ಬೆಂಗಳೂರು, ಜು.24- ಪಕ್ಷಾಂತರ ನಿಷೇಧ ಕಾಯ್ದೆಯಡಿ ದೂರು ಬಂದಾಗ ಏಕಾಏಕಿ ಶಾಸಕರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ. ಇಲ್ಲಿ ಪ್ರಾಕೃತಿಕ ನ್ಯಾಯದ ಅಂಶ ಮುಖ್ಯವಾಗುತ್ತದೆ. ಅದಕ್ಕಾಗಿಯೇ ಹಲವಾರು ಪ್ರಕ್ರಿಯೆಗಳು ನಡೆದು ಅಂತಿಮ ತೀರ್ಮಾನ ಕೈಗೊಳ್ಳುವುದು ಅಷ್ಟು ಸುಲಭದ ಮಾತಲ್ಲ..!
ಶಾಸಕರು ತಮ್ಮ ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದಾಗ ಅದನ್ನು ವಿಧಾನಸಭೆ ಸ್ಪೀಕರ್ ತಮ್ಮ ಪರಿಮಿತಿಯಲ್ಲಿ ಅದನ್ನು ಸ್ವೀಕರಿಸಬೇಕು ಎಂದು ಸಂವಿಧಾನದಲ್ಲೇ ತಿಳಿಸಿದೆ.
ಇದನ್ನೇ ಸುಪ್ರೀಂಕೋರ್ಟ್ ಕೂಡ ಪ್ರತಿಪಾದಿಸಿದ್ದು, ಒಬ್ಬ ಶಾಸಕನ ರಾಜೀನಾಮೆ ಪಾವಿತ್ರ್ಯತೆಯನ್ನು ಕಾಪಾಡಬೇಕು.ಅವರ ಮೇಲೆ ಯಾವುದೇ ರೀತಿಯ ಬಲವಂತ ಹಾಗೂ ಒತ್ತಡ ಹೇರಬಾರದು ಎಂದು ತಿಳಿಸಿತ್ತು.
ಚುನಾಯಿತ ಪಕ್ಷದಲ್ಲಿದ್ದು, ಅನ್ಯ ಪಕ್ಷದ ಸಭೆಗಳಲ್ಲಿ ಅಥವಾ ಸಕ್ರಿಯವಾಗಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅವರ ಜತೆ ಗುರುತಿಸಿಕೊಂಡರೆ ಮತ್ತು ಆ ಪಕ್ಷದ ನಾಯಕರ ಜತೆ ಸಂಭಾಷಣೆಯಲ್ಲಿ ತೊಡಗಿದರೆ ಮತ್ತಿತರ ಸಾಕ್ಷ್ಯಾಧಾರಗಳು ಇದ್ದರೆ ಅದು ಪಕ್ಷಾಂತರ ನಿಷೇಧ ಕಾಯ್ದೆಯಡಿ ಬರುತ್ತದೆ.
ಮೇಲ್ನೋಟಕ್ಕೆ ಸ್ಪೀಕರ್ ಅವರಿಗೆ ಇವರು ಪಕ್ಷಾಂತರ ಮಾಡುತ್ತಿದ್ದಾರೆ ಎಂಬ ಗುಮಾನಿ ಇದ್ದರೂ ಅದನ್ನುತೋರ್ಪಡಿಸುವಂತಿಲ್ಲ.ಶಾಸಕರ ರಾಜೀನಾಮೆ ಸ್ವೀಕರಿಸಿ ಅದು ಕ್ರಮಬದ್ಧವಾಗಿದೆಯೇ ಎಂದು ತಿಳಿದು ಅದನ್ನು ಅಂಗೀಕರಿಸಬಹುದು ಅಥವಾ ಅವರನ್ನು ಖುದ್ದಾಗಿ ಕರೆಸಿಕೊಂಡು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದೀರಾ ಎಂದು ಕೇಳಿ ಮುಂದಿನ ಕ್ರಮ ಕೈಗೊಳ್ಳಬಹುದು.
ಇದರ ನಡುವೆ ರಾಜೀನಾಮೆ ನೀಡುವ ಶಾಸಕರು ಅದು ಅಂಗೀಕಾರಗೊಂಡಾಗ ಆರು ವಾರಗಳ ಕಾಲ ಅವರು ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡು ಸಚಿವ ಸ್ಥಾನ ಅಥವಾ ಸರ್ಕಾರದ ಹುದ್ದೆಗಳನ್ನು ಸ್ವೀಕರಿಸುವಂತಿಲ್ಲ ಎಂಬುದು ಕಾನೂನು ಪಂಡಿತರ ಅನಿಸಿಕೆ.
ಆದರೂ ರಾಜೀನಾಮೆ ಅಂಗೀಕಾರವಾಗುವವರೆಗೆ ಅನ್ಯ ಪಕ್ಷದ ನಾಯಕರೊಂದಿಗೆ ದೂರವಾಣಿ ಸಂಭಾಷಣೆಯಾಗಲಿ, ಅವರ ಜತೆ ಕಾಣಿಸಿಕೊಳ್ಳುವುದಾಗಲಿ ಅಥವಾ ಅನುಮಾನಾಸ್ಪದ ವರ್ತನೆ, ನಡವಳಿಕೆಗಳಿದ್ದರೆ ಆಗ ಪಕ್ಷಾಂತರ ನಿಷೇಧ ಕಾಯ್ದೆ ಅವರ ಮೇಲೆ ತೂಗುಗತ್ತಿಯಾಗಬಹುದು.
ಒಟ್ಟಾರೆ ಸ್ಪೀಕರ್ ಅವರ ಸ್ಥಾನ ಪವಿತ್ರವಾದದ್ದು.ಸ್ಪೀಕರ್ ನಿಜವಾಗಿಯೂ ಕಾನೂನಾತ್ಮಕವಾದ ಪಾಂಡಿತ್ಯವನ್ನು ಹೊಂದಿದ್ದಲ್ಲಿ ಅವರು ತೆಗೆದುಕೊಳ್ಳುವ ನಿರ್ಧಾರಗಳು ಅನೂರ್ಜಿತವಾಗುವುದಿಲ್ಲ. ಆದರೂ ಪಕ್ಷಾಂತರ ನಿಷೇಧ ಕಾಯ್ದೆ ಪ್ರಸ್ತುತ ಸ್ಥಿತಿಯಲ್ಲಿ ಅಷ್ಟು ಬಲಿಷ್ಠವಾಗಿಲ್ಲ ಎಂಬುದು ಕೂಡ ಗಮನಿಸಬೇಕಾದ ಅಂಶ.