ಬೆಂಗಳೂರಿನ ನಾಲ್ವರು ಶಾಸಕರ ಕ್ಷೇತ್ರಗಳ ಉಪಚುನಾವಣೆಗೆ ಜೆಡಿಎಸ್‍ನಿಂದ ಸಿದ್ಧತೆ

ಬೆಂಗಳೂರು, ಜು.26-ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ವಿಶ್ವಾಸ ಮತ ಕಳೆದುಕೊಳ್ಳಲು ಕಾರಣರಾದ ಬೆಂಗಳೂರಿನ ನಾಲ್ವರು ಶಾಸಕರ ಕ್ಷೇತ್ರಗಳ ಉಪಚುನಾವಣೆಗೆ ಜೆಡಿಎಸ್ ಸಿದ್ಧತೆ ನಡೆಸಲು ಮುಂದಾಗಿದೆ. ಕಾಂಗ್ರೆಸ್‍ನೊಂದಿಗಿನ ಮೈತ್ರಿ ಇನ್ನೂ ಮುಂದುವರೆದಿದ್ದು, ಮುಂಬರುವ ವಿಧಾನಸಭೆ ಉಪಚುನಾವಣೆಗಳಲ್ಲೂ ಮೈತ್ರಿಯನ್ನು ಜೆಡಿಎಸ್ ಮುಂದುವರೆಸಲಿದೆಯೇ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಶಾಸಕರ ರಾಜೀನಾಮೆಯೂ ಅಂಗೀಕಾರವಾಗಿಲ್ಲ. ಅಲ್ಲದೆ ಉಪಚುನಾವಣೆಯೂ ಘೋಷಣೆಯಾಗಿಲ್ಲ. ಆದರೆ ಜೆಡಿಎಸ್ ಮಾತ್ರ ಸಿದ್ಧತೆಯಲ್ಲಿ ತೊಡಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಕಾರಣರಾದ ಶಾಸಕರಾದ ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಕೆ.ಗೋಪಾಲಯ್ಯ, ಮುನಿರತ್ನ ಪ್ರತಿನಿಧಿಸುವ ಕ್ಷೇತ್ರಗಳಿಗೆ ಚುನಾವಣೆ ಸಿದ್ಧತೆ ಆರಂಭಿಸಲಾಗಿದೆ.

ನಾಳೆಯಿಂದ ಎರಡು ದಿನಗಳ ಕಾಲ ಈ ನಾಲ್ವರು ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳ ಜೆಡಿಎಸ್ ಮುಖಂಡರು ಆಯಾ ಕ್ಷೇತ್ರದ ಪದಾಧಿಕಾರಿಗಳ ಸಭೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ನಡೆಸಲಾಗುತ್ತದೆ.

ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ವಿಧಾನಸಭಾಧ್ಯಕ್ಷರು ಇನ್ನೂ ಅಂಗೀಕರಿಸಿಲ್ಲ. ಅಲ್ಲದೆ ಈ ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವಂತೆ ಸಭಾಧ್ಯಕ್ಷರಿಗೆ ದೂರು ನೀಡಲಾಗಿದೆ. ಆ ಬಗ್ಗೆ ಇನ್ನೂ ಸಭಾಧ್ಯಕ್ಷರು ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ. ಆದರೂ ಚುನಾವಣೆ ಸಿದ್ಧತೆ ಪೂರ್ವಭಾವಿಯಾಗಿ ಆಯಾ ವಿಧಾನಸಭಾ ಕ್ಷೇತ್ರಗಳ ಪದಾಧಿಕಾರಿಗಳು ಹಾಗೂ ಪಕ್ಷದ ಮುಖಂಡರ ಸಭೆಯನ್ನು ಕರೆಯಲಾಗಿದೆ.

ನಾಳೆ ರಾಜರಾಜೇಶ್ವರಿ ನಗರ ಹಾಗೂ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರಗಳ ಸಭೆ ಕರೆದಿದ್ದು, ತಪ್ಪದೆ ಪದಾಧಿಕಾರಿಗಳು ಹಾಗೂ ಮುಖಂಡರು ಭಾಗವಹಿಸುವಂತೆ ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ತಿಳಿಸಿದ್ದಾರೆ.

ಭಾನುವಾರ ಮಹಾಲಕ್ಷ್ಮಿ ಲೇಔಟ್ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರಗಳ ಮುಖಂಡರ ಸಭೆಯನ್ನು ಕರೆಯಲಾಗಿದೆ. ಮಹಾಲಕ್ಷ್ಮಿ ಲೇಔಟ್ ಹೊರತುಪಡಿಸಿದರೆ ಉಳಿದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಚುನಾಯಿತರಾಗಿದ್ದರು.

ಕಳೆದ ಲೋಕಸಭೆ ಚುನಾವಣೆ ಹಾಗೂ ಅದಕ್ಕೂ ಮುಂಚೆ ನಡೆದ ಲೋಕಸಭೆ ಮತ್ತು ವಿಧಾನಸಭೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್‍ನೊಂದಿಗೆ ಚುನಾವಣಾ ಪೂರ್ವ ಹೊಂದಾಣಿಕೆಯನ್ನು ಜೆಡಿಎಸ್ ಮಾಡಿಕೊಂಡಿತ್ತು. ಈ ಉಪಚುನಾವಣೆಗಳಲ್ಲಿ ಮೈತ್ರಿ ಮುಂದುವರೆಯಲಿದೆಯೇ ಅಥವಾ ಏಕಾಂಗಿ ಸ್ಪರ್ಧೆ ಮಾಡಲಾಗುತ್ತದೆಯೇ ಎಂಬುದನ್ನು ಕಾದುನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ