ನವದೆಹಲಿ, ಮಾ.29-ಭ್ರಷ್ಟಾಚಾರ ನಿಗ್ರಹಕ್ಕಾಗಿ ಲೋಕಪಾಲರ ನೇಮಕ, ರೈತರ ಸಾಲಮನ್ನಾ ಸೇರಿದಂತೆ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕಳೆದ ಏಳು ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಆರೋಗ್ಯ ಹದಗೆಟ್ಟಿದೆ.
ಆದಾಗ್ಯೂ, ಅಣ್ಣಾ ಅವರ ಬೇಡಿಕೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲ.
ನಿರಶನ ನಡೆಸುತ್ತಿರುವ ಅಣ್ಣಾ ಅವರ ಆರೋಗ್ಯ ಹದಗೆಟ್ಟಿದೆ. ಅವರ ರಕ್ತದೊತ್ತಡ ಅಧಿಕವಾಗಿದೆ. ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆಯಾಗಿದೆ. ಅವರ ತೂಕದಲ್ಲಿ ಇಳಿಕೆಯಾಗಿದೆ. ಅವರು ನಿತ್ರಾಣಗೊಂಡಿದ್ದಾರೆ ಎಂದು ಅವರ ಖಾಸಗಿ ವೈದ್ಯ ಡಾ. ಧನಂಜಯ್ ಪೆÇೀಟೆ ಹೇಳಿದ್ದಾರೆ. ಪ್ರತಿದಿನ ಸಂಜೆ 5 ಗಂಟೆಗೆ ಎಂದಿನಂತೆ ನಿರಶನ ಸ್ಥಳದಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದ ಅಣ್ಣಾ ಅವರು ನಿನ್ನೆ ವಿಪರೀತ ಆಯಾಸಗೊಂಡಿರುವ ಹಾಗೂ ಮಾತನಾಡಲು ಸಾಧ್ಯವಾಗದ ಮಾಧ್ಯಮ ಪ್ರತಿನಿಧಿಗಳನ್ನು ಭೇಟಿ ಮಾಡಲಿಲ್ಲ.
ಕಳೆದ ಏಳು ವರ್ಷಗಳ ಹಿಂದೆ ಲೋಕಪಾಲರ ನೇಮಕಕ್ಕಾಗಿ ಆಗ್ರಹಿಸಿ ಅವರು ದೆಹಲಿಯಲ್ಲಿ ನಡೆಸಿದ ಪ್ರತಿಭಟನೆಗೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಆದರೆ ಈ ಬಾರಿ ಅಣ್ಣಾ ಅವರ ಸತ್ಯಾಗ್ರಹಕ್ಕೆ ನಿರೀಕ್ಷಿತ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗಿಲ್ಲ.