ಬೆಂಗಳೂರು, ಜು.18-ಮೈತ್ರಿ ಸರ್ಕಾರ ನನ್ನ ನಾಯಕತ್ವದಲ್ಲಿ ಇರುತ್ತದೋ, ಹೋಗುತ್ತದೋ ಅದು ಮುಖ್ಯ ಅಲ್ಲ. ಬೇರೆ ಇನ್ಯಾರೋ ಮುಖ್ಯಮಂತ್ರಿಯಾಗುತ್ತಾರೆ ಎಂಬುದೂ ಮುಖ್ಯವಲ್ಲ. ಆದರೆ ಪ್ರಜಾಪ್ರಭುತ್ವವನ್ನೇ ಅಣಕಿಸುವಂತಹ ನಾಟಕೀಯ ಬೆಳವಣಿಗೆಗಳು ನಡೆಯುತ್ತಿವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಇಂದು ವಿಶ್ವಾಸ ಮತ ಯಾಚನೆ ಮಾಡಿ ಚರ್ಚೆ ಆರಂಭಿಸಿದ ಅವರು, ವಿರೋಧ ಪಕ್ಷದ ನಾಯಕರು ಬಹಳ ಆತುರದಲ್ಲಿದ್ದಂತಿದೆ. ಈ ಮೊದಲು ನಡೆದ ವಿಶ್ವಾಸ ಮತಯಾಚನೆಯ ಸಂದರ್ಭಗಳೇ ಬೇರೆ.
ಈಗಿನ ಸಂದರ್ಭವೇ ಬೇರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ರೀತಿಯ ಪರಿಸ್ಥಿತಿ ಇದೆ ಎಂದು ಎಲ್ಲರಿಗೂ ಗೊತ್ತಿದೆ. ಯಾವ ಕಾರಣಕ್ಕಾಗಿ ವಿಶ್ವಾಸಮತಯಾಚಿಸಬೇಕು ಎಂಬುದನ್ನು ನಾನು ವಿವರಿಸಬೇಕಿದೆ ಎಂದು ಹೇಳಿದರು. ಜೆಡಿಎಸ್-ಕಾಂಗ್ರೆಸ್‍ನ ಕೆಲವು ಶಾಸಕರು ಸ್ಪೀಕರ್ ಅವರಿಗೆ ಒಂದು ಸಾಲಿನಲ್ಲಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಆದರೆ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸುವಾಗ ಕರ್ನಾಟಕ ಸರ್ಕಾರದಲ್ಲಿ ಐಎಂಎ, ಜೆಎಸ್‍ಡಬ್ಲ್ಯು ಭೂಮಿ ಹಗರಣ ಸೇರಿದಂತೆ ಹಲವಾರು ಹಗರಣಗಳು ನಡೆದಿವೆ. ಸ್ಥಿರ ಸರ್ಕಾರ ಇಲ್ಲ ಎಂದು ಆರೋಪಿಸಿದ್ದಾರೆ. ಕೆಲವರಿಗೆ ಮಾನ, ಮರ್ಯಾದೆ ಇದೆಯೋ ಇಲ್ಲವೋ ಗೊತ್ತಿಲ್ಲ.
ಆದರೆ ನನಗೆ ಮಾನ, ಮರ್ಯಾದೆ ಇದೆ. ನಮ್ಮ ಶಾಸಕರು, ಸಚಿವರು ಮಾನ, ಮರ್ಯಾದೆಯೊಂದಿಗೆ ಬದುಕುತ್ತಿದ್ದಾರೆ. ಬಿಜೆಪಿಯವರು ಸಮ್ಮಿಶ್ರ ಸರ್ಕಾರದ ಮೇಲಷ್ಟೇ ಅಪನಂಬಿಕೆ ಬರುವಂತಹ ವಾತಾವರಣ ನಿರ್ಮಿಸಿಲ್ಲ. ಪವಿತ್ರ ಸ್ಪೀಕರ್ ಹುದ್ದೆ ಮೇಲೂ ಅಪನಂಬಿಕೆ ಬರುವಂತೆ ನಡೆದುಕೊಂಡಿದ್ದಾರೆ. ನಿಮಗೆ ರಾಜೀನಾಮೆ ನೀಡಿ ಅದರ ಅಂಗೀಕಾರಕ್ಕೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.ಇವೆಲ್ಲವನ್ನು ಚರ್ಚೆ ಮಾಡಬೇಕೇ, ಬೇಡವೇ?ನಾನು ನಾಲ್ಕೈದು ತಿಂಗಳಿಂದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿಲ್ಲ. ನನ್ನ ಭಾವನೆಗಳನ್ನು ಜನರೊಂದಿಗೆ ಹಂಚಿಕೊಳ್ಳಲು ಇರುವುದು ಈ ವೇದಿಕೆ ಮಾತ್ರ. ಇಲ್ಲಿ ಮಾತನಾಡಲು ಸಮಯ ಕಡಿವಾಣ ಹಾಕುವುದು ಬೇಡ ಎಂದು ಸ್ಪೀಕರ್ ಅವರಲ್ಲಿ ಮನವಿ ಮಾಡಿದರು.
ಜನಸಾಮಾನ್ಯರಲ್ಲಿ ರಾಜಕೀಯದ ಅಸಹ್ಯ ಹುಟ್ಟಿಸುವಂತಹ ನಡವಳಿಕೆಗಳನ್ನು ಅನುಸರಿಸಲಾಗುತ್ತಿದೆ. ಕಳೆದ 14 ತಿಂಗಳಿನಿಂದಲೂ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವುದು ಯಾರು? ಈಗಿನ ಪರಿಸ್ಥಿತಿಗೆ ಕಾರಣರು ಯಾರು?ಸುಪ್ರೀಂಕೋರ್ಟ್‍ಗೆ ಅತೃಪ್ತ ಶಾಸಕರ ಮೂಲಕ ಕರ್ನಾಟಕದಲ್ಲಿ ಸ್ಥಿರ ಸರ್ಕಾರ ಇಲ್ಲ ಎಂದುಹೇಳಿಸಿದವರು ಯಾರು?ಎಂಬೆಲ್ಲ ವಿಷಯಗಳನ್ನು ಚರ್ಚೆ ಮಾಡಬೇಕಿದೆ.
ಪ್ರಧಾನಿಯವರು ಕರ್ನಾಟಕಕ್ಕೆ ಬಂದಾಗ ಕಲಬೆರಕೆ ಸರ್ಕಾರ, ಗರಿಷ್ಠ ಸರ್ಕಾರ ಬೇಕು, ಅಧಿಕಾರಕ್ಕಾಗಿ ತಲೆ ಒಡೆಯುವ ಸರ್ಕಾರ ಬೇಕಾ ಎಂಬೆಲ್ಲ ಮಾತುಗಳನ್ನಾಡಿದ್ದಾರೆ. ನಮ್ಮ ಸರ್ಕಾರ ಬರಗಾಲ, ಕೊಡಗಿನ ಅತಿವೃಷ್ಟಿ ಪರಿಸ್ಥಿತಿಯಲ್ಲಿ ಯಾವ ರೀತಿ ಸ್ಪಂದಿಸಿದೆ ಎಂದು ನಾವು ಜನರ ಮುಂದಿಡಬೇಕು.
ಬರ ಪರಿಸ್ಥಿತಿ ಬಗ್ಗೆ ಯಡಿಯೂರಪ್ಪ ಪ್ರವಾಸ ಮಾಡಿ ನಮಗಿಂತಲೂ ಹೆಚ್ಚು ತಿಳಿದುಕೊಂಡಿದ್ದಾರಂತೆ. ಅದಕ್ಕೆ ಪ್ರತಿಯಾಗಿ ನಾವು ಏನು ಮಾಡಿದ್ದೇವೆ ಎಂಬುದನ್ನು ಹೇಳಬೇಕು ಎಂದು ಕುಮಾರಸ್ವಾಮಿ ಹೇಳಿದರು.
ನನ್ನ ಕೆಲವು ಸ್ನೇಹಿತರು ಈ ಭಾಗದಲ್ಲೂ ಇದ್ದಾರೆ, ಆ ಭಾಗದಲ್ಲೂ ಇದ್ದಾರೆ ಎಂದು ಕುಮಾರಸ್ವಾಮಿ ಹೇಳಿದಾಗ, ಆ ಭಾಗದಲ್ಲಿ ಮೊದಲು ನಿಮ್ಮ ಸ್ನೇಹಿತರಿದ್ದರು. ಈಗಲೂ ಇದ್ದಾರೆಯೇ ಎಂದು ಸ್ಪೀಕರ್ ರಮೇಶ್‍ಕುಮಾರ್ ಕಿಚಾಯಿಸಿದರು. ಈಗಲೂ ಇದ್ದಾರೆ ಎಂದು ಕುಮಾರಸ್ವಾಮಿ ಉತ್ತರಿಸಿದಾಗ ಆಡಳಿತ ಪಕ್ಷದಲ್ಲಿ ನಗೆ ಅಲೆ ಉಕ್ಕಿತು. ಎಲ್ಲರೂ ನಕ್ಕರು. ಯಡಿಯೂರಪ್ಪ ನಗದೆ ಇರುವುದನ್ನು ಗಮನಿಸಿದ ಸ್ಪೀಕರ್ ಅವರು, ಯಡಿಯೂರಪ್ಪನವರು ನಗುತ್ತಿಲ್ಲ ಎಂದು ಲಘು ಧಾಟಿಯಲ್ಲಿ ಛೇಡಿಸಿದರು.
ಮತ್ತೆ ಮಾತು ಮುಂದುವರಿಸಿದ ಸಿಎಂ, ದೇವರಾಜ ಅರಸು ಅವರು ಈ ನಾಡಿನ ಅಭಿವೃದ್ಧಿಗೆ ಬಹಳಷ್ಟು ಕೊಡಗೆಗಳನ್ನು ನೀಡಿದ್ದಾರೆ. ಅವರೇ ಬೆಳೆಸಿದ ಕೆಲ ನಾಯಕರು ಅವರಿಂದ ದೂರ ಆಗಿ ಮುಖ್ಯಮಂತ್ರಿ ಅಧಿಕಾರ ಕಳೆದುಕೊಳ್ಳುವಂತೆ ಮಾಡಿದ್ದರು. ಅಧಿಕಾರ ಯಾರಿಗೂ ಶಾಶ್ವತವಲ್ಲ, ನಾವೇನು ಇಲ್ಲಿ ಗೂಟಾ ಹೊಡೆದುಕೊಂಡು ಕೂರುತ್ತೇವೆ ಎಂಬ ಭ್ರಮೆಯಲ್ಲಿಲ್ಲ ಎಂದರು.
ಕುಮಾರಸ್ವಾಮಿಯವರು ಪಕ್ಷಾಂತರ ನಿಷೇಧ ಕಾಯ್ದೆ ಪ್ರಸ್ತಾಪಿಸಿದಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ ಕ್ರಿಯಾಲೋಪ ಪ್ರಸ್ತಾಪ ಮಾಡಿದರು.