ಬೆಂಗಳೂರು, ಜು.25-ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 15 ಮಂದಿಯ ರಾಜಕೀಯ ಭವಿಷ್ಯ ನಾಳೆಯೇ ನಿರ್ಧಾರಗೊಳ್ಳುವ ಸಾಧ್ಯತೆ ಇದೆ.
ಕಾಂಗ್ರೆಸ್-ಜೆಡಿಎಸ್ ಪಕ್ಷದ ಮೇಲೆ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಸೇರಿದಂತೆ ಬೇರೆ ಬೇರೆ ಕಡೆ ಕುಳಿತಿದ್ದ 15 ಮಂದಿ ಶಾಸಕರ ವಿರುದ್ಧ ಜೆಡಿಎಸ್-ಕಾಂಗ್ರೆಸ್ ಶಾಸಕಾಂಗ ಪಕ್ಷಗಳ ನಾಯಕರು ದೂರು ನೀಡಿದ್ದು, ಅದರ ವಿಚಾರಣೆ ಈಗಾಗಲೇ ಮುಗಿದಿದೆ.
ಮಂಗಳವಾರ ಮತ್ತು ಬುಧವಾರ ಎರಡು ದಿನಗಳ ಕಾಲ ಸ್ಪೀಕರ್ ಅವರು ವಿಚಾರಣೆ ನಡೆಸಿದಾಗ ಶಾಸಕರು ಖುದ್ದಾಗಿ ಹಾಜರಾಗದೆ ವಕೀಲರ ಮೂಲಕ ವಾದ ಮಂಡಿಸಿದ್ದರು. ಇದಕ್ಕೆ ಪ್ರತಿಯಾಗಿ ಶಾಸಕಾಂಗ ಪಕ್ಷದ ನಾಯಕರ ಪರವಾಗಿ ವಕೀಲರು ಕೂಡ ಪ್ರಬಲವಾದ ವಾದ ಮಂಡಿಸಿದ್ದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಅವರುಗಳೇ ಖುದ್ದಾಗಿ ವಿಚಾರಣೆಗೆ ಹಾಜರಾಗಿದ್ದರು.
ರಮೇಶ್ಜಾರಕಿ ಹೊಳಿ, ಮುನಿರತ್ನ, ಆನಂದ್ಸಿಂಗ್, ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಪ್ರತಾಪ್ಗೌಡ ಪಾಟೀಲ್,ಭೆರತಿ ಬಸವರಾಜ್, ಸುಧಾಕರ್, ಜೆಡಿಎಸ್ನ ನಾರಾಯಣಗೌಡ, ವಿಶ್ವನಾಥ್, ಗೋಪಾಲಯ್ಯ, ಪಕ್ಷೇತರರಾದ ಆರ್.ಶಂಕರ್ ಅವರುಗಳಿಗೆ ಸ್ಪೀಕರ್ ಅವರು ನೋಟೀಸ್ ಜಾರಿ ಮಾಡಿದ್ದರು. ಅದಕ್ಕೆ ಕೆಲವರು ಸ್ಪೀಕರ್ ಅವರಿಗೆ ಲಿಖಿತ ಉತ್ತರ ನೀಡುವ ಮೂಲಕ ವಕೀಲರಿಂದ ತಮ್ಮ ವಾದವನ್ನೂ ಮಂಡಿಸಿದ್ದರು.
ಕಾಂಗ್ರೆಸ್ ನಾಯಕರು ನಿನ್ನೆ ನಡೆದ ಸಭೆಯಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರ ಹೋಗಿರುವ 15 ಮಂದಿಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದು ಮತ್ತು ಮುಂದಿನ ಚುನಾವಣೆಯಲ್ಲಿ ಅವರನ್ನು ಸೋಲಿಸುವ ಬಗ್ಗೆ ಮಹತ್ವದ ಚರ್ಚೆ ನಡೆಸಿದರು.
ಇವೆಲ್ಲದರ ಹೊರತಾಗಿ ಕಾನೂನಾತ್ಮಕವಾಗಿ ನಿಷ್ಪಕ್ಷಪಾತ ವಿಚಾರಣೆ ನಡೆಸಿರುವ ಸ್ಪೀಕರ್ ಅವರು ತಮ್ಮ ತೀರ್ಪನ್ನು ಕಾಯ್ದಿರಿಸಿದ್ದಾರೆ. ಇಂದು ಬೆಳಗ್ಗೆ ತಮ್ಮ ಮನೆಯಲ್ಲಿ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿರುವ ಸ್ಪೀಕರ್ ಅವರು, ಶಾಸಕರ ಅನರ್ಹತೆಗೆ ಸಂಬಂಧಪಟ್ಟಂತೆ ವಿವಿಧ ನ್ಯಾಯಾಲಯಗಳ ತೀರ್ಪು, ಜೊತೆಗೆ ವಿವಿಧ ರಾಜ್ಯಗಳ ವಿಧಾನಸಭಾಧ್ಯಕ್ಷರು ಮತ್ತು ಲೋಕಸಭಾಧ್ಯಕ್ಷರು ನೀಡಿರುವ ತೀರ್ಪುಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಕಾನೂನಾತ್ಮಕವಾಗಿ ಸಮಗ್ರವಾದ ಚರ್ಚೆ ನಡೆಸಿದ್ದು, ನಾಳೆ ತೀರ್ಪು ಪ್ರಕಟಗೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಸ್ಪೀಕರ್ ಅವರು ನಾಳೆ ತೀರ್ಪು ಪ್ರಕಟಿಸಿದರೆ ರಾಜೀನಾಮೆ ನೀಡಿ ಹೊರಹೋಗಿರುವ ಅಷ್ಟೂ ಶಾಸಕರ ಪೈಕಿ ರೋಷನ್ಬೇಗ್ ಹೊರತುಪಡಿಸಿ ಉಳಿದ ಎಲ್ಲರೂ ಅತಂತ್ರ ಸ್ಥಿತಿಗೆ ಸಿಲುಕುವ ಸಾಧ್ಯತೆಗಳಿವೆ.
ಸ್ಪೀಕರ್ ಅವರು ಎಲ್ಲರನ್ನು ಒಟ್ಟಿಗೆ ಅನರ್ಹಗೊಳಿಸುತ್ತಾರೋ ಅಥವಾ ಹಂತ ಹಂತವಾಗಿ ಅನರ್ಹಗೊಳಿಸುತ್ತಾರೋ ಎಂಬ ಕುತೂಹಲ ಹೆಚ್ಚಾಗಿದೆ.