ಬೆಂಗಳೂರು,ಜು.27- ನಿನ್ನೆಯಷ್ಟೇ ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಇಂದು ನವದೆಹಲಿಗೆ ತೆರಳಲಿದ್ದು, ಪ್ರಮುಖ ನಾಯಕರನ್ನು ಭೇಟಿಯಾಗಲಿದ್ದಾರೆ.
ಪ್ರಧಾನಿ ನರೇಂದ್ರಮೋದಿ, ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಕೇಂದ್ರ ಸಚಿವರು ಮತ್ತಿತರರನ್ನು ಭೇಟಿಯಾಗಿ ಮಾತುಕತೆ ನಡೆಸುವರು.
ಸಚಿವ ಸಂಪುಟ ವಿಸ್ತರಣೆ, ನೆನೆಗುದಿಗೆ ಬಿದ್ದಿರುವ ಯೋಜನೆಗಳ ಅನುಷ್ಠಾನ, ರಾಜ್ಯದಲ್ಲಿ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಕೇಂದ್ರದಿಂದ ವಿಶೇಷ ಆರ್ಥಿಕ ನೆರವು, ರೈಲ್ವೆ , ಮಹದಾಯಿ ಕುಡಿಯುವ ನೀರು ಯೋಜನೆ ಅನುಷ್ಠಾನ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ.
ಇದೇ ವೇಳೆ ತಮ್ಮನ್ನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಸಹಕಾರ ನೀಡಿದ ಪಕ್ಷದ ಪ್ರಮುಖರೆಲ್ಲರಿಗೂ ಯಡಿಯೂರಪ್ಪ ಕೃತಜ್ಞತೆ ಸಲಿಸಲಿದ್ದಾರೆ ಎಂದು ತಿಳಿದುಬಂದಿದೆ.
ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಇರುವ ಕಾರಣ ಕೈಗೊಳ್ಳಬೇಕಾದ ಕಾರ್ಯತಂತ್ರಗಳು, ಪ್ರತಿಪಕ್ಷಗಳು ರೂಪಿಸುವ ತಂತ್ರಕ್ಕೆ ಪ್ರತಿ ತಂತ್ರ, ಶಾಸಕರ ಅನರ್ಹತೆ ವಿರುದ್ಧ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುವುದು, ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾರ್ಯಾರನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ವರಿಷ್ಠರಿಂದ ಸಲಹೆ ಪಡೆಯುವರು.
ಕಳೆದ ಬಾರಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ವಿಶ್ವಾಸ ಮತ ಸಾಬೀತುಪಡಿಸದೆ ಕುರ್ಚಿ ಕಳೆದುಕೊಂಡಿದ್ದರು. ಈ ಬಾರಿ ಇಂತಹ ಪ್ರಮಾದಗಳು ಉಂಟಾಗದಂತೆ ವರಿಷ್ಠರು ಅತ್ಯಂತ ಎಚ್ಚರಿಕೆ ಹೆಜ್ಜೆ ಇಟ್ಟಿದ್ದಾರೆ.
ಸೋಮವಾರ ವಿಶ್ವಾಸ ಮತಯಾಚನೆ ವೇಳೆ ರಾಜೀನಾಮೆ ನೀಡಿರುವ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸದನಕ್ಕೆ ಗೈರು ಹಾಜರಾಗುವಂತೆ ನೋಡಿಕೊಳ್ಳಬೇಕೆಂಬ ಸೂಚನೆಯನ್ನು ಬಿಎಸ್‍ವೈಗೆ ನೀಡಲಿದ್ದಾರೆ.
ಒಂದು ಬಾರಿ ವಿಶ್ವಾಸ ಮತಯಾಚನೆ ಅಗ್ನಿಪರೀಕ್ಷೆಯಲ್ಲಿ ಗೆದ್ದರೆ 6 ತಿಂಗಳು ಸರ್ಕಾರಕ್ಕೆ ಯಾವುದೇ ರೀತಿಯ ಕಂಟಕ ಎದುರಾಗುವುದಿಲ್ಲ. ಸೋಮವಾರ ವಿಶ್ವಾಸ ಮತಯಾಚನೆ ಜೊತೆ ಹಣಕಾಸು ಮಸೂದೆಯನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರ ಪಡೆದುಕೊಂಡರೆ ಬಿಜೆಪಿಗೆ ಎದುರಾಗಿದ್ದ ಅರ್ಧ ಸಮಸ್ಯೆಗಳು ನಿವಾರಣೆಯಾಗುತ್ತದೆ.
ಈ ಎಲ್ಲ ತಂತ್ರಗಳ ಬಗ್ಗೆಯೇ ವರಿಷ್ಠರೊಂದಿಗೆ ಬಿಎಸ್‍ವೈ ಚರ್ಚಿಸಿ ಅಗತ್ಯ ಸಹಕಾರ ಮತ್ತು ಮಾರ್ಗದರ್ಶನ ಪಡೆಯಲಿದ್ದಾರೆ. ವಿಶ್ವಾಸ ಮತಯಾಚನೆ ಬಳಿಕ ಮತ್ತೊಮ್ಮೆ ದೆಹಲಿಗೆ ತೆರಳಿ ಸಚಿವ ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆಯುವರು ಎಂದು ಪಕ್ಷದ ಮೂಲಗಳು ತಿಳಿಸಿವೆ.