ಬೆಂಗಳೂರು, ಜು.18-ಶಾಸಕರ ರಾಜೀನಾಮೆ ವಿಚಾರದಲ್ಲಿ ಶಾಸಕಾಂಗ ಪಕ್ಷದ ನಾಯಕರನ್ನು ಪ್ರತಿವಾದಿಯನ್ನಾಗಿ ಮಾಡದಿದ್ದರೆ ಸುಪ್ರೀಂಕೋರ್ಟ್‍ಗೆ ಹೋಗಲು ಅವರಿಗೆ ಮುಕ್ತ ಅವಕಾಶವಿದೆ ಎಂದು ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ತಿಳಿಸಿದರು.
ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯವರು ವಿಶ್ವಾಸಮತಯಾಚನೆ ನಿರ್ಣಯದ ಚರ್ಚೆ ಸಂದರ್ಭದಲ್ಲಿ ಕ್ರಿಯಾಲೋಪ ಎತ್ತಿದ ಸಿದ್ದರಾಮಯ್ಯ ಅವರು ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ನೀಡಿ ಶಾಸಕರು ಪ್ರಸಕ್ತ ಅಧಿವೇಶನದಲ್ಲಿ ಪಾಲ್ಗೊಳ್ಳುವುದು, ಬಿಡುವುದು ಅವರ ವಿವೇಚನೆಗೆ ಬಿಟ್ಟಿದ್ದು, ಕಡ್ಡಾಯವಲ್ಲ ಎಂದು ತೀರ್ಪು ನೀಡಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾದ ತಮ್ಮನ್ನು ಪ್ರತಿವಾದಿಯಾಗಿ ಮಾಡಿಲ್ಲ ಎಂದಾಗ, ಸಭಾಧ್ಯಕ್ಷರು ಮಾತನಾಡಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಸುಪ್ರೀಂಕೋರ್ಟ್ ತಮ್ಮನ್ನು ಪಾರ್ಟಿ ಮಾಡಿಲ್ಲ ಎಂದಿದ್ದಾರೆ.ಸುಪ್ರೀಂಕೋರ್ಟ್‍ನ ಬಗ್ಗೆ ಅಪಾರ ಗೌರವವಿದೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‍ಗೆ ಹೋಗಲು ಅವರಿಗೆ ಮುಕ್ತ ಅವಕಾಶ ಇದೆ ಎಂದರು.
ಶಾಸಕರು ಸದನಕ್ಕೆ ಹಾಜರಾಗದಿದ್ದರೆ, ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡುವಂತಿಲ್ಲ, ಭತ್ಯೆಯೂ ಪಡೆಯುವಂತಿಲ್ಲ ಎಂದು ಹೇಳಿದರು.
ಯಾರೇ ಸದಸ್ಯರು ನಿರ್ದಿಷ್ಟ ಕಾರಣ ನೀಡಿ ಸದನಕ್ಕೆ ಬರಲಾಗುವುದಿಲ್ಲ ಎಂದು ಮನವಿ ಮಾಡಿದರೆ ಅದರ ನೈಜತೆ ಆಧಾರದ ಮೇಲೆ ತೀರ್ಮಾನ ಮಾಡಲಾಗುವುದು.
ಯಾರೇ ಸದಸ್ಯರು ಗೈರು ಹಾಜರಾಗುವುದಕ್ಕೆ ಅನುಮತಿ ಕೇಳಿದ್ದರೆ ಅದನ್ನು ಸದನದ ಗಮನಕ್ಕೆ ತರಲಾಗುವುದು.ಶಾಸಕಾಂಗ ಪಕ್ಷದ ನಾಯಕರ ಹಕ್ಕಿನ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದರು.
ಒಂದು ಹಂತದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಸುಪ್ರೀಂಕೋರ್ಟ್ ಮುಂದೆ ಹೋಗಿ ಪಾರ್ಟಿ ಮಾಡಿ ಎಂದು ಕೇಳಿ ಎಂದರು.
ಆಗ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಪರಸ್ಪರ ಆಕ್ಷೇಪ, ವಾಗ್ವಾದ ನಡೆಯಿತು.