ದೇಶದಲ್ಲಿ ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ-ಸಚಿವ ಕೃಷ್ಣಭೈರೇಗೌಡ

ಬೆಂಗಳೂರು,ಜು.19- ರಾಜ್ಯಪಾಲರು 2018ರ ಆಗಿನ ಮುಖ್ಯಮಂತ್ರಿಗೆ ವಿಶ್ವಾಸ ಮತ ಸಾಬೀತುಪಡಿಸಲು 15 ದಿನಗಳ ಗಡುವು ಕೊಟ್ಟಿದ್ದರು. ಈಗಿನ ಮುಖ್ಯಮಂತ್ರಿಗೆ ವಿಶ್ವಾಸಮತ ಸಾಬೀತುಪಡಿಸಲು 15 ಗಂಟೆಗಳ ಗಡುವು ಕೊಡುತ್ತಾರೆ ಎಂದು ಸಚಿವ ಕೃಷ್ಣಭೆರೇಗೌಡ ವಿಧಾನಸಭೆಯಲ್ಲಿಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡಿಸಿರುವ ವಿಶ್ವಾಸಮತಯಾಚನೆ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ರಾಜ್ಯಪಾಲರ ಕಚೇರಿ ದುರ್ಬಳಕೆಯಾಗುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು.
ಅರುಣಾಚಲ ಪ್ರದೇಶಕ್ಕೆ ಸಂಬಂಧಿಸಿದ ಸುಪ್ರೀಂಕೋರ್ಟ್‍ನ ಸಂವಿಧಾನದ ಪೀಠ ನೀಡಿರುವ ತೀರ್ಪನ್ನು ಉಲ್ಲೇಖಿಸಿ ಮಾತನಾಡಿದ ಅವರು, ದೇಶದಲ್ಲಿ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ಸಂವಿಧಾನ ಪೀಠದ ನಿರ್ದೇಶನವಿದ್ದರೂ ಅಧಿಕಾರದ ಹಪಾಹಪಿ ಪೂರೈಸಿಕೊಳ್ಳಲು ಸಂವಿಧಾನ ಸಂಸ್ಥೆಗಳ ದುರುಪಯೋಗವಾಗುತ್ತಿದೆ ಎಂದಾಗ ಆಡಳಿತ ಪಕ್ಷದ ಸದಸ್ಯರು ಮೇಜುಕುಟ್ಟಿ ಸ್ವಾಗತಿಸಿದರು.

ಈ ಘಟನೆಗಳನ್ನು ದೇಶದ ಜನ ಗಮನಿಸುತ್ತಿದ್ದಾರೆ.ಸಾಂವಿಧಾನಿಕ ಸಂಸ್ಥೆಗಳು ಸಾಂವಿಧಾನಿಕ ಚೌಕಟ್ಟಿನಲ್ಲಿ ಕೆಲಸ ಮಾಡಿದಾಗ ದೇಶ ಅಭಿವೃದ್ದಿಯಾಗುತ್ತದೆ. ಹಸ್ತಕ್ಷೇಪ ಮಾಡಿದರೆ ರಾಜ್ಯಾಂಗದ ವ್ಯವಸ್ಥೆ ಕುಸಿದು ಬೀಳುತ್ತದೆ. ಸಭಾನಾಯಕರು ಸ್ವಯಂ ನಿರ್ಣಯವನ್ನು ಮಂಡಿಸಿದ್ದಾರೆ.ಅದು ಈಗ ಸದನದ ಸ್ವತ್ತಾಗಿದೆ ಎಂದು ಹೇಳಿದರು.

ಶಾಸಕರ ಖರೀದಿಗೆ 30 ಕೋಟಿ ರೂ.ನೀಡಲಾಗುತ್ತಿದೆ ಎಂದು ಆರೋಪಿಸಿದಾಗ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ, ಮಾತಿನ ಚಕಮಕಿ ನಡೆಯಿತು.
ಒಂದು ಹಂತದಲ್ಲಿ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ರಮೇಶ್‍ಕುಮಾರ್ ಅವರು, ನಿಮ್ಮವರು ಸರಿಯಾಗಿ ಕಾವಲು ಕಾಯದೆ ನಿದ್ರೆ ಮಾಡಿದರೆ ಹೋಗುತ್ತಾರೆ.ಅವರು ಸರಿಯಾಗಿ ಕಾವಲು ಕಾಯ್ದುಕೊಂಡಿದ್ದಾರೆ. ನಿಮ್ಮದು , ಅವರದು ಎಲ್ಲವೂ ಹೊರಬರಲಿ( ಆಡಳಿತ-ಪ್ರತಿಪಕ್ಷ) ಹೇಳಿ ಗಲೀಜು ಹೊರಬರಲಿ ಹೊಟ್ಟೆ ಕ್ಲೀನಾಗುತ್ತದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ