ಬೆಂಗಳೂರು, ಜು.25-ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುವ ವೇಳೆಯಲ್ಲಿ ಕಾಂಗ್ರೆಸ್-ಜೆಡಿಎಸ್ಗೆ ರಾಜೀನಾಮೆ ನೀಡಿ ಹೋಗಿರುವ 17 ಮಂದಿಯೂ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರೆ ಪರಿಸ್ಥಿತಿ ನೆಟ್ಟಗಿರುತ್ತದೆ. ಇಲ್ಲದೆ ಹೋದರೆ ಅಷ್ಟು ಮಂದಿ ಶಾಸಕರು ಯಡಿಯೂರಪ್ಪ ಅವರ ಪ್ಯಾಂಟ್-ಶರ್ಟ್ನ್ನು ಕಿತ್ತುಕೊಂಡು ಗೋವಿಂದ… ಗೋವಿಂದಾ… ಎನ್ನುವ ಪರಿಸ್ಥಿತಿ ನಿರ್ಮಿಸುತ್ತಾರೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಮನೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ನ ಪರಿಸ್ಥಿತಿ ಏನೋ ನನಗೆ ಗೊತ್ತಿಲ್ಲ. ಆದರೆ ನನ್ನ ಶಾಸಕ, ಸ್ನೇಹಿತರ ಸ್ವಭಾವ ಚೆನ್ನಾಗಿ ಗೊತ್ತು. 30-40 ವರ್ಷ ಕಾಂಗ್ರೆಸ್ ಪಕ್ಷ ಅವರನ್ನು ಸಾಕಿ, ಬೆಳೆಸಿದೆ. ಕ್ಷೇತ್ರದ ಜನ, ಕಾರ್ಯಕರ್ತರು ಸಾಕಷ್ಟು ತ್ಯಾಗ ಮಾಡಿ ಅವರಿಗೆ ಅಧಿಕಾರ ಕೊಡಿಸಿದರು. ನಮ್ಮನ್ನೇ ಅವರು ಸುಮ್ಮನೆ ಬಿಡಲಿಲ್ಲ. ಇನ್ನು ಯಡಿಯೂರಪ್ಪನವರನ್ನು ಬಿಡ್ತಾರಾ, ಹಾಗೇ ನುಂಗಿ ಬಿಡ್ತಾರೆ ಎಂದು ಹೇಳಿದರು.
ರಾಜೀನಾಮೆ ನೀಡಿರುವ 17 ಮಂದಿ ಪೈಕಿ ಮಹೇಶ್ ಕುಮಟಳ್ಳಿ ಹೊರತುಪಡಿಸಿ ಉಳಿದ ಎಲ್ಲರೂ ಮುಂಬೈನ ಹೊಟೇಲ್ನಲ್ಲೇ ಸಂಪುಟದ ಖಾತೆ ಹಂಚಿಕೊಳ್ಳುವ ಪಟ್ಟಿ ಮಾಡಿಕೊಂಡು ಕುಳಿತಿದ್ದಾರೆ. ಒಬ್ಬನಿಗೆ ಬೆಂಗಳೂರು ನಗರಬೇಕು, ಮತ್ತೊಬ್ಬನಿಗೆ ಇಂಧನ, ಇನ್ನೊಬ್ಬನಿಗೆ ಪಿಡಬ್ಲ್ಯುಡಿ, ನೀರಾವರಿ, ಅರಣ್ಯ, ಕಂದಾಯ ಈ ರೀತಿ ಎಲ್ಲಾ ಖಾತೆಗಳನ್ನು ಹಂಚಿಕೊಂಡು ಕೂತಿದ್ದಾರೆ. ನನ್ನ ಜೊತೆ ಅವರೆಲ್ಲ ಮಾತನಾಡಿದ್ದಾರೆ. ಅವರ ಸ್ವಭಾವ ನನಗೆ ಗೊತ್ತು. ಯಡಿಯೂರಪ್ಪ ತಾವು ಪ್ರಮಾಣವಚನ ಸ್ವೀಕರಿಸುವಾಗಲೇ ಅವರನ್ನೆಲ್ಲ ಸಚಿವರನ್ನಾಗಿ ಮಾಡದಿದ್ದರೆ ಪ್ಯಾಂಟ್-ಶರ್ಟ್ ಹರಿದು ಹಾಕಿಬಿಡ್ತಾರೆ. ಒಬ್ಬೊಬ್ಬ ಪ್ಯಾಂಟ್, ಶರ್ಟ್, ಜೇಬು ಕಿತ್ತು ಕೊಳ್ತಾರೆ. ಸುತ್ತಮುತ್ತ ಇರುವ ಮುತ್ತುರತ್ನಗಳನ್ನು ಕಿತ್ತುಕೊಳ್ಳುವುದು ಖಚಿತ.ಯಡಿಯೂರಪ್ಪ ಅವರಿಗೆ ಇನ್ನೂ ಅವರ ಸ್ವಭಾವ ಗೊತ್ತಿಲ್ಲ ಎಂದು ಎಚ್ಚರಿಸಿದರು.
ಸರ್ಕಾರ ರಚನೆಗೆ 113 ಮಂದಿ ಶಾಸಕರ ಸಂಖ್ಯಾಬಲ ಬೇಕು. ಇದು ಸಾಮಾನ್ಯ ಜ್ಞಾನ. ಮುಖ್ಯಮಂತ್ರಿಯಾಗಿ ಯಾರೇ ಪ್ರಮಾಣವಚನ ಸ್ವೀಕರಿಸಿದರೂ ಅವರು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕು. ಅದಕ್ಕೆ ರಾಜ್ಯಪಾಲರು ಸೂಕ್ತ ಸೂಚನೆ ನೀಡಬೇಕು. ಸಮಯಾವಕಾಶ ಒಂದು ವಾರ ಆಗಬಹುದು ಅಥವಾ 15 ದಿನಗಳವರೆಗೆ ಕೊಡಬಹುದು.ಆದರೆ ವಿಶ್ವಾಸಮತಯಾಚನೆ ಸಾಬೀತುಮಾಡಲೇಬೇಕಾದ ಅನಿವಾರ್ಯತೆಯಂತೂ ಇದೆ ಎಂದರು.
ಬಿಜೆಪಿ ಸರ್ಕಾರ ರಚನೆ ಮಾಡಲಿ, ಮಾಡದಿರಲಿ ಅದರಿಂದ ಲಾಭ-ನಷ್ಟವಂತೂ ಇಲ್ಲ. ನನಗೆ ಯಾವುದೇ ಅಧಿಕಾರದ ಮೋಹ ಇಲ್ಲ. ಕ್ಷೇತ್ರದ ಜನ ಶಾಸಕನನ್ನಾಗಿ ಮಾಡಿದ್ದಾರೆ, ಅಷ್ಟು ಸಾಕು. ಪಕ್ಷ ಒಂದು ಸಚಿವ ಸ್ಥಾನ ನೀಡಿತ್ತು. ಈಗ ಅದೂ ಹೋಗಿದೆ. ಅಧಿಕಾರ ಇಲ್ಲದೆ ಇದ್ದರೂ ನನ್ನ ಜನ, ನನ್ನ ಸುತ್ತಮುತ್ತ ಇದ್ದಾರೆ. ನನಗಷ್ಟೇ ಸಾಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ವಿಪಕ್ಷ ನಾಯಕನ ಸ್ಥಾನಮಾನದ ಬಗ್ಗೆ ನನಗೆ ಯಾವುದೇ ಆಸೆಗಳಿಲ್ಲ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಜೊತೆಗಿನ ಮೈತ್ರಿ ಕಡಿದುಕೊಳ್ಳುವ ಬಗ್ಗೆ ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದರು.
ಹಿಂದೆ ರಾಹುಲ್ಗಾಂಧಿಯವರ ನಿರ್ಧಾರದಂತೆ ಮೈತ್ರಿ ಮಾಡಿಕೊಳ್ಳಲಾಗಿದೆ. ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಅದಕ್ಕೆ ಬದ್ಧ. 14 ತಿಂಗಳು ಅವರ ಜೊತೆ ಸೇರಿ ಸರ್ಕಾರ ನಡೆಸಿದ್ದೇವೆ. ಈಗ ಒಂದು ಸರ್ಕಾರ ಬಿದ್ದು ಹೋಯಿತು ಎಂಬ ಕಾರಣಕ್ಕೆ ಮೈತ್ರಿ ಬೇಡ ಎಂದರೆ, ಜೆಡಿಎಸ್ ಜೊತೆ ರಂಪಾ ಮಾಡಿ ಜಗಳ ಮಾಡಿಕೊಂಡರೆ ಜನ ಉಗೀತಾರೆ ಎಂದು ಹೇಳಿದರು.
ಮೈತ್ರಿ ವಿಷಯವಾಗಿ ಜೆಡಿಎಸ್ನ ವರಿಷ್ಠ ದೇವೇಗೌಡರು, ಕಾಂಗ್ರೆಸ್ನ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದರು.
ರಾಜೀನಾಮೆ ನೀಡಿರುವ ಶಾಸಕರನ್ನು ನಾನು ಅತೃಪ್ತರೆಂದು ಭಾವಿಸುವುದಿಲ್ಲ. ಅವರೆಲ್ಲ ಸಂತೃಪ್ತರು. ಅವರ ರಾಜೀನಾಮೆ ಮತ್ತು ಅನರ್ಹತೆ ಪ್ರಕರಣದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ನನಗೂ ಅದಕ್ಕೂ ಸಂಬಂಧವಿಲ್ಲ ಎಂದು ಹೇಳಿದರು.