ಬೆಂಗಳೂರು, ಜು.22-ವಿಶ್ವಾಸಮತಯಾಚನೆಗೆ ಅನಗತ್ಯ ಕಾಲಹರಣ ಮಾಡಿ ವಿಳಂಬ ಮಾಡಲಾಗುತ್ತಿದೆ.ಸಮಯ ವ್ಯರ್ಥ ಮಾಡುವ ಚರ್ಚೆಗೆ ಅವಕಾಶ ಕೊಡುವ ಬದಲು ಪ್ರತಿಯೊಂದು ಪಕ್ಷಕ್ಕೂ ಕಾಲಮಿತಿ ನಿಗದಿ ಮಾಡಿ, ಇದೇ ದಿನದಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಬಿಜೆಪಿ ನಾಯಕರು ಒತ್ತಾಯಿಸಿದರು.
ವಿಧಾನಸಭೆಯಲ್ಲಿ ಕಲಾಪ ಒಂದು ಗಂಟೆ ತಡವಾಗಿ ಆರಂಭವಾಗಿದ್ದಕ್ಕೆ ಸ್ಪಷ್ಟನೆ ನೀಡಿದ ಸಭಾಧ್ಯಕ್ಷ ರಮೇಶ್ಕುಮಾರ್ ಅವರು ಇಂದು ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭವಾಗಬೇಕಿತ್ತು. ನಾನು 10.30ಕ್ಕೆ ಕಚೇರಿಗೆ ಬಂದು ಕುಳಿತಿದ್ದೆ.ಮೊದಲು ಮಾಧುಸ್ವಾಮಿ ಮತ್ತು ಅವರ ಸಹೋದ್ಯೋಗಿಗಳು ಬಂದು ನನ್ನನ್ನು ಭೇಟಿ ಮಾಡಿದರು.ನಂತರ ಮುಖ್ಯಮಂತ್ರಿ ಹಾಗೂ ಇತರ ಐದಾರು ಮಂದಿ ಬಂದು ನನ್ನನ್ನು ಭೇಟಿ ಮಾಡಿದರು.
ನಿನ್ನೆ ಸಂಜೆ ಸುಪ್ರೀಂಕೋರ್ಟ್ನಿಂದ ಕೆಲವು ಕಾಗದಗಳು ನನಗೆ ಬಂದಿದ್ದವು.ಅವನ್ನು ಓದಲಾಗಿರಲಿಲ್ಲ. ಇಂದು ಬೆಳಗ್ಗೆ ಅವುಗಳನ್ನು ಓದಿ ಏನಾದರೂ ಸೂಚನೆ ಇದೆಯೇ ಎಂಬುದನ್ನು ಪರಿಶೀಲನೆ ನಡೆಸಬೇಕಾಯಿತು.ಹೀಗಾಗಿ ಒಂದು ಗಂಟೆ ತಡವಾಗಿ ಅಧಿವೇಶನ ಆರಂಭವಾಗಿದೆ ಎಂದು ವಿವರಿಸಿದರು.
ಸಭಾನಾಯಕರು ವಿಶ್ವಾಸ ಮತಯಾಚನೆಯನ್ನು ಕೋರಿದ್ದಾರೆ.ಈ ಸದನದ ಮೂಲಕ ಒಂದು ಸಂದೇಶ ಹೋಗಬೇಕು.ಅನಗತ್ಯ ವಿಳಂಬವಾಗುತ್ತಿದೆ ಎಂದು ನನ್ನ ಮೇಲೆ ಆರೋಪ ಮಾಡಿ ನನ್ನನ್ನು ಬಲಿಪಶು ಮಾಡಬೇಡಿ.ಎಲ್ಲರೂ ಕಾಲಮಿತಿಯನ್ನು ಗಮನದಲ್ಲಿಟ್ಟುಕೊಂಡು ಚರ್ಚೆ ಮಾಡಿ.ನಾನು ಯಾರ ಮೇಲೂ ಕಾಲಮಿತಿಯ ಕಡಿವಾಣ ಹಾಕದಂತೆ ಎಚ್ಚರಿಕೆ ವಹಿಸಿ ಎಂದು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿಯ ಜೆ.ಸಿ.ಮಾಧುಸ್ವಾಮಿಯವರು, ವಿಶ್ವಾಸಮತ ಯಾಚನೆಯನ್ನು ಇವತ್ತೇ ಮುಗಿಸಲು ಕ್ರಮಕೈಗೊಳ್ಳಬೇಕು. ಶುಕ್ರವಾರದ ಕಲಾಪದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರವೇ ವಿಶ್ವಾಸಮತಯಾಚನೆ ಮುಗಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.ಸಭಾನಾಯಕರು ಮತ್ತು ಶಾಸಕಾಂಗ ಪಕ್ಷದ ನಾಯಕರು ಮಾತನಾಡುವುದಾದರೆ ನಾವು ಅದಕ್ಕೆ ಅಡ್ಡಿ ಪಡಿಸುವುದಿಲ್ಲ. ಮಧ್ಯಾಹ್ನದವರೆಗೂ ಅವರು ಎಲ್ಲವನ್ನೂ ಮಾತನಾಡಲಿ.ನಮಗೂ ಒಂದು ಗಂಟೆ ಮಾತನಾಡುವ ಅವಕಾಶ ಕೊಡಿ.ನಂತರ ವಿಶ್ವಾಸಮತವನ್ನು ಮತಕ್ಕೆ ಹಾಕಿ ಎಂದು ಮನವಿ ಮಾಡಿದರು.
ಈ ವೇಳೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ಬಜೆಟ್ ಸೇರಿದಂತೆ ವಿವಿಧ ವಿಷಯಗಳ ಮೇಲೆ ಎಲ್ಲಾ ಪಕ್ಷಗಳಿಗೂ ಸಮಯವನ್ನು ನಿಗದಿ ಮಾಡಲಾಗುತ್ತದೆ. ಅದೇ ರೀತಿ ಈ ಸಂದರ್ಭದಲ್ಲೂ ಸಮಯ ನಿಗದಿ ಮಾಡಿ.ವಿಶ್ವಾಸ ಮತಯಾಚನೆಯನ್ನು ಶೀಘ್ರವೇ ಮುಗಿಸಿ ಎಂದು ಮನವಿ ಮಾಡಿದರು.
ನಾನು ಈಗಾಗಲೇ ಸಮಯದ ಬಿಸಿಯನ್ನು ಪ್ರತಿಯೊಬ್ಬರೂ ಹಾಕಿಕೊಳ್ಳಬೇಕು ಎಂದು ಸಲಹೆ ನೀಡಿದ್ದೇನೆ. ನಿಮ್ಮ ಮಾತುಗಳನ್ನೇ ನಾನು ನನ್ನ ಧಾಟಿಯಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆ. ಎಲ್ಲರೂ ಇದನ್ನು ಅರ್ಥಮಾಡಿಕೊಳ್ಳಬೇಕು, ನನ್ನಿಂದ ವಿಳಂಬವಾಗುತ್ತಿದೆ ಎಂಬ ಅಪಪ್ರಚಾರ ಮಾಡಬಾರದು ಎಂದು ಮನವಿ ಮಾಡಿದರು.