ವಿಧಾನಸಭೆಯಲ್ಲಿ ಅಂತಿಮ ಚರ್ಚೆ

Varta Mitra News

ಬೆಂಗಳೂರು, ಜು.23-ನೋಟು ಅಮಾನೀಕರಣ ಕುರಿತು ಸಮರ್ಥನೆ ಮಾಡಿಕೊಳ್ಳುವುದೇ ಅಪರಾಧ ಎಂದು ಆಡಳಿತ ಪಕ್ಷದ ಶಾಸಕರು ವಾಗ್ದಾಳಿ ನಡೆಸಿದರೆ, ನೋಟು ಅಮಾನೀಕರಣದ ತೀರ್ಪು ಸರಿಯಾಗಿದೆ ಎಂಬ ಕಾರಣಕ್ಕಾಗಿಯೇ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಿದ್ದಾರೆ ಎಂದು ಪ್ರತಿಪಕ್ಷದ ಶಾಸಕರು ಸಮರ್ಥಿಸಿಕೊಂಡ ಘಟನೆ ವಿಧಾನಸಭೆಯಲ್ಲಿಂದು ನಡೆಯಿತು.
ವಿಶ್ವಾಸ ಮತ ಯಾಚನೆ ವೇಳೆ ಸಚಿವ ಯು.ಟಿ.ಖಾದರ್ ಮಾತನಾಡುವ ಮಧ್ಯೆ ನೋಟು ಅಮಾನೀಕರಣದಿಂದ 150ಕ್ಕೂ ಹೆಚ್ಚು ಮಂದಿಜನರು ಸಾವನ್ನಪ್ಪಿದರು.ನಮ್ಮ ದುಡ್ಡನ್ನು ನಾವು ತೆಗೆದುಕೊಳ್ಳಲು ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಬಂದಿತ್ತು ಎಂದು ಆರೋಪಿಸಿ ವಾಗ್ದಾಳಿ ನಡೆಸಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ನೋಟು ಅಮಾನೀಕರಣದಿಂದ ಯಾರೂ ಹಾಳಾಗಿಲ್ಲ. ಎಲ್ಲರೂ ಉದ್ಧಾರ ಆಗಿದ್ದಾರೆ. ಅದರಿಂದಾಗಿಯೇ ಮೋದಿಯವರು ಮತ್ತೆ ಪ್ರಧಾನಿಯಾಗಿದ್ದಾರೆ ಎಂದು ಪ್ರತಿ ದಾಳಿ ನಡೆಸಿದರು.
ಶಾಸಕರಾದ ಡಾ.ರಂಗನಾಥ್ ಅವರು ನೋಟು ಅಮಾನೀಕರಣಕ್ಕೆ ಆರ್‍ಬಿಐ ಸಮ್ಮತಿಸಿರಲಿಲ್ಲ ಎಂದು ತಿರುಗೇಟು ನೀಡಿದರು.
ಶಾಸಕಿ ಅಂಜಲಿ ನಿಂಬಾಳ್ಕರ್ ಮಾತನಾಡಿ, ಸರಿಯಾದ ಪದ್ಧತಿ ಅನುಸರಿಸದೆ ಇದ್ದುದರಿಂದ ನೋಟು ಅಮಾನೀಕರಣದಿಂದ ಹಾನಿಯಾಗಿದೆ ಎಂದರು.
ಇದಕ್ಕೆ ಉತ್ತರಿಸಿದ ಜೆ.ಸಿ.ಮಾಧುಸ್ವಾಮಿ, ಯಾವುದೇ ಹೊಸ ಯೋಜನೆ ಜಾರಿಗೆ ತರುವಾಗ ಸಣ್ಣಪುಟ್ಟ ಲೋಪದೋಷಗಳಿರುತ್ತವೆ. ಆದರೆ ಒಟ್ಟಾರೆ ಫಲಿತಾಂಶದ ಬಗ್ಗೆ ನಾವು ಗಮನ ಇಡಬೇಕು ಎಂದರು.
ಸಣ್ಣಪುಟ್ಟ ಲೋಪದೋಷಗಳು ಎನ್ನುವ ಮೂಲಕ ಅಷ್ಟು ಮಂದಿಯ ಅಮಾಯಕ ಜನರ ಸಾವನ್ನು ನೀವು ಸಮರ್ಥಿಸಿಕೊಳ್ಳುತ್ತೀರ ಎಂದು ಪ್ರತಿ ಸವಾಲು ಹಾಕಿದರು.
ವಿಶ್ವಾಸ ಮತಯಾಚನೆ ಬಿಟ್ಟು ಚರ್ಚೆಯ ಹಾದಿ ಇನ್ನೆತ್ತಲೋ ಹೋಗುತ್ತಿರುವುದನ್ನು ಗಮನಿಸಿದ ಸ್ಪೀಕರ್ ಅವರು, ಹೇಗೂ ಬಿಡುವಾಗಿದ್ದೀರಿ.ರಕ್ಷಣಾ ಇಲಾಖೆ ಹಾಗೂ ವಿದೇಶಾಂಗ ಇಲಾಖೆ ಬಗ್ಗೆಯೂ ಮಾತನಾಡಿಬಿಡಿ ಎಂದು ಚಾಟಿ ಬೀಸಿದರು.
ಅಷ್ಟಕ್ಕೂ ಸುಮ್ಮನಾಗದ ಶಾಸಕರು ವಾದ-ಪ್ರತಿವಾದ ಮುಂದುವರೆಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ ಮಾತನಾಡಿ, ನೋಟು ಅಮಾನೀಕರಣ ದೊಡ್ಡ ಹಗರಣ.ಅದನ್ನು ಸಮರ್ಥಿಸಿಕೊಳ್ಳುವುದೇ ಅಪರಾಧ.ಬಿಜೆಪಿಯವರು ಜಿದ್ದಿಗೆ ಬಿದ್ದು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಶಾಸಕ ಆನಂದ್ ನ್ಯಾಮೇಗೌಡ ಮಾತನಾಡಿ, ನೋಟು ಅಮಾನೀಕರಣ ಉದ್ದೇಶವೇ ಬಿಜೆಪಿಯವರಿಗೆ ಅರ್ಥವಾಗಲಿಲ್ಲ, ಹಾಗಾಗಿ ಅದರ ಉದ್ದೇಶವೂ ಈಡೇರಲಿಲ್ಲ ಎಂದು ಆರೋಪಿಸಿದಾಗ, ಪ್ರತಿಪಕ್ಷದ ಶಾಸಕರು ಓ…. ಎಂದು ಕೂಗುವ ಮೂಲಕ ನಿಮ್ಮನ್ನೇ ಆರ್ಥಿಕ ಸಚಿವರನ್ನಾಗಿ ಮಾಡಿಬಿಡೋಣ ಎಂದು ಲೇವಡಿ ಮಾಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‍ನ ಹಿರಿಯ ಶಾಸಕ ತನ್ವೀರ್ ಸೇಠ್, ಹೊಸದಾಗಿ ಆಯ್ಕೆಯಾಗಿ ಬಂದ ಶಾಸಕರಿಗೂ ಬಿಜೆಪಿಯವರು ಆರ್ಥಿಕ ಸಚಿವರನ್ನಾಗಿ ಮಾಡುವ ಆಮಿಷವೊಡ್ಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಚರ್ಚೆ ಇದೇ ರೀತಿ ಮುಂದುವರೆದಾಗ ಸ್ಪೀಕರ್ ಅವರು ಯಾರು ಎಷ್ಟೊತ್ತು, ಏನು ಬೇಕಾದರೂ ಮಾತನಾಡಿ, ಆದರೆ ಸಂಜೆ 6 ಗಂಟೆಗೆ ವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕುತ್ತೇನೆ. ಆವರೆಗೂ ನಾನು ಏನನ್ನೂ ಅಡ್ಡಿಪಡಿಸುವುದಿಲ್ಲ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ