ನವದೆಹಲಿ, ಜು.15-ಉತ್ತರ ಪ್ರದೇಶದ ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಪೂರ್ಣಗೊಳಿಸಲು ವಿಶೇಷ ನ್ಯಾಯಾಧೀಶರು ಸುಪ್ರೀಂಕೋರ್ಟ್ಗೆ ಆರು ತಿಂಗಳ ಕಾಲಾವಕಾಶ ಕೋರಿದ್ದಾರೆ.
ಬಿಜೆಪಿ ಧುರೀಣರಾದ ಎಲ್.ಕೆ.ಅಡ್ವಾಣಿ, ಡಾ.ಮುರಳಿ ಮನೋಹರ ಜೋಷಿ ಮತ್ತು ಇತರರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
ಈ ಸಂಬಂಧ ಇಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿರುವ ವಿಶೇಷ ನ್ಯಾಯಾಧೀಶರು ಇಂದು ಅರ್ಜಿ ಸಲ್ಲಿಸಿ ಬಾಬರಿ ಧ್ವಂಸ ಪ್ರಕರಣದ ವಿಚಾರಣೆ ಪೂರ್ಣಗೊಳಿಸಲು ಆರು ತಿಂಗಳ ಸಮಯಾವಕಾಶ ನೀಡಬೇಕೆಂದು ಕೋರಿದ್ದಾರೆ.
ವಿಶೇಷ ನ್ಯಾಯಾಧೀಶರು ಮೇ ತಿಂಗಳಿನಲ್ಲಿ ಈ ಸಂಬಂಧ ಪತ್ರವೊಂದನ್ನು ಬರೆದು, ಈ ವರ್ಷ ಸೆಪ್ಟೆಂಬರ್ 30ರಂದು ತಾವು ನಿವೃತ್ತರಾಗುತ್ತಿರುವುದಾಗಿ ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿದ್ದರು.
ಇಂದು ಈ ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ಎಫ್.ನಾರಿಮನ್ ನೇತೃತ್ವದ ಪೀಠವು ಈ ಮಹತ್ವದ ಪ್ರಕರಣದಲ್ಲಿ ವಿಚಾರಣೆ ಮುಂದುವರಿಸಿ ತೀರ್ಪು ನೀಡಲು ವಿಶೇಷ ನ್ಯಾಯಾಧೀಶರ ಸೇವಾವಧಿಯನ್ನು ಮುಂದುವರಿಸಲು ಸಾಧ್ಯವಿರಬಹುದಾದ ವ್ಯವಸ್ಥೆ ಬಗ್ಗೆ ಆಲೋಚಿಸುವಂತೆ ಹಾಗೂ ಈ ಬಗ್ಗೆ ಜುಲೈ 19ರಂದು ಪ್ರತ್ಯುತ್ತರ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.
ಏಪ್ರಿಲ್ 18, 2017ರಲ್ಲಿ ಈ ಪ್ರಕರಣದ ವಿಚಾರಣೆಯನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲು ಪ್ರತಿನಿತ್ಯ ವಿಚಾರಣೆಗೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು.