ಬೆಂಗಳೂರು, ಜು.26- ಸರ್ಕಾರ ರಚನೆ ಮಾಡುವ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ ನಮ್ಮ ತೀರ್ಮಾನವನ್ನು ಪುನರ್ ಪರಿಶೀಲಿಸಬೇಕಾಗುತ್ತದೆ ಎಂಬ ಎಚ್ಚರಿಕೆ ಸಂದೇಶವನ್ನು ಮುಂಬೈನಲ್ಲಿರುವ ಶಾಸಕರು ರವಾನಿಸಿದ ಮೇಲೆಯೇ ಬಿಜೆಪಿ ಈ ತೀರ್ಮಾನಕ್ಕೆ ಬಂದಿದೆಯೇ…? ಹೌದೆನ್ನುತ್ತಿವೆ ಮೂಲಗಳು.
ಶುಕ್ರವಾರ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಹಕ್ಕು ಮಂಡಿಸದಿದ್ದರೆ ರಾಜೀನಾಮೆ ನೀಡಿರುವ ಶಾಸಕರ ತೀರ್ಮಾನ ಕೊನೆ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದೆಂಬ ಕಠಿಣ ಸಂದೇಶವನ್ನು ಕೇಂದ್ರ ವರಿಷ್ಠರಿಗೆ ರವಾನಿಸಿದರು.
ರಾಜೀನಾಮೆ ತೀರ್ಮಾನವನ್ನು ಸ್ಪೀಕರ್ ಕೈಗೊಳ್ಳುವವರೆಗೂ ನೀವು ಇದೇ ರೀತಿ ವಿಳಂಬ ಧೋರಣೆ ಅನುಸರಿಸಿದರೆ ನಾವೂ ಕೂಡ ಬೇರೆಯದೇ ಆದ ತೀರ್ಮಾನವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಅತೃಪ್ತರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ಶಾಗೆ ನಿಯೋಗದ ಮೂಲಕ ಸಂದೇಶವನ್ನು ರವಾನೆ ಮಾಡಿದರು.
ದೆಹಲಿಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ಶೆಟ್ಟರ್, ಮುಖಂಡರಾದ ಜೆ.ಸಿ.ಮಾಧುಸ್ವಾಮಿ, ಬಸವರಾಜ್ ಬೊಮ್ಮಾಯಿ ಮತ್ತಿತರರ ಮೂಲಕ ವರಿಷ್ಠರಿಂದ ಯಾವುದಾದರೊಂದು ತೀರ್ಮಾನ ಕೈಗೊಳ್ಳದಿದ್ದರೆ ನಾವೂ ಕೂಡ ನಮ್ಮ ತೀರ್ಮಾನವನ್ನು ಪುನರ್ ಪರಿಶೀಲಿಸುತ್ತೇವೆ ಎಂದು ಎಚ್ಚರಿಸಿದರು.
ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿದ್ದೇವೆ. ನಮ್ಮ ಬಗ್ಗೆ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ನಾನಾ ರೀತಿಯ ವ್ಯಾಖ್ಯಾನಗಳು ಬರುತ್ತಿವೆ.
ಹಣಕ್ಕಾಗಿ ನಾವು ರಾಜೀನಾಮೆ ನೀಡಿದ್ದೇವೆ ಎಂದು ಬಿಂಬಿಸಲಾಗುತ್ತಿದೆ. ನೀವು ರಾಜ್ಯಪಾಲರು, ಸ್ಪೀಕರ್, ಹೈಕಮಾಂಡ್ ಹೀಗೆ ನಾನಾ ಕಾರಣಗಳನ್ನು ಹೇಳುತ್ತಾ ಹೋದರೆ ನಾವೂ ಕೂಡ ಸುಮ್ಮನಿರಲು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಇದರ ಜತೆಗೆ ಅತೃಪ್ತ ಶಾಸಕರನ್ನು ಸೆಳೆಯಲು ಕಾಂಗ್ರೆಸ್ ಮತ್ತು ಜೆಡಿಎಸ್ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿತ್ತು. ಇದರ ಜತೆಗೆ ನಿನ್ನೆಯಷ್ಟೇ ಪಕ್ಷ ವಿರೋಧಿ ಚಟುವಟಿಕೆ ಆರೋಪ ಹಿನ್ನೆಲೆಯಲ್ಲಿ ವಿಧಾನಸಭೆ ಸ್ಪೀಕರ್ ರಮೇಶ್ಕುಮಾರ್ ಅವರು ಮೂವರು ಶಾಸಕರನ್ನು ಅನರ್ಹಗೊಳಿಸಿದ್ದರು.
ಈ ಎಲ್ಲಾ ಬೆಳವಣಿಗೆಗಳಿಂದ ತುಸು ಆತಂಕಕ್ಕೆ ಒಳಗಾದ ಭಿನ್ನಮತೀಯರು, ಬಿಜೆಪಿ ಸರ್ಕಾರ ರಚನೆ ಮಾಡದಿದ್ದರೆ ನಮ್ಮ ದಾರಿ ನಮಗೆ ಎಂಬ ತೀರ್ಮಾನಕ್ಕೆ ಬಂದಿದ್ದರಿಂದ ಯಡಿಯೂರಪ್ಪ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದಾರೆ.