ಬೆಂಗಳೂರು, ಜು.18-ವಿಶ್ವಾಸ ಮತ ಯಾಚನೆ ವೇಳೆ ಪ್ರತಿಪಕ್ಷ ಬಿಜೆಪಿ ಶಾಸಕರನ್ನು ಪ್ರಚೋದಿಸಲು ಆಡಳಿತ ಪಕ್ಷವಾದ ಜೆಡಿಎಸ್-ಕಾಂಗ್ರೆಸ್ನ ನಾಯಕರು ಮತ್ತು ಶಾಸಕರು ನಡೆಸಿದ ಪ್ರಯತ್ನಗಳು ಫಲ ನೀಡದೆ ಏಕಮುಖ ಗದ್ದಲದ ವಾತಾವರಣ ಸೃಷ್ಟಿಯಾಗಿತ್ತು.
ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ವಿಶ್ವಾಸಮತಯಾಚನೆ ಮಾಡುವ ಸಂದರ್ಭದಲ್ಲಿ ಮಾತನಾಡುತ್ತಿದ್ದಾಗ, ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ ಕ್ರಿಯಾಲೋಪವನ್ನು ಪ್ರಸ್ತಾಪಿಸಿದರು.
ಅವರು ಮಾತನಾಡುತ್ತಿದ್ದಾಗ ಬಿಜೆಪಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ ಅವರು ಮತ್ತೊಂದು ಕ್ರಿಯಾಲೋಪ ಪ್ರಸ್ತಾಪಿಸಲು ಮುಂದಾದರು. ಸ್ಪೀಕರ್ ಅದಕ್ಕೆ ಅವಕಾಶ ಕೊಡದೆ ಈಗಾಗಲೇ ಸಿದ್ದರಾಮಯ್ಯ ಅವರು ಕ್ರಿಯಾಲೋಪ ಪ್ರಸ್ತಾಪಿಸಿದ್ದಾರೆ. 1983ರಿಂದಲೂ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ಸಿದ್ದರಾಮಯ್ಯ ಅವರಿಗೆ ಕಾನೂನಿನ ತಿಳುವಳಿಕೆ ಚೆನ್ನಾಗಿದೆ. ಅವರ ಕ್ರಿಯಾಲೋಪದ ಪ್ರಸ್ತಾಪ ಮುಗಿದ ಬಳಿಕೆ ನಿಮಗೆ ಅವಕಾಶ ಕೊಡುತ್ತೇನೆ ಎಂದು ಜೆ.ಸಿ.ಮಾಧುಸ್ವಾಮಿ ಅವರಿಗೆ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸ್ಪೀಕರ್ ಆಗಿರುವ ಕೆ.ಜಿ.ಬೋಪಯ್ಯ ಅವರು ಮಧ್ಯಪ್ರವೇಶ ಮಾಡಿ ಕ್ರಿಯಾಲೋಪ ಪ್ರಸ್ತಾಪದ ವೇಳೆ ಚರ್ಚೆಗೆ ಅವಕಾಶ ಇಲ್ಲ ಎಂದರು.
ಹಿರಿಯ ಸಚಿವ ಆರ್.ವಿ.ದೇಶಪಾಂಡೆ, ಸಿದ್ದರಾಮಯ್ಯ ಅವರ ಪರವಾಗಿ ಸಮರ್ಥನೆಗಿಳಿದರೆ, ಇನ್ನೊಬ್ಬ ಸಚಿವ ಡಿ.ಕೆ.ಶಿವಕುಮಾರ್ ಅವರು ಬೋಪಯ್ಯ ವಿರುದ್ಧ ಹರಿಹಾಯ್ದರು.
ನೀವು ಸ್ಪೀಕರ್ ಆಗಿದ್ದಾಗ ಪಕ್ಷೇತರರನ್ನು ಅನರ್ಹಗೊಳಿಸಿದ ತಮ್ಮ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ತಿರುಗೇಟು ಕೊಟ್ಟಿದೆ. ನಿಮ್ಮ ವಾದ ನಮಗೆ ಬೇಡ. ಸುಮ್ನೆ ಕೂತ್ಕೊಳ್ರೀ… ಎಂದು ಕಿಡಿಕಾರಿದರು.
ಪಕ್ಷದ ಸೂಚನೆಯನ್ನು ಪಾಲಿಸುವ ಸಲುವಾಗಿ ಬೋಪಯ್ಯ ಅವರು ಡಿ.ಕೆ.ಶಿವಕುಮಾರ್ ಅವರ ವಾಗ್ದಾಳಿಗೆ ಯಾವುದೇ ಉತ್ತರ ನೀಡದೆ ಮೌನವಾಗಿ ಕುಳಿತರು.
ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸುವುದನ್ನು ಕಂಡ ಜೆ.ಸಿ.ಮಾಧುಸ್ವಾಮಿ ಅವರು ಮಾನ್ಯ ಸಭಾಧ್ಯಕ್ಷರೇ… ಎಲ್ಲಾ ಪೂರ್ವ ತಯಾರಿಗಳೊಂದಿಗೆ ಬಂದಿರುವುದು ಗೊತ್ತಾಗುತ್ತಿದೆ ಎಂದು ತಮ್ಮಷ್ಟಕ್ಕೆ ತಾವೇ ಸಮಾಧಾನ ಮಾಡಿಕೊಂಡು ಕುಳಿತರು.
ಸಚಿವ ವೆಂಕಟರಮಣಪ್ಪ ಎದ್ದು ನಿಂತು, ಪಕ್ಷೇತರರಾಗಿದ್ದ ನಮ್ಮನ್ನು ಬೋಪಯ್ಯ ಅವರು ಕಾನೂನು ಬಾಹಿರವಾಗಿ ಅನರ್ಹಗೊಳಿಸಿದರು. ಅದನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದಾಗ ನ್ಯಾಯಾಲಯ ಸ್ಪೀಕರ್ಗೆ ಛೀಮಾರಿ ಹಾಕಿತ್ತು. ಬೋಪಯ್ಯ ಅವರು ಅದನ್ನು ಗಮನದಲ್ಲಿಟ್ಟುಕೊಂಡಿರಬೇಕು ಎಂದು ತಿರುಗೇಟು ನೀಡಿದರು.
ಆಡಳಿತ ಪಕ್ಷದ ಶಾಸಕರ ಪಾಳಯದಿಂದ ಬಿಜೆಪಿ ಶಾಸಕರತ್ತ ಲೇವಡಿಗಳು ಶೇಮ್ ಶೇಮ್… ಎಂಬೆಲ್ಲ ಪ್ರಚೋದನಾತ್ಮಕ ವಾಗ್ದಾಳಿಗಳು ನಡೆದವು. ಆದರೆ ಬಿಜೆಪಿ ಸದಸ್ಯರು ಮಾತ್ರ ಯಾವುದಕ್ಕೂ ಪ್ರತಿಕ್ರಿಯಿಸದೆ ತಟಸ್ಥವಾಗಿ ಕುಳಿತಿದ್ದರು.
ಆಡಳಿತ ಪಕ್ಷದ ಶಾಸಕರು ಸದನದಲ್ಲಿ ನಾಯಕರುಗಳ ಮಾತುಗಳಿಗೆ ಮೇಜು ಕುಟ್ಟಿ ಸ್ವಾಗತಿಸುವುದು, ಹಾಸ್ಯಾಸ್ಪದ ಚರ್ಚೆಗಳಾದಾಗ ನಗುತ್ತಾ ದೋಸ್ತಿ ಪಕ್ಷಗಳ ನಾಯಕರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದಾಗ ಜೋರಾಗಿ ಕೂಗಿ ಪ್ರತಿಕ್ರಿಯಿಸುವುದನ್ನು ಮಾಡುತ್ತಿದ್ದರು.
ಆದರೆ ಬಿಜೆಪಿಯವರು ಮಾತ್ರ ಪೂರ್ವನಿರ್ಧರಿತ ತೀರ್ಮಾನದಂತೆ ಯಾವುದೇ ಪ್ರತ್ಯುತ್ತರ ನೀಡದೆ ಮೌನವಾಗಿ ಕುಳಿತಿದ್ದರು.