ಶಾಸಕರ ಜೊತೆ ಮಹತ್ವದ ಮಾತುಕತ ನಡೆಸಿದೆ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜು.16- ಶಾಸಕರ ರಾಜೀನಾಮೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್‍ನ ವಿಚಾರಣೆ ಮೇಲೆ ತೀವ್ರ ನಿಗಾ ಇರಿಸಿರುವ ರಾಜ್ಯ ಕಾಂಗ್ರೆಸ್ ನಾಯಕರು ಮತ್ತೊಂದೆಡೆ ಖಾಸಗಿ ಹೊಟೇಲ್‍ನಲ್ಲಿ ತಂಗಿರುವ ಶಾಸಕರ ಜೊತೆ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಹತ್ವದ ಸಮಾಲೋಚನೆ ನಡೆಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನ ಖಾಸಗಿ ಹೊಟೇಲ್‍ನಲ್ಲಿ ತಂಗಿರುವ ಕಾಂಗ್ರೆಸ್ ಶಾಸಕರ ಜೊತೆ ಮಹತ್ವದ ಸಭೆ ನಡೆಸಿದರು.

ಬಹಳಷ್ಟು ಶಾಸಕರುಗಳು ಸರ್ಕಾರದ ಅಳಿವು-ಉಳಿವಿನ ಬಗ್ಗೆ ಆತಂಕಗೊಂಡಿದ್ದು, ತಮಗೆ ಸ್ಪಷ್ಟ ಚಿತ್ರಣ ನೀಡುವಂತೆ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ.

ಈಗಾಗಲೇ ವಿಶ್ವಾಸಮತಯಾಚನೆಗೆ ಗುರುವಾರ ಸಮಯ ನಿಗದಿಯಾಗಿರುವುದರಿಂದ ದೋಸ್ತಿ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದೆ. ಒಂದು ವೇಳೆ ಸರ್ಕಾರ ಉಳಿಯುವುದೇ ಇಲ್ಲ ಎಂದಾದರೆ ನಮ್ಮ ದಾರಿಯನ್ನು ನಾವು ನೋಡಿಕೊಳ್ಳಲು ಬಿಡಿ ಎಂದು ಕೆಲ ಶಾಸಕರು ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಆದರೆ ಇದಕ್ಕೆ ಒಪ್ಪದ ಸಿದ್ದರಾಮಯ್ಯ ಅವರು, ಹೈಕಮಾಂಡ್‍ನ ನಿರ್ದೇಶನ ಮೇರೆಗೆ ನಾವು ಸರ್ಕಾರ ಉಳಿಸಿಕೊಳ್ಳಲೇಬೇಕಿದೆ. ಕಾಂಗ್ರೆಸ್ ಚಿಹ್ನೆಯಡಿ ಆಯ್ಕೆಯಾಗಿರುವ ಶಾಸಕರು ಪಕ್ಷ ನಿಷ್ಠರಾಗಿರಲೇಬೇಕು. ಯಾವುದೇ ಕಾರಣಕ್ಕೂ ಪರ್ಯಾಯ ಆಲೋಚನೆಗಳನ್ನು ಮಾಡಬೇಡಿ ಎಂದು ಸೂಚನೆ ನೀಡಿದ್ದಾರೆ.

ಆದರೂ ಕೆಲ ಶಾಸಕರು ಗೊಂದಲದಲ್ಲಿದ್ದು, ಅದನ್ನು ಬಗೆಹರಿಸಲು ಸಿದ್ದರಾಮಯ್ಯ ಖಾಸಗಿ ಹೊಟೇಲ್ ತಾಜ್ ವಿವಾಂತದಲ್ಲಿ ಮಹತ್ವದ ಸಭೆ ನಡೆಸಿದರು.

ಸಮ್ಮಿಶ್ರ ಸರ್ಕಾರ ಯಾವುದೇ ಷಡ್ಯಂತ್ರಕ್ಕೆ ಬಲಿಯಾಗುವುದಿಲ್ಲ. ಸರ್ಕಾರ ಯಥಾಸ್ಥಿತಿ ಮುಂದುವರೆಯುತ್ತದೆ. 20 ತಿಂಗಳ ನಂತರ ಸಂಪುಟ ಪುನಾರಚನೆಯಾಗುತ್ತದೆ. ಆವರೆಗೂ ಎಲ್ಲಾ ಶಾಸಕರು ತಾಳ್ಮೆಯಿಂದ ಇರಬೇಕು.ಕಾಂಗ್ರೆಸ್‍ನ ಎಲ್ಲಾ ಶಾಸಕರಿಗೂ ಒಂದಲ್ಲ ಒಂದು ಅಧಿಕಾರ ಸಿಕ್ಕೇ ಸಿಗುತ್ತದೆ.

ಯಾವುದೇ ಕಾರಣಕ್ಕೂ ಬಿಜೆಪಿಯ ಸುಳ್ಳು ಆಶ್ವಾಸನೆಗಳಿಗೆ ಕಿವಿಗೊಡಬೇಡಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ