ಬೆಂಗಳೂರು, ಜು.22- ಸಮ್ಮಿಶ್ರ ಸರ್ಕಾರ ಪತನದ ಅಂಚಿನರಲ್ಲಿರುವ ಸಂದರ್ಭದಲ್ಲೇ ಸ್ಪೀಕರ್ ರಮೇಶ್ಕುಮಾರ್ ಅವರು ಕಾಂಗ್ರೆಸ್ನ 10 ಮಂದಿ ಶಾಸಕರ ಅನರ್ಹತೆ ವಿಚಾರ ಕುರಿತು ತುರ್ತು ನೋಟಿಸ್ ಜಾರಿ ಮಾಡಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಅವರು ಜು.11ರಂದು ಮತ್ತು ಜು.18ರಂದು ಎರಡು ಹಂತದಲ್ಲಿ ಸ್ಪೀಕರ್ ಅವರಿಗೆ ದೂರು ನೀಡಿದ್ದು, ಪಕ್ಷದ ಶಿಸ್ತು ಉಲ್ಲಂಘಿಸಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಶಾಸಕರಾದ ರಮೇಶ್ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಪ್ರತಾಪ್ಗೌಡ ಪಾಟೀಲ್, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್, ಮುನಿರತ್ನ, ಸುಧಾಕರ್ ಹಾಗೂ ಎಂ.ಟಿ.ಬಿ.ನಾಗರಾಜ್ ಅವರುಗಳನ್ನು ಅನರ್ಹಗೊಳಿಸುವಂತೆ ದೂರು ನೀಡಿದ್ದರು.
ದೂರು ಆಧರಿಸಿ ಜು.18ರಂದು ತುರ್ತು ನೋಟಿಸ್ ನೀಡಿರುವ ಸ್ಪೀಕರ್ ಅವರು ಮೂರು ದಿನಗಳ ಒಳಗಾಗಿ ನೋಟಿಸ್ಗೆ ಉತ್ತರ ನೀಡಬೇಕು ಮತ್ತು ನಾಳೆ (ಜು.23) ವಿಧಾನಸೌಧದ ಮೊದಲ ಮಹಡಿಯ 119ರ ಸಂಖ್ಯೆಯ ಕೊಠಡಿಯಲ್ಲಿ ನಡೆಯುವ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದ್ದಾರೆ.
10 ಷೆಡ್ಯೂಲ್ ಕರ್ನಾಟಕ ವಿಧಾನಸಭೆಯ ನಿಯಮಾವಳಿ 6ರ ಅನುಸಾರ ಅನರ್ಹತೆ ಪ್ರಕರಣ ಕುರಿತು ವಿಚಾರಣೆ ನಡೆಯಲಿದ್ದು, ಖುದ್ದಾಗಿ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.