ಬೆಂಗಳೂರು, ಜು.21-ವಿಶ್ವಾಸಮತ ಯಾಚನೆಗೆ ನಾಳೆ ದೋಸ್ತಿ ಪಕ್ಷಗಳು ಸ್ವಯಂ ಕಾಲಮಿತಿ ವಿಧಿಸಿಕೊಂಡಿದ್ದು ಅದರ ಅನುಸಾರ ಶತಾಯಗತಾಯ ಸರ್ಕಾರ ಉಳಿಸಿಕೊಳ್ಳಲು ಜೆಡಿಎಸ್-ಕಾಂಗ್ರೆಸ್ ಉಭಯ ಪಕ್ಷಗಳ ನಾಯಕರು ನಿನ್ನೆಯಿಂದ ಅಖಾಡಕ್ಕಿಳಿದು ಬಿರುಸಿನ ಕಾರ್ಯತಂತ್ರ ನಡೆಸುತ್ತಿದ್ದಾರೆ.
ಒಂದೆಡೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅಖಾಡಕ್ಕಿಳಿದರೆ, ಮತ್ತೊಂದೆಡೆ ಕಾಂಗ್ರೆಸ್ ಪಾಳಯದಿಂದ ಸಿದ್ದರಾಮಯ್ಯ ಅತೃಪ್ತರ ಜೊತೆ ಮಾತುಕತೆ ನಡೆಸುತ್ತಿದ್ದಾರೆ.
ಇಂದು ಬೆಳಗ್ಗೆ ಸಿದ್ದರಾಮಯ್ಯ ಅವರು ತಮ್ಮ ಕಾವೇರಿ ನಿವಾಸದಿಂದ ಖಾಸಗಿ ಕಾರಿನಲ್ಲಿ ಸಚಿವ ಜಮೀರ್ ಅಹಮ್ಮದ್, ವಿಧಾನಪರಿಷತ್ ಮಾಜಿ ಸದಸ್ಯ ನಜೀರ್ಅಹಮ್ಮದ್ ಜೊತೆ ಅಜ್ಞಾತ ಸ್ಥಳಕ್ಕೆ ತೆರಳಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹಮ್ಮದ್ ಖಾನ್, ನಾವು ಖಾಸಗಿ ಕೆಲಸದ ಮೇಲೆ ಬಂದಿದ್ದೇವೆ. ದಯವಿಟ್ಟು ಹಿಂಬಾಲಿಸಬೇಡಿ ಎಂದು ಮನವಿ ಮಾಡಿದರು.
ಮೂಲಗಳ ಪ್ರಕಾರ ಮುಂಬೈ ಸೇರಿದ್ದ ಅತೃಪ್ತ ಶಾಸಕರು ಸಿದ್ದರಾಮಯ್ಯ ಅವರ ಸಂಪರ್ಕಕ್ಕೆ ಬಂದಿದ್ದು, ಅವರೊಂದಿಗೆ ಸಂಧಾನ ಸಭೆಗಾಗಿ ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ.
ಇತ್ತೀಚಿನ ಹೊಸ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ವಿಶ್ವಾಸಮತಯಾಚನೆಯಲ್ಲಿ ಸಂಖ್ಯಾಬಲ ಏರಿಕೆಯಾಗದಿದ್ದರೆ ಮುಖ್ಯಮಂತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ಗೆ ಬಾಹ್ಯ ಬೆಂಬಲ ಘೋಷಿಸಲಿದ್ದಾರೆ ಎಂಬ ವದಂತಿಗಳಿವೆ.
ಈಗ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಪ್ರಯತ್ನ ಮಾಡಿ ಮುಂಬೈ ಸೇರಿರುವ ಬಹುತೇಕ ಶಾಸಕರು ಸಿದ್ದರಾಮಯ್ಯ ಅವರ ಬೆಂಬಲಿಗರಾಗಿದ್ದಾರೆ.
ಜೆಡಿಎಸ್ನ ಎಚ್.ವಿಶ್ವನಾಥ್ ಹೊರತುಪಡಿಸಿ ಉಳಿದ 14 ಮಂದಿಯೂ ಸಿದ್ದರಾಮಯ್ಯ ಅವರಿಗೆ ಆಪ್ತರು. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಗೆ ಅಧಿಕಾರ ನೀಡುವುದು ಅಥವಾ ಚುನಾವಣೆ ಎದುರಿಸುವುದಕ್ಕಿಂತಲೂ ಕಾಂಗ್ರೆಸ್ ಜೊತೆ ಸೇರಿ ಇನ್ನೊಂದಷ್ಟು ದಿನ ಸರ್ಕಾರ ನಡೆಸಿ ಒಂದೆರಡು ವರ್ಷದ ನಂತರ ಚುನಾವಣೆ ಎದುರಿಸುವುದು ಸೂಕ್ತ ಎಂಬ ಚಿಂತನೆ ಜೆಡಿಎಸ್ ಪಾಳಯದಲ್ಲಿದೆ.
ಹೀಗಾಗಿ ಜೆಡಿಎಸ್ ಬಾಹ್ಯ ಬೆಂಬಲದ ಸುಳಿವನ್ನು ಬಿಟ್ಟುಕೊಟ್ಟಿದೆ. ಆದರೆ ಕಾಂಗ್ರೆಸ್ ಪಾಳಯ ಇದನ್ನು ನಂಬಲು ಸಾಧ್ಯವಿಲ್ಲ. ಈಗಾಗಲೇ ಧರ್ಮಸಿಂಗ್ ಅವಧಿಯಲ್ಲಿ ಒಮ್ಮೆ ಪೆಟ್ಟು ತಿಂದಿರುವ ಕಾಂಗ್ರೆಸ್ ಈ ಬಾರಿ ಮತ್ತೊಮ್ಮೆ ತಪ್ಪು ಮಾಡಲು ಸಿದ್ಧವಿಲ್ಲ ಎಂದು ಹೇಳಲಾಗುತ್ತಿದೆ. ಅದರ ಹೊರತಾಗಿಯೂ ಸಿದ್ದರಾಮಯ್ಯ ರಾಜಕೀಯ ಸಾಧ್ಯಾಸಾಧ್ಯತೆಯ ಬಗ್ಗೆ ಅತ್ಯಂತ ಗಂಭೀರ ಸಮಾಲೋಚನೆಯಲ್ಲಿ ತೊಡಗಿದ್ದು, ಸಮ್ಮಿಶ್ರ ಸರ್ಕಾರ ಉಳಿಸಲು ಕೊನೇ ಕ್ಷಣದವರೆಗೂ ಪ್ರಯತ್ನ ಮುಂದುವರೆಸಲಿದ್ದಾರೆ. ಅತೃಪ್ತರು ಸಂಧಾನಕ್ಕೆ ಒಪ್ಪದೆ ಇದ್ದರೆ ಅನಂತರ ಜೆಡಿಎಸ್ ಪ್ರಸ್ತಾವನೆ ಬಗ್ಗೆ ಪರಿಶೀಲನೆ ನಡೆಯಲಿದೆ.
ಕಾಂಗ್ರೆಸ್ನಿಂದ ಸಿದ್ದರಾಮಯ್ಯ ಅಥವಾ ಬೇರೆ ಇನ್ಯಾರಾದರೂ ಮುಖ್ಯಮಂತ್ರಿ ಅಭ್ಯರ್ಥಿಯಾದಾಗ ಅತೃಪ್ತರು ವಾಪಸ್ ಬರುವುದಾದರೆ ಸರ್ಕಾರ ರಚಿಸಬೇಕೋ ಬೇಡವೋ ಎಂಬುದನ್ನು ಚರ್ಚೆ ಮಾಡಲಾಗುತ್ತದೆ ಎಂಬ ಮಾಹಿತಿಗಳಿವೆ.
ಮೂಲಗಳ ಪ್ರಕಾರ ಮುಂಬೈ ಸೇರಿರುವವರ ಪೈಕಿ ಕೆಲವರು ಈಗಾಗಲೇ ಕರ್ನಾಟಕದ ಗಡಿ ಭಾಗಕ್ಕೆ ಬಂದಿದ್ದು, ಸುರಕ್ಷಿತ ಸ್ಥಳದಲ್ಲಿದ್ದಾರೆ.ಅವರ ಬೇಡಿಕೆಗಳಿಗೆ ಹೈಕಮಾಂಡ್ ಸಮ್ಮತಿ ಸೂಚಿಸಿದರೆ ಬೆಂಗಳೂರಿಗೆ ಬರಲು ಸಿದ್ಧರಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಈ ಎಲ್ಲಾ ವದಂತಿ ಹಾಗೂ ಮಾಹಿತಿಗಳನ್ನು ಮುಂಬೈನಲ್ಲಿರುವ ಅತೃಪ್ತರ ಗುಂಪು ಸಾರಾಸಗಟಾಗಿ ತಳ್ಳಿ ಹಾಕಿದ್ದು, ನಾವು ಯಾವುದೇ ಕಾರಣಕ್ಕೂ ವಾಪಸ್ ಬರುವುದಿಲ್ಲ.ನಿರ್ಧಾರ ಬದಲಿಸುವುದಿಲ್ಲ ಎಂದು ಪಟ್ಟು ಹಿಡಿದಿದೆ.ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ಎಂಬ ಪ್ರಶ್ನೆ ಈವರೆಗೂ ಅತೃಪ್ತರಿಗೆ ಎದುರಾಗಿಲ್ಲ. ಒಂದು ವೇಳೆ ಆ ಪ್ರಶ್ನೆ ಕೇಳಿ ಬಂದಾಗ ಅತೃಪ್ತರ ಪ್ರತಿಕ್ರಿಯೆ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಜೆಡಿಎಸ್ ನಾಯಕರು ಎಲ್ಲಾ ಬೆಳವಣಿಗೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಂತಿಮ ಸುತ್ತಿನ ಕಸರತ್ತಿನಲ್ಲಿ ತೊಡಗಿದ್ದಾರೆ.ನಾಳೆ ಸುಪ್ರೀಂ ಕೋರ್ಟ್ನ ತೀರ್ಪು, ರಾಜ್ಯಪಾಲರ ನಿರ್ಧಾರ, ರಾಜ್ಯಪಾಲರು ಈಗಾಗಲೇ ಕಳುಹಿಸಿರುವ ವರದಿ ಆಧರಿಸಿ ತೀರ್ಮಾನ ಎಲ್ಲವೂ ಸಮ್ಮಿಶ್ರ ಸರ್ಕಾರದ ಭವಿಷ್ಯವನ್ನು ನಿರ್ಧರಿಸಲಿವೆ.
ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ಉಳಿಯುವ ಆಶಾಭಾವನೆ ಯಾರಲ್ಲೂ ಇಲ್ಲ. ಆದರೆ ನಿರ್ಗಮನದ ಹಾದಿಯಲ್ಲಿ ಯಾವ ಟ್ವಿಸ್ಟ್ ಬರಲಿದೆ ಎಂಬುದು ಮಾತ್ರ ನಿಗೂಢವಾಗಿದೆ.