ಸರ್ಕಾರ ರಚನೆ ಮಾಡುವ ಕುರಿತಂತೆ ನಮಗೆ ಆತುರವಿಲ್ಲ-ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ

ಬೆಂಗಳೂರು, ಜು.25-ಶಾಸಕರು ರಾಜೀನಾಮೆ ನೀಡಿರುವ ಪ್ರಕರಣವನ್ನು ವಿಧಾನಸಭೆ ಸ್ಪೀಕರ್ ಇತ್ಯರ್ಥ ಪಡಿಸುವವರೆಗೂ ಸರ್ಕಾರ ರಚನೆ ಮಾಡುವ ಪ್ರಮೇಯವೇ ಇಲ್ಲ ಎಂದು ಕೇಂದ್ರ ಬಿಜೆಪಿ ವರಿಷ್ಠರು ರಾಜ್ಯ ನಾಯಕರಿಗೆ ಕಡ್ಡಿ ಮುರಿದಂತೆ ಹೇಳಿದ್ದಾರೆ.
ಸರ್ಕಾರ ರಚನೆ ಮಾಡುವ ಆತುರ ನಿಮಗಿರಬಹುದು. ನಾಳೆ ಕಾನೂನಿನ ತೊಡಕುಗಳು ಎದುರಾಗಿ ಪಕ್ಷಕ್ಕೆ ಹಿನ್ನಡೆಯಾದರೆ ರಾಷ್ಟ್ರಮಟ್ಟದಲ್ಲಿ ಬಿಜೆಪಿ ವರ್ಚಸ್ಸಿಗೆ ಧಕ್ಕೆಯಾಗುತ್ತದೆ.14 ತಿಂಗಳು ಕಾದಿರುವಾಗ ನಾಲ್ಕು ದಿನ ಕಾಯಲು ಸಮಸ್ಯೆಯಾದರೂ ಏನು ಎಂದು ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರಶ್ನಿಸಿದ್ದಾರೆ.

ಸರ್ಕಾರ ರಚನೆ ಮಾಡುವ ಸಂಬಂಧ ಅಮಿತ್ ಶಾ ಅವರನ್ನು ನವದೆಹಲಿಯಲ್ಲಿ ಇಂದು ಭೇಟಿ ಮಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮುಖಂಡರಾದ ಬಸವರಾಜ ಬೊಮ್ಮಾಯಿ, ಜೆ.ಸಿ.ಮಾಧುಸ್ವಾಮಿ ಸೇರಿದಂತೆ ಮತ್ತಿತರರ ನಿಯೋಗ ರಾಜ್ಯದಲ್ಲಿನ ಬೆಳವಣಿಗೆಗಳನ್ನು ಕುರಿತು ಮಾಹಿತಿ ನೀಡಿತು.

ತಮಗೆ ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಕಳೆದ ಮೂರು ವಾರಗಳಿಂದ ನಡೆಯುತ್ತಿರುವ ವಿದ್ಯಮಾನಗಳು ನನ್ನ ಗಮನಕ್ಕೆ ಬಂದಿವೆ.ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಮೊದಲು ಅದರ ಸಾಧಕ-ಬಾಧಕಗಳ ಬಗ್ಗೆಯೂ ಚರ್ಚಿಸಬೇಕು.ಸರ್ಕಾರ ರಚನೆ ಮಾಡುವ ಕುರಿತಂತೆ ನಮಗೆ ಆತುರವಿಲ್ಲ. ಒಂದೆರಡು ದಿನಗಳ ಮಟ್ಟಿಗೆ ಕಾದು ನೋಡೋಣ ಎಂದು ನಿಯೋಗಕ್ಕೆ ಸಲಹೆ ಮಾಡಿದ್ದಾರೆ.

ಹದಿನೈದು ಶಾಸಕರು ರಾಜೀನಾಮೆ ನೀಡಿರುವ ಬಗ್ಗೆ ಕರ್ನಾಟಕದ ವಿಧಾನಸಭೆ ಸ್ಪೀಕರ್ ತಮ್ಮ ನಿರ್ಧಾರ ಏನೆಂಬುದನ್ನು ಪ್ರಕಟಿಸಿಲ್ಲ. ಒಂದೆಡೆ ಶಾಸಕರು ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದೇವೆ ಎಂದು ಹೇಳಿದ್ದಾರೆ. ಮತ್ತೊಂದೆಡೆ ಅವರು ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್-ಜೆಡಿಎಸ್ ನಾಯಕರು ದೂರು ಸಲ್ಲಿಸಿದ್ದಾರೆ.ಆದರೆ, ಸ್ಪೀಕರ್ ಯಾವುದೇ ತೀರ್ಮಾನವನ್ನು ಪ್ರಕಟಿಸಿಲ್ಲ. ಅವರು ತೆಗೆದುಕೊಳ್ಳುವ ನಿರ್ಧಾರದ ನಂತರ ಸರ್ಕಾರ ರಚನೆ ಮಾಡುವ ಪ್ರಕ್ರಿಯೆಯನ್ನು ಆರಂಭಿಸೋಣ ಎಂದು ಹೇಳಿರುವುದಾಗಿ ತಿಳಿದು ಬಂದಿದೆ.
ರಾಜೀನಾಮೆಯನ್ನು ಅಂಗೀಕರಿಸುವುದು, ಇಲ್ಲವೇ ಅನರ್ಹಗೊಳಿಸಿದರೂ ಕಾನೂನು ಹೋರಾಟ ನಡೆಸಬಹುದು. ಆದರೆ, ಸ್ಪೀಕರ್ ತಮ್ಮ ನಿಲುವು ಏನೆಂಬುದನ್ನು ತಿಳಿಸುವವರೆಗೂ ಸರ್ಕಾರ ರಚನೆ ಮಾಡುವುದು ಅಷ್ಟು ಸಮಂಜಸವಲ್ಲ. ಈ ಹಿಂದಿನ ಕಹಿ ಅನುಭವಗಳು ನಿಮಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆ ಮಾಡಲು ಹಕ್ಕು ಮಂಡಿಸಿದರೆ ನಿಮ್ಮನ್ನು ಆಹ್ವಾನಿಸಬಹುದು. ಈ ಹಿಂದೆ ಯಡಿಯೂರಪ್ಪಗೆ ಬಹುಮತ ಸಾಬೀತುಪಡಿಸಲು 15 ದಿನಗಳ ಕಾಲ ಕಾಲಾವಕಾಶ ನೀಡಿದ್ದಕ್ಕೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿ ಒಂದೇ ದಿನದಲ್ಲಿ ಬಹುಮತ ಸಾಬೀತುಪಡಿಸಲು ಸೂಚನೆ ಕೊಟ್ಟಿತ್ತು.ಈಗ ರಾಜ್ಯಪಾಲರು ಮೂರರಿಂದ ನಾಲ್ಕು ದಿನಗಳೊಳಗೆ ಬಹುಮತ ಸಾಬೀತುಪಡಿಸಲು ನಿರ್ದೇಶಿಸಬಹುದು.
ಶಾಸಕರ ರಾಜೀನಾಮೆ ಇತ್ಯಾರ್ಥವಾಗುವವರೆಗೂ ವಿಧಾನಸಭೆಯ ಸಂಖ್ಯೆ ಯಥಾಸ್ಥಿತಿಯಲ್ಲೇ ಇರುತ್ತದೆ.ನಾಳೆ ಯಡಿಯೂರಪ್ಪ ವಿಶ್ವಾಸಮತ ಯಾಚನೆ ಮಾಡುವ ವೇಳೆ ಪ್ರತಿಪಕ್ಷಗಳು 113 ಸದಸ್ಯರ ಬಲವನ್ನೇ ತೋರಿಸಬೇಕೆಂದು ಪಟ್ಟು ಹಿಡಿದರೆ ಕಾನೂನಿನ ಸಮಸ್ಯೆ ಎದುರಾಗುತ್ತದೆ.ಈ ಸಂದರ್ಭದಲ್ಲಿ ರಾಜ್ಯಪಾಲರು ಕೂಡ ಏನು ಮಾಡಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿ ನಿರ್ಮಾಣವಾದರೆ ಪ್ರತಿಪಕ್ಷಗಳು ಪುನಃ ನ್ಯಾಯಾಲಯದ ಮೆಟ್ಟಿಲೇರಬಹುದು.ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಮುಂದುವರೆಯಬೇಕೆಂದು ಸೂಚನೆ ಕೊಟ್ಟಿದ್ದಾರೆ.

ಸರ್ಕಾರ ರಚನೆ ಮಾಡುವ ವಿಷಯದಲ್ಲಿ ನಮ್ಮದೇನು ಅಭ್ಯಂತರವಿಲ್ಲ. ಆದರೆ, ಕಾನೂನಿನ ಸಮಸ್ಯೆಗಳು ಉಂಟಾಗದಂತೆ ಎಚ್ಚರಿಕೆ ಹೆಜ್ಜೆ ಇಡಬೇಕು.ಆತುರಪಟ್ಟು ಮುಂದುವರೆದರೆ ನಮಗೆ ತಿರುಗುಬಾಣವಾಗಬಹುದು.
ಸ್ಪೀಕರ್ ಅವರು 3-4 ದಿನಗಳಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸುವ ಸಂಭವವಿದೆ.ಸುಪ್ರೀಂಕೋರ್ಟ್ ಈ ಪ್ರಕರಣವನ್ನು ಪರಾಮರ್ಶೆ ಮಾಡುತ್ತಿರುವುದರಿಂದ ಸ್ಪೀಕರ್ ಕೂಡ ವಿಳಂಬ ನೀತಿ ಅನುಸರಿಸುವ ಸಾಧ್ಯತೆಗಳಿಲ್ಲ. 14 ತಿಂಗಳೇ ಕಾದಿರುವಾಗ ಇನ್ನು ನಾಲ್ಕು ದಿನ ಕಾಯಬಾರದೆ. ಎಲ್ಲರೂ ಸಹನೆಯಿಂದ ವರ್ತಿಸಬೇಕು.ಕಾನೂನು ಬಿಟ್ಟು ಸರ್ಕಾರ ರಚನೆ ಮಾಡುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ ಎನ್ನಲಾಗಿದೆ.

ಕಾನೂನಿನ ತೊಡಕುಗಳು ಹಂತ ಹಂತವಾಗಿ ನಿವಾರಣೆಯಾಗುತ್ತಿವೆ. ನಾಯಕತ್ವ ವಿಷಯದಲ್ಲೂ ಗೊಂದಲಗಳಿಲ್ಲ. ಯಡಿಯೂರಪ್ಪನವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಈಗಾಗಲೇ ಘೋಷಿಸಲಾಗಿದೆ.ಸ್ಪೀಕರ್ ನಿರ್ಧಾರವನ್ನು ಕಾಯೋಣ. ಅಲ್ಲಿಯ ತನಕ ಸರ್ಕಾರ ರಚನೆ ಮಾಡುವ ದುಸ್ಸಾಹಸಕ್ಕೆ ಕೈ ಹಾಕಬೇಡಿ ಎಂದು ಅಮಿತ್ ಶಾ ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ