ಬೆಂಗಳೂರು, ಜು.26- ಅನರ್ಹಗೊಂಡಿರುವ ಮೂವರು ಶಾಸಕರು ಹಾಗೂ ರಾಜೀನಾಮೆ ನೀಡಿರುವ 13 ಶಾಸಕರ ಕಾನೂನು ರಕ್ಷಣೆಗೆ ಬಿಜೆಪಿ ಮುಂದಾಗಿದೆ.
ನಿನ್ನೆ ಸ್ಪೀಕರ್ ರಮೇಶ್‍ಕುಮಾರ್ ಅವರು ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಆರ್.ಶಂಕರ್ ಅವರನ್ನು ಅನರ್ಹಗೊಳಿಸಿ ತೀರ್ಪು ನೀಡಿದ್ದರು.
ಈ ಮೂವರು ಶಾಸಕರು ಬಿಜೆಪಿಗೆ ಬೆಂಬಲ ಘೋಷಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅನರ್ಹಗೊಂಡ ಹಿನ್ನೆಲೆಯಲ್ಲಿ ಇವರ ರಾಜಕೀಯ ಭವಿಷ್ಯ ಡೋಲಾಯಮಾನವಾಗಿದೆ. ಹೀಗಾಗಿ ಇವರ ಪರ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‍ನಲ್ಲಿ ಕಾನೂನು ಹೋರಾಟ ನಡೆಸಲು ಬಿಜೆಪಿ ಮುಂದಾಗಿದೆ.
ಇದಲ್ಲದೆ, ರಾಜೀನಾಮೆ ನೀಡಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬೀಳಿಸಲು ಕಾರಣರಾದ 13 ಶಾಸಕರ ಪರವಾಗಿಯೂ ಕೂಡ ಸುಪ್ರೀಂಕೋರ್ಟ್‍ನಲ್ಲಿ ಬಿಜೆಪಿ ಕಾನೂನು ಹೋರಾಟ ನಡೆಸಲಿದೆ.
ಹಾಲಿ ಶಾಸಕರು ನೀಡಿರುವ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ವಿಚಾರಣೆ ನಡೆಸಬೇಕಾಗಿದೆ ಎಂದು ಸ್ಪೀಕರ್ ರಮೇಶ್‍ಕುಮಾರ್ ಹೇಳಿದ್ದಾರೆ.
ಸುಪ್ರೀಂಕೋರ್ಟ್ ಈ ಶಾಸಕರ ರಾಜೀನಾಮೆ ಬಗ್ಗೆ ತೀರ್ಪು ನೀಡಿ ಎಂದು ತಿಳಿಸಿದೆ. ಆದರೆ, ಸ್ಪೀಕರ್ ಅವರೇನಾದರೂ ವಿಪ್ ಉಲ್ಲಂಘನೆ ಆಧಾರದ ಮೇಲೆ ಅನರ್ಹಗೊಳಿಸಿದರೆ ಆ ಶಾಸಕರಿಗೆ ತೊಂದರೆಯಾಗುತ್ತದೆ ಮತ್ತು ಬಿಜೆಪಿಯನ್ನು ನಂಬಿಕೊಂಡು ಬಂದಿದ್ದಕ್ಕೆ ಈ ರೀತಿ ಆಯಿತಲ್ಲ ಎಂಬ ಪರಿಸ್ಥಿತಿ ಬರಬಾರದು. ಈ ಮುಜುಗರದಿಂದ ತಪ್ಪಿಸಿಕೊಳ್ಳಲು, ನಂಬಿ ಬಂದಿರುವ ಎಲ್ಲರ ಪರವಾಗಿ ಕಾನೂನು ಹೋರಾಟ ನಡೆಸಲು ಮತ್ತು ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ಬಿಜೆಪಿ ಮುಂದಾಗಿದೆ.
ನಾವು ರಾಜೀನಾಮೆ ನೀಡಿರುವ 16 ಶಾಸಕರ ಪರವಾಗಿ ಕಾನೂನು ಹೋರಾಟ ನಡೆಸುತ್ತೇವೆ. ನೀವು ನಿಶ್ಚಿಂತೆಯಿಂದ ಪ್ರಮಾಣ ವಚನ ಸ್ವೀಕರಿಸಿ ಎಂದು ಹೈಕಮಾಂಡ್ ಯಡಿಯೂರಪ್ಪನವರಿಗೆ ಸೂಚನೆ ರವಾನಿಸಿದೆ ಎನ್ನಲಾಗಿದೆ.