಿಳಿಸಿದೆ. ಯಾವುದೇ ಸಂಸದರ ವಿರೋಧ ಇಲ್ಲದಿದ್ದರೆ ಅತಿ ಶೀಘ್ರದಲ್ಲೇ ಮಾರಾಟ ಪ್ರಕ್ರಿಯೆ ಆರಂಭವಾಗಲಿದೆ. ಆರು ಅಪಾಚೆ ಹೆಲಿಕಾಪ್ಟರ್‍ಗಳಲ್ಲದೆ, ಅಗ್ನಿ ನಿಯಂತ್ರಣ ರೇಡಾರ್‍ಗಳು, ಹೆಲ್ಟೇರ್ ಲಾಂಗ್ಬೋ ಕ್ಷಿಪಣಿಗಳು, ಸ್ಟಿಂಗರ್ ಬ್ಲಾಕ್ ಐ-92ಎಚ್ ಕ್ಷಿಪಣಿಗಳು, ಇರುಳು ದೃಶ್ಯ ಸೆನ್ಸೋರ್‍ಗಳು ಹಾಗೂ ವೈರಿಗಳನ್ನು ಗುರುತಿಸುವ ಮಾರ್ಗದರ್ಶಿ ವ್ಯವಸ್ಥೆಗಳ ಮಾರಾಟಕ್ಕೂ ಒಪ್ಪಂದವಾಗಿದೆ.

ಅಪಾಚೆ ದಾಳಿ ಹೆಲಿಕಾಪ್ಟರ್‍ಗಳು ಭೂ ಮಾರ್ಗವಾಗಿ ನಡೆಯುವ ಶತ್ರುಗಳ ಆಕ್ರಮಣವನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲು ಭಾರತದ ರಕ್ಷಣಾ ಸಾಮಥ್ರ್ಯ ಹೆಚ್ಚಿಸುತ್ತದೆ ಹಾಗೂ ಸಶಸ್ತ್ರ ಪಡೆಗಳನ್ನು ಆಧುನೀಕರಣಗೊಳಿಸಲು ನೆರವಾಗಲಿದೆ ಎಂದು ಭಾರತದ ರಕ್ಷಣಾ ಇಲಾಖೆ ಮತ್ತು ವಾಯುಪಡೆಯ ಉನ್ನತ ಅಧಿಕಾರಿಗಳು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ