ಪಾಲಿಕೆ ಸದಸ್ಯರ ಆಸ್ತಿ ವಿವರ-ಲೋಕಾಯುಕ್ತಕ್ಕೆ ಆಸ್ತಿ ವಿವರ ಪಡೆಯುವ ಅಧಿಕಾರವಿಲ್ಲ-ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ

ಬೆಂಗಳೂರು,ಜು.20- ಬಿಬಿಎಂಪಿ ಸದಸ್ಯರ ಆಸ್ತಿ ವಿವರವನ್ನು ಸಲ್ಲಿಸಲಾಗಿದ್ದು, ಪಾಲಿಕೆ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ ಎಂದು ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ತಿಳಿಸಿದ್ದಾರೆ.

ಪಾಲಿಕೆ ಸಭೆಯಲ್ಲಿ ಮಾತನಾಡಿದ ಅವರು, ಕೆಎಂಸಿ ಕಾಯ್ದೆ ಅನ್ವಯ ನಮ್ಮ ಆಸ್ತಿ ವಿವರಗಳನ್ನು ಪಾಲಿಕೆಗೆ ಸಲ್ಲಿಸಲಾಗಿದೆ. ಕೆಎಂಸಿ ಕಾಯ್ದೆ ರಾಷ್ಟ್ರಪತಿ ಅವರಿಂದ ಅಂಗೀಕಾರವಾಗಿರುವಂತಹುದು ಎಂದು ಹೇಳಿದರು.

ಯಾರೋ ಒಬ್ಬರು ಬಿಬಿಎಂಪಿ ಕಾಪೆರ್Çೀರೇಟರ್‍ಗಳು ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕೆಂದು ಕೇಸ್ ಹಾಕಿದ್ದಾರೆ.ಇಂತಹ ಎಷ್ಟೋ ವಿಚಾರಗಳಲ್ಲಿ ಕೆಎಂಸಿ ಕಾಯ್ದೆ ಪರವೇ ತೀರ್ಪು ಬಂದಿದೆ.ಪಾಲಿಕೆ ಸದಸ್ಯರ ಆಸ್ತಿ ವಿವರ ಪಡೆಯುವ ಅಧಿಕಾರ ಲೋಕಾಯುಕ್ತಕ್ಕೆ ಇಲ್ಲ ಎಂದು ಹೇಳಿದ ಅವರು, ಸಭೆಯಲ್ಲಿ ದಾಖಲೆಯನ್ನು ಓದಿದರು.

ರಾಜ್ಯ ಚುನಾವಣಾ ಆಯೋಗ ನಮಗೆ ಆಸ್ತಿ ವಿವರ ಸಲ್ಲಿಕೆ ಮಾಡಬೇಕೆಂದು 2016ರಲ್ಲಿ ಆದೇಶ ಮಾಡಿದೆ. ಕೆಎಂಸಿ ಕಾಯ್ದೆ ಪ್ರಕಾರ ಬಿಬಿಎಂಪಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಆಸ್ತಿ ವಿವರ ಸಲ್ಲಿಸುತ್ತಿದ್ದೇವೆ.ಲೋಕಾಯುಕ್ತಕ್ಕಿಂತಲೂ ಕೆಎಂಸಿ ಕಾಯ್ದೆ ಬಲಿಷ್ಠವಾಗಿದೆ.ಒಂದು ವೇಳೆ ಆಸ್ತಿ ವಿವರ ಸಲ್ಲಿಸದಿದ್ದರೆ ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ಹೇಳಿದರು.
ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಕೆ ಮಾಡುವ ಆದೇಶವನ್ನು ಕೈ ಬಿಡಬೇಕು.ಇದರ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಪದ್ಮನಾಭ ರೆಡ್ಡಿ ಸಲಹೆ ನೀಡಿದಾಗ ಪಕ್ಷಾತೀತವಾಗಿ ಎಲ್ಲ ಸದಸ್ಯರು ಸಮ್ಮತಿಸಿದರು.

ಪದ್ಮನಾಭ ರೆಡ್ಡಿ ಮಾತನಾಡಿದ ನಂತರ ಪ್ರತಿಕ್ರಿಯಿಸಿದ ಆಯುಕ್ತ ಮಂಜುನಾಥ್ ಪ್ರಸಾದ್, ಪಾಲಿಕೆಯಲ್ಲಿರುವ ಎಲ್ಲ ಸದಸ್ಯರು ಜನಸೇವಕರು. ಎಲ್ಲರೂ ಆಸ್ತಿ ವಿವರ ಸಲ್ಲಿಸಬೇಕು ಎಂದು ವೆಂಕಟೇಶ್ ಎಂಬುವರು ದೂರು ಕೊಟ್ಟಿದ್ದಾರೆ.ಇದರ ಅನ್ವಯ ಲೋಕಾಯುಕ್ತ 6 ವಾರಗಳೊಳಗೆ ಸ್ಪಷ್ಟನೆ ಕೊಡುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಿದೆ ಎಂದು ತಿಳಿಸಿದರು.

ಈ ಬಗ್ಗೆ ನಾನು ಕಾನೂನು ಸಲಹೆಯನ್ನು ಪಡೆದಿದ್ದೇನೆ. ಅದರಂತೆ ಪಬ್ಲಿಕ್ ಸರ್ವಂಟ್‍ಯಡಿ ಕಾಪೆರ್Çೀರೇಟರ್‍ಗಳೂ ಬರುತ್ತಾರೆ.ಆದರೆ 20 ಸಾವಿರಕ್ಕಿಂತ ಕಡಿಮೆ ವೇತನ ಇದ್ದರೆ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಕೆ ಮಾಡುವ ಅಗತ್ಯತೆ ಇಲ್ಲ ಎಂದು ಮತ್ತೊಬ್ಬರು ಸಲಹೆ ಮಾಡಿದ್ದಾರೆ.ಇದು ಕಾನೂನು ಉಲ್ಲಂಘನೆಯಾಗುವುದಿಲ್ಲ. ಸದಸ್ಯರ ಅಭಿಪ್ರಾಯ ಪಡೆದು ನಾನು ಲೋಕಾಯುಕ್ತರ ಗಮನಕ್ಕೆ ತರುತ್ತೇನೆ. ಇದರ ಬಗ್ಗೆ ನೀವು ಚರ್ಚೆ ಮಾಡಬಹುದು.ನಾನು ಇನ್ನಷ್ಟು ಕಾನೂನು ಸಲಹೆ ಪಡೆಯಲು ಸಿದ್ದನಿದ್ದೇನೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ