ಸ್ಪೀಕರ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಬಿಜೆಪಿಯ ಸರ್ಕಾರ ರಚನೆ ಅವಲಂಬಿತ

ಬೆಂಗಳೂರು, ಜು.25- ಸರ್ಕಾರ ರಚನೆ ಮಾಡಲು ಬಿಜೆಪಿ ನಾಯಕರು ತುದಿಗಾಲಲ್ಲಿ ನಿಂತಿದ್ದರೂ ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್‍ಕುಮಾರ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಎಲ್ಲವೂ ಅವಲಂಬಿತವಾಗಿದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 15 ಮಂದಿ ಶಾಸಕರನ್ನು ಅಂಗೀಕರಿಸಬೇಕೋ, ಇಲ್ಲವೇ ವಿಪ್ ಉಲ್ಲಂಘನೆ ಆಧಾರದ ಮೇಲೆ ಪಕ್ಷಾಂತರ ನಿಷೇಧ ಕಾಯ್ದೆ ಮೇಲೆ ಅವರನ್ನ ಅನರ್ಹಗೊಳಿಸಬೇಕು ಎಂಬ ಪ್ರಶ್ನೆ ಸ್ಪೀಕರ್ ಮುಂದಿದೆ.
ಸ್ಪೀಕರ್ ತೆಗೆದುಕೊಳ್ಳುವ ನಿರ್ಧಾರದ ಮೇಲೆಯೇ ಬಿಜೆಪಿ ಸರ್ಕಾರ ರಚನೆ ಮಾಡಲಿದೆ.ಒಂದು ವೇಳೆ ಅವರು ವಿಳಂಬ ನೀತಿ ಅನುಸರಿಸಿದರೆ ಸರ್ಕಾರ ರಚನೆ ಮಾಡುವ ಉದ್ದೇಶ ಇನ್ನಷ್ಟು ವಿಳಂಬವಾಗಲಿದೆ.

ಹೀಗಾಗಿ ಇಂದು ಅಥವಾ ನಾಳೆ ಸರ್ಕಾರ ಬಂದೇ ಬಿಡುತ್ತೆ ಎಂಬ ಹುಮ್ಮಸ್ಸಿನಲ್ಲಿದ್ದ ಕಮಲ ನಾಯಕರು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.
ಅತ್ತ ಸರ್ಕಾರ ರಚನೆ ಮಾಡಿದರೆ ತಕ್ಷಣವೇ ಬಹುಮತ ಸಾಬೀತುಪಡಿಸಬೇಕೆಂದು ರಾಜ್ಯಪಾಲರು ಸೂಚನೆ ಕೊಡಬಹುದೆಂಬ ಭೀತಿ.ಮತ್ತೊಂದೆಡೆ ಸ್ಪೀಕರ್ ವಿಳಂಬ ಮಾಡಿದರೆ ಅತೃಪ್ತ ಶಾಸಕರ ಮನಸ್ಥಿತಿ ಬದಲಾಗಬಹುದೆಂಬ ಭೀತಿಯೂ ಕಾಡುತ್ತಿದೆ.
ಈ ಹಿಂದೆ 2018ರ ಮೇ ನಲ್ಲಿ ಯಡಿಯೂರಪ್ಪ ಸರ್ಕಾರ ರಚನೆ ಮಾಡಲು ಹೋಗಿ ಮುಖಭಂಗ ಅನುಭವಿಸಿದ್ದರು.ಬಹುಮತವಿಲ್ಲದಿದ್ದರೂ ವರಿಷ್ಟರ ಮಾತು ಕೇಳದೆ ಮೂರು ದಿನ ಮುಖ್ಯಮಂತ್ರಿಯಾಗಿ ಬಹುಮತ ಸಾಬೀತು ಪಡಿಸುವಲ್ಲಿ ವಿಫಲರಾಗಿದ್ದರು.

ಹೀಗಾಗಿ ಸರ್ಕಾರ ರಚನೆ ಮಾಡುವ ತವಕ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರಿಗಿದ್ದರೂ ವರಿಷ್ಠರು ಮಾತ್ರ ಸ್ಪೀಕರ್ ತೆಗೆದುಕೊಳ್ಳುವ ತೀರ್ಮಾನದವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಬೇಡ ಎಂಬ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ಎರಡು-ಮೂರು ದಿನಗಳೊಳಗೆ ಸ್ಪೀಕರ್ ಏನಾದರೊಂದು ತೀರ್ಮಾನವನ್ನು ಪ್ರಕಟಿಸಬಹುದು.ಶಾಸಕರ ರಾಜೀನಾಮೆ ಪತ್ರ ಕ್ರಮಬದ್ಧವಾಗಿದ್ದು, ಅವರ ರಾಜೀನಾಮೆಯನ್ನು ಅಂಗೀಕಾರ ಮಾಡಲಾಗಿದೆ ಎಂದೂ ಇಲ್ಲವೇ ವಿಪ್ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಪ್ರಕಾರ ಅನರ್ಹಗೊಳಿಸಲಾಗಿದೆ ಎಂದು ತೀರ್ಪು ನೀಡಿದರೆ, ಬಿಜೆಪಿ ಸರ್ಕಾರ ರಚನೆಯ ದಾರಿ ಸುಗಮವಾಗುತ್ತದೆ.ಆದರೆ, ಸ್ಪೀಕರ್ ವಿಳಂಬ ನೀತಿ ಅನುಸರಿಸಿದರೆ ಸರ್ಕಾರ ರಚನೆ ಮಾಡುವ ಬಿಜೆಪಿ ಓಟಕ್ಕೆ ಬ್ರೇಕ್ ಬೀಳಲಿದೆ.

ಕಾಂಗ್ರೆಸ್-ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರು ನೀಡಿರುವ ದೂರುಗಳು, ಸಾರ್ವಜನಿಕರಿಂದ ಬಂದಿರುವ ದೂರುಗಳು ಹಾಗೂ ನಾನು ನೀಡಿರುವ ನೋಟಿಸ್‍ಗೆ ವಿವರಣೆಗೆ ಸ್ಪಷ್ಟ ಉತ್ತರ ಬರುವವರೆಗೂ ನಾನು ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ಸ್ಪೀಕರ್ ಹೇಳಿದರೆ ಮತ್ತೆ ಸರ್ಕಾರ ರಚನೆ ಮುಂದಕ್ಕೆ ಹೋಗಲಿದೆ.

ಒಂದು ವೇಳೆ ಸ್ಪೀಕರ್ 2-3 ದಿನಗಳೊಳಗೆ ತಮ್ಮ ನಿಲುವನ್ನು ಪ್ರಕಟಿಸದಿದ್ದರೆ ಕೂಡಲೇ ಬಿಜೆಪಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದೆ.15 ಶಾಸಕರ ರಾಜೀನಾಮೆಯನ್ನು ಅಂಗೀಕರಿಸುವುದಾಗಲಿ, ಇಲ್ಲವೇ ಅವರ ಸದಸ್ಯತ್ವವನ್ನು ಅನರ್ಹಗೊಳಿಸಿದರೆ ವಿಧಾನಸಭೆಯ ಸದಸ್ಯರ ಸಂಖ್ಯೆ 209ಕ್ಕೆ ಇಳಿಯುತ್ತದೆ.ಆಗ ಸರಳ ಬಹುಮತವಾಗಿ ಬಿಜೆಪಿಗೆ 105 ಸದಸ್ಯರು ಬೇಕು.ಬಿಜೆಪಿ ಅಷ್ಟು ಸದಸ್ಯರನ್ನು ಹೊಂದಿರುವುದರಿಂದ ಬಹುಮತ ಸಾಬೀತುಪಡಿಸಲು ಯಾವ ವಿಘ್ನಗಳು ಎದುರಾಗುವುದಿಲ್ಲ.
ಆದರೆ, ರಾಜೀನಾಮೆ ನೀಡಿರುವ ಶಾಸಕರ ಪ್ರಕರಣದಲ್ಲಿ ಸ್ಪೀಕರ್ ತೆಗೆದುಕೊಳ್ಳುವ ತೀರ್ಮಾನದ ಮೇಲೆ ಇವೆಲ್ಲವೂ ಅವಲಂಬಿತವಾಗಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ