ಬಿಹಾರ್, ಜಾರ್ಖಂಡ್, ಯುಪಿಯಲ್ಲಿ ಸಿಡಿಲು ಬಡಿದು ಕಳೆದ 24 ಗಂಟೆಗಳಲ್ಲಿ 70ಕ್ಕೂ ಅಧಿಕ ಸಾವು

ಪಾಟ್ನಾ: ಬಿಹಾರ, ಜಾರ್ಖಂಡ್ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಕಳೆದ 24 ಗಂಟೆಗಳಲ್ಲಿ ಸಿಡಿಲು ಬಡಿದು ಕನಿಷ್ಠ 73 ಜನರು ಸಾವನ್ನಪ್ಪಿದ್ದಾರೆ ಮತ್ತು ಇನ್ನೂ ಅನೇಕರು ಗಾಯಗೊಂಡಿದ್ದಾರೆ. ಬಿಹಾರ ರಾಜ್ಯ ಒಂದರಲ್ಲೇ ಸಿಡಿಲಿಗೆ 39 ಜನರು ಬಲಿಯಾಗಿದ್ದಾರೆ. ಅದಲ್ಲದೆ ಜಾರ್ಖಂಡ್‌ನಲ್ಲಿ 28 ಮತ್ತು ಉತ್ತರಪ್ರದೇಶದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ.

ಜಾರ್ಖಂಡ್‌ನಲ್ಲಿ, ಜಮ್ತಾರಾ ಮತ್ತು ಲತೇಹರ್‌ನಲ್ಲಿ ತಲಾ ಆರು, ಚತ್ರಾದಲ್ಲಿ ನಾಲ್ಕು, ಗರ್ಹ್ವಾ ಮತ್ತು ಡುಮ್ಕಾದಲ್ಲಿ ತಲಾ ಮೂರು, ಗಿರಿಡಿಹ್ ಮತ್ತು ಪಕೂರ್‌ನಲ್ಲಿ ತಲಾ ಇಬ್ಬರು ಮತ್ತು ಧನ್ಬಾದ್ ಮತ್ತು ದಿಯೋಘರ್‌ನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಅದಲ್ಲದೆ ಸಿಡಿಲಿನಿಂದಾಗಿ ಧನ್ಬಾದ್ ಮತ್ತು ಲತೇಹಾರ್ನಲ್ಲಿ ಮೂರು ಮತ್ತು ಚತ್ರಾದಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಾರ್ಖಂಡ್ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಸಂತ್ರಸ್ತರ ಕುಟುಂಬಗಳಿಗೆ 4 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.

ಬಿಹಾರದ ಪ್ರವಾಹ ಪರಿಸ್ಥಿತಿ ಭೀಕರವಾಗಿ ಮುಂದುವರೆದಿದ್ದು, ಸಾವಿನ ಸಂಖ್ಯೆ 123 ಕ್ಕೆ ತಲುಪಿದೆ ಮತ್ತು 12 ಜಿಲ್ಲೆಗಳ 105 ಬ್ಲಾಕ್‌ಗಳಲ್ಲಿ 81 ಲಕ್ಷಕ್ಕೂ ಹೆಚ್ಚು ಜನರಿಗೆ ತೊಂದರೆಯಾಗಿದೆ. ಸಂತ್ರಸ್ಥರಿಗಾಗಿ ಒಟ್ಟು 54 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, ಇಲ್ಲಿ 29,400 ಪ್ರವಾಹ ಪೀಡಿತರು ಆಶ್ರಯ ಪಡೆದಿದ್ದಾರೆ. 812 ಸಮುದಾಯ ಅಡಿಗೆಮನೆಗಳನ್ನು ಸ್ಥಾಪಿಸಲಾಗಿದೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್‌ಡಿಆರ್‌ಎಫ್) ದ ಇಪ್ಪತ್ತೊಂಬತ್ತು ತಂಡಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ರಾಜ್ಯದಲ್ಲಿ ಬೀಡುಬಿಟ್ಟಿವೆ.

ಮುಂದಿನ ಎರಡು ದಿನಗಳವರೆಗೆ ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಬಿಹಾರದಾದ್ಯಂತದ ಹಲವು ಪ್ರದೇಶಗಳಲ್ಲಿ “ಗುಡುಗು ಸಹಿತ ಭಾರೀ ಮಳೆಯಾಗಲಿದೆ” ಎಂದು ಭಾರತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಜುಲೈ 16 ರಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದಲ್ಲಿ ಈವರೆಗೆ ಒಟ್ಟು 1.25 ಲಕ್ಷ ಜನರನ್ನು ರಕ್ಷಿಸಲಾಗಿದೆ ಎಂದು ಹೇಳಿದ್ದರು. ಧಾರಾಕಾರ ಮಳೆಯ ನಂತರ ನದಿಗಳು ತುಂಬಿ ಹರಿಯುತ್ತಿವೆ. ನದಿಗಳಲ್ಲಿ ನೀರಿನ ಮಟ್ಟ ಏರುತ್ತಿರುವುದರಿಂದ ಶಿಯೋಹರ್, ಧರ್ಬಂಗಾ, ಸೀತಮಾರ್ಹಿ, ಉತ್ತರ ಚಂಪಾರನ್, ಮಧುಬನಿ, ಅರೇರಿಯಾ, ಮತ್ತು ಕಿಶಂಗಂಜ್ ಸೇರಿದಂತೆ ಸುಮಾರು 12 ಜಿಲ್ಲೆಗಳು ತೀವ್ರವಾಗಿ ಪರಿಣಾಮ ಬೀರಿವೆ. ಜುಲೈ 19 ರಂದು ಮುಖ್ಯಮಂತ್ರಿ 6,000 ರೂ.ಗಳ ನಗದು ಪರಿಹಾರವನ್ನು ನೇರವಾಗಿ ಪ್ರವಾಹ ಪೀಡಿತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ಕಳುಹಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ