ಬೆಂಗಳೂರು, ಜು.25-ಜುಲೈ 31ರೊಳಗಾಗಿ ಧನವಿನಿಯೋಗ ಮಸೂದೆ ಅಂಗೀಕಾರಗೊಳ್ಳದೆ ಇದ್ದರೆ, ಸರ್ಕಾರ ತಟಸ್ಥಗೊಳ್ಳುತ್ತದೆ ಎಂಬ ಆತಂಕವನ್ನು ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ವ್ಯಕ್ತಪಡಿಸಿದ್ದಾರೆ.
ಇಂದು ತಮ್ಮ ಮನೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧನ ವಿನಿಯೋಗ ಮಸೂದೆ ಅಂಗೀಕಾರಗೊಳ್ಳದೆ ಇದ್ದರೆ, ಸರ್ಕಾರಿ ನೌಕರರಿಗೆ ವೇತನ ನೀಡುವುದು ಸೇರಿದಂತೆ ಹಲವಾರು ಕಾರ್ಯಗಳಿಗೆ ಅಡೆತಡೆ ಉಂಟಾಗುತ್ತದೆ. ಯಾವುದೇ ಸರ್ಕಾರ ಬಂದರೂ ಸರಿ ಮೊದಲು ಅಧಿವೇಶನ ಕರೆದು ಧನವಿನಿಯೋಗ ಮಸೂದೆಯನ್ನು ಪಾಸ್ ಮಾಡಿಕೊಳ್ಳಬೇಕು ಎಂದು ನಾನು ಸಲಹೆ ನೀಡಿದ್ದೇನೆ. ಈ ರೀತಿಯ ಅನಿವಾರ್ಯ ಪರಿಸ್ಥಿತಿ ಬಂದೊದಗಿರುವುದು ವಿಷಾದನೀಯ ಎಂದರು.
ಶಾಸಕರ ರಾಜೀನಾಮೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು, ನಿಯಮಗಳ ಪ್ರಕಾರ ರಾಜೀನಾಮೆ ನೀಡಿದವರು ವಿಚಾರಣೆಗೆ ಬರಬೇಕು.ಈಗಾಗಲೇ ನೋಟೀಸ್ ಜಾರಿ ಮಾಡಿ ವಿಚಾರಣೆಗೆ ಕರೆದಿದ್ದೆ. ಅವರು ವಿಚಾರಣೆಗೆ ಬಂದಿಲ್ಲ. ಮತ್ತೆ ಮತ್ತೆ ನೋಟೀಸ್ ಕೊಟ್ಟು ವಿಚಾರಣೆಗೆ ಕರೆಯಲು ನನಗೆ ಬೇರೆ ಕೆಲಸ ಇಲ್ಲವಾ… ಹಾಗಾಗಿ ವಿಚಾರಣೆ ಈಗಾಗಲೇ ಮುಗಿದಿದೆ. ಮತ್ತೆ ನೋಟೀಸ್ ಕೊಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
ರಾಜೀನಾಮೆ ನೀಡಿದ ಶಾಸಕರ ಪ್ರಕರಣದಲ್ಲಿ ಯಾವುದೇ ತೀರ್ಪು ತೆಗೆದುಕೊಳ್ಳುವ ಅಧಿಕಾರವನ್ನು ಸುಪ್ರೀಂಕೋರ್ಟ್ ಸ್ಪೀಕರ್‍ಅವರ ವಿವೇಚನೆಗೆ ಬಿಟ್ಟಿದೆ.
ನ್ಯಾಯಾಲಯದ ವಿಶ್ವಾಸ ಉಳಿಸಿಕೊಳ್ಳುವಂತೆ ಕೆಲಸ ನಿರ್ವಹಿಸುತ್ತೇನೆ ಎಂದು ಅವರು ಭರವಸೆ ನೀಡಿದರು.