ಬೆಂಗಳೂರು, ಜು.20-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಸರ್ಕಾರಕ್ಕೆ ಬಹುಮತವಿದ್ದರೆ ಕೂಡಲೇ ಸಾಬೀತುಪಡಿಸಬೇಕು. ಇಲ್ಲದಿದ್ದರೆ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋಗಬೇಕೆಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದರು.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಬಹುಮತವಿದ್ದರೆ, ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ಮಾಡಲು ಮೀನಮೇಷ ಎಣಿಸುತ್ತಿರುವುದು ಏಕೆ?ಸೋಮವಾರ ಬಹುಮತ ಸಾಬೀತುಪಡಿಸಬೇಕು, ಇಲ್ಲವೆ ಅಧಿಕಾರದಿಂದ ನಿರ್ಗಮಿಸಬೇಕೆಂದು ಒತ್ತಾಯಿಸಿದರು.
ರಮಡ ರೆಸಾರ್ಟ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮೇಲ್ನೋಟಕ್ಕೆ ಬಹುಮತ ಕಳೆದುಕೊಂಡಿದೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ರಾಜ್ಯಪಾಲರು ಎರಡು ಬಾರಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಬಹುಮತ ಸಾಬೀತುಪಡಿಸಲು ಸೂಚಿಸಿದ್ದರು. ಅವರ ಆದೇಶಕ್ಕೂ ಕ್ಯಾರೆ ಎನ್ನದೆ ಕಾರ್ಯಾಂಗಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಒಂದು ವೇಳೆ ಬಹುಮತ ಇದ್ದದ್ದೇ ನಿಜವಾದರೆ ನೀವು ವಿಶ್ವಾಸ ಮತ ಯಾಚನೆಯನ್ನು ಒಂದೇ ದಿನ ಮಾಡಿ ಮುಗಿಸಬಹುದಿತ್ತು.ನಿಮ್ಮ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ ಏನೇ ಸರ್ಕಸ್ ನಡೆಸಿದರೂ ಸರ್ಕಾರ ಉಳಿಯುವುದಿಲ್ಲ. ಮುಖಭಂಗ ಅನುಭವಿಸುವ ಬದಲು ಗೌರವಯುತವಾಗಿ ರಾಜೀನಾಮೆ ನೀಡುವುದು ಸೂಕ್ತ ಎಂದು ಹೇಳಿದರು.
ಮಾಜಿ ಸಚಿವ ಎಚ್.ವಿಶ್ವನಾಥ್ ಚುನಾವಣೆಗೆ ನಿಂತು 28 ಕೋಟಿ ಸಾಲ ಮಾಡಿಕೊಂಡಿದ್ದರು. ಇದನ್ನು ತೀರಿಸಲು ಬಿಜೆಪಿಗೆ ಹೋಗಿದ್ದಾರೆ ಎಂಬ ಸಚಿವ ಸಾ.ರಾ.ಮಹೇಶ್ ಆರೋಪಕ್ಕೆ ತಿರುಗೇಟು ನೀಡಿರುವ ಅವರು, ಇದನ್ನು ಇಷ್ಟು ದಿನಗಳವರೆಗೆ ಏಕೆ ಮುಚ್ಚಿಟ್ಟಿದ್ದಿರಿ ಎಂದು ಪ್ರಶ್ನಿಸಿದರು.
ಸಾ.ರಾ.ಮಹೇಶ್ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ.ಅವರ ಆರೋಪಗಳಿಗೆ ಯಾರೊಬ್ಬರು ತಲೆ ಕೆಡಿಸಿಕೊಳ್ಳುವುದಿಲ್ಲ.ಇಷ್ಟು ದಿನಗಳವರೆಗೆ ಸುಮ್ಮನಿದ್ದು, ವಿಶ್ವಾಸಮತಯಾಚನೆ ವೇಳೆಯಲ್ಲಿ ಬಹಿರಂಗಪಡಿಸಿದ್ದು ಸರಿಯೇ ಎಂದು ಆಕ್ಷೇಪಿಸಿದರು.
ರಾಜ್ಯದಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಇಲ್ಲದೆ ಜನರು ಪರದಾಡುತ್ತಿದ್ದಾರೆ.ಈ ಬಗ್ಗೆ ಚರ್ಚೆ ನಡೆಯಬೇಕಾಗಿದೆ.ಕುಮಾರಸ್ವಾಮಿ ಇದರ ಬಗ್ಗೆ ಚಿಂತಿಸದೆ ಕೇವಲ ಕುರ್ಚಿ ಕಡೆ ಗಮನ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಸುಪ್ರೀಂಕೋರ್ಟ್ ರಾಜೀನಾಮೆ ಕೊಟ್ಟಿರುವ ಶಾಸಕರ ವಿಷಯದಲ್ಲಿ ನೀಡಿರುವ ಮಧ್ಯಂತರ ತೀರ್ಪಿನ ಬಗ್ಗೆ ಹೊಸ ಆದೇಶ ನೀಡುವುದಿಲ್ಲ. ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಹೇಗೋ ಒಂದಷ್ಟು ದಿನಗಳ ಕಾಲ ತಳ್ಳಿದರಾಯಿತು ಎಂಬ ಮನೋಭಾವ ಅವರದ್ದು ಎಂದು ಆರೋಪಿಸಿದರು.
ಶಾಸಕ ಶ್ರೀಮಂತಪಾಟೀಲ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದೇನೆ. ಸ್ವಯಂಪ್ರೇರಿತ ಹೇಳಿಕೆ ನೀಡಿದ್ದಾರೆ.ಅವರ ಕುಟುಂಬದ ಸದಸ್ಯರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ ಸಚಿವ ಡಿ.ಕೆ.ಶಿವಕುಮಾರ್ ಶಾಸಕರನ್ನು ಅಪಹರಣ ಮಾಡಲಾಗಿದೆ ಎಂದು ಸದನದಲ್ಲಿ ಹೇಳಿಕೆ ನೀಡಿದ್ದರು. ಕೂಡಲೇ ಅವರು ಕ್ಷಮಾಪಣೆ ಕೇಳಬೇಕು ಎಂದು ಬಿಎಸ್‍ವೈ ಆಗ್ರಹಿಸಿದರು.