ಬೆಂಗಳೂರು, ಜು.25- ಬಿಬಿಎಂಪಿ ಸದಸ್ಯರು ಆಸ್ತಿ ವಿವರ ಸಲ್ಲಿಸದ ಕುರಿತು ಕಾರಣ ಕೇಳಿ ಲೋಕಾಯುಕ್ತ ವಿಶ್ವನಾಥ್ಶೆಟ್ಟಿ ಅವರು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್, ಮೇಯರ್ ಗಂಗಾಂಬಿಕೆ, ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಮತ್ತು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಅನಿಲ್ಕುಮಾರ್ ಶೆಟ್ಟಿ ಎಂಬುವವರು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, 34 ಬಿಬಿಎಂಪಿ ಸದಸ್ಯರು ಆಸ್ತಿ ವಿವರ ಸಲ್ಲಿಸಿಲ್ಲ. ಹಾಗಾಗಿ ಅವರ ಸದಸ್ಯತ್ವ ಅನರ್ಹಗೊಳಿಸುವಂತೆ ಕೋರಿ ಮೊಕದ್ದಮೆ ಸಲ್ಲಿಸಿದ್ದಾರೆ.
ಈ ಅರ್ಜಿ ವಿಚಾರಣೆ ಹಂತದಲ್ಲಿರುವಾಗಲೇ ಲೋಕಾಯುಕ್ತರು ನೋಟಿಸ್ ಜಾರಿ ಮಾಡಿರುವುದು ಪಾಲಿಕೆ ವಲಯದಲ್ಲಿ ಅಚ್ಚರಿ ಮೂಡಿಸಿದೆ.
ಆದರೆ, ಲೋಕಾಯುಕ್ತರಿಗೆ ಬಿಬಿಎಂಪಿ ಸದಸ್ಯರು ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯವಲ್ಲ ಎಂದು ಈ ಹಿಂದೆ ರಾಜ್ಯ ಉಚ್ಛ ನ್ಯಾಯಾಲಯವೇ ಆದೇಶ ನೀಡಿರುವುದರಿಂದ ಲೋಕಾಯುಕ್ತಕ್ಕೆ ನಾವು ಆಸ್ತಿ ವಿವರ ಸಲ್ಲಿಸುವುದಿಲ್ಲ ಎಂದು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ವಿಧಾನಪರಿಷತ್ ಸದಸ್ಯರು ಮತ್ತು ಶಾಸಕರು ಮಾತ್ರ ಲೋಕಾಯುಕ್ತಕ್ಕೆ ಕಡ್ಡಾಯವಾಗಿ ಆಸ್ತಿ ವಿವರ ಸಲ್ಲಿಸಬೇಕು. ನಾವು ಸ್ಥಳೀಯ ಪ್ರತಿನಿಧಿಗಳು. ಹಾಗಾಗಿ ಬಿಬಿಎಂಪಿ ಕಚೇರಿಗೆ ಮಾತ್ರ ಪ್ರತಿ ವರ್ಷ ಆಸ್ತಿ ವಿವರ ಸಲ್ಲಿಸಬೇಕು. ಮೇಯರ್ ಕಚೇರಿಗೆ ಆಸ್ತಿ ವಿವರ ಸಲ್ಲಿಸದ ಸದಸ್ಯರನ್ನು ಅನರ್ಹಗೊಳಿಸುವಂತೆ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ಪಡೆದು ನಂತರ ಸರ್ಕಾರಕ್ಕೆ ಕಳುಹಿಸಬೇಕು.ಸರ್ಕಾರ ತದನಂತರ ಮುಂದಿನ ತೀರ್ಮಾನ ಕೈಗೊಳ್ಳುತ್ತದೆ ಎಂದು ಹೇಳಿದರು.
ಆಸ್ತಿ ವಿವರ ಸಲ್ಲಿಸದ ಸದಸ್ಯರನ್ನು ಅನರ್ಹಗೊಳಿಸಲು ಕೆಎಂಸಿ ಕಾಯ್ದೆಯಲ್ಲಿ ಅವಕಾಶವಿದೆ. ಲೋಕಾಯುಕ್ತರಿಗೆ ಆ ಅಧಿಕಾರ ಇಲ್ಲ. ಲೋಕಾಯುಕ್ತರಿಗೆ ಬಿಬಿಎಂಪಿ ಸದಸ್ಯರು ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯವಲ್ಲ ಎಂಬ ನ್ಯಾಯಾಲಯದ ಆದೇಶದ ಪ್ರತಿಯನ್ನು ಲಗತ್ತಿಸಿ ಲೋಕಾಯುಕ್ತರ ನೋಟಿಸ್ಗೆ ಉತ್ತರ ನೀಡುವಂತೆ ಪಾಲಿಕೆಯ ಕಾನೂನು ಕೋಶದ ಮುಖ್ಯಸ್ಥ ದೇಶಪಾಂಡೆ ಅವರಿಗೆ ಸೂಚನೆ ನೀಡಿದ್ದೇನೆ ಎಂದು ಪದ್ಮನಾಭರೆಡ್ಡಿ ತಿಳಿಸಿದರು.