ಅತೃಪ್ತರಿಂದ ಓಲೈಕೆಗೆ ಬರುವ ನಾಯಕರ ವಿರುದ್ಧ ಪೊಲೀಸ್ ಠಾಣೆಗೆ ದೂರು
ಮುಂಬೈ, ಜು.15- ಮೈತ್ರಿ ಸರ್ಕಾರದ ನಡೆಗೆ ಬೇಸತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು ತಮ್ಮ ಓಲೈಕೆಗೆ ಬರುವ ಕಾಂಗ್ರೆಸ್ ನಾಯಕರ ವಿರುದ್ಧ ಮುಂಬೈ ಪೊಲೀಸ್ ಠಾಣೆಗೆ ದೂರು ನೀಡಿರುವ ಬೆನ್ನಲ್ಲೇ ಶಾಸಕ ಶಿವರಾಮ್ ಹೆಬ್ಬಾರು ಅವರು ಕಾಂಗ್ರೆಸ್ ಕಿರುಕುಳದಿಂದ ತಮ್ಮನ್ನು ರಕ್ಷಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟೊಂದು ಹರಿಬಿಟ್ಟಿದ್ದಾರೆ.
ಮೈತ್ರಿ ಸರ್ಕಾರದ ಮೇಲೆ ಮುನಿಸಿಕೊಂಡು ರಾಜೀನಾಮೆ ನೀಡಿ ಪ್ರಸ್ತುತ ಮುಂಬೈನ ಐಷಾರಾಮಿ ಹೋಟೆಲ್ ರಿನೈಸೆನ್ಸ್‍ನಲ್ಲಿ ತಂಗಿರುವ ಅತೃಪ್ತ ಶಾಸಕ ಶಿವರಾಮ್ ಹೆಬ್ಬಾರ್ ತಮ್ಮ ಕ್ಷೇತ್ರದ ಜನರಿಗೆ ಫೇಸ್‍ಬುಕ್‍ನಲ್ಲಿ ಬಹಿರಂಗ ಪತ್ರವನ್ನು ಬರೆದು ಪೋಸ್ಟ್ ಮಾಡಿದ್ದಾರೆ.
ನಿನ್ನೆ ತಡರಾತ್ರಿ ಸುದೀರ್ಘ ಬರಹವಿರುವ ಪೋಸ್ಟ್ವೊಂದನ್ನು ಫೇಸ್‍ಬುಕ್‍ನಲ್ಲಿ ಹಾಕಿದ್ದು, ರಾಜೀನಾಮೆಗೆ ನೀಡಿರುವುದರಕ್ಕೆ ಕಾರಣಗಳನ್ನು ನೀಡಿದ್ದಾರಲ್ಲದೆ, ತಮ್ಮ ರಾಜೀನಾಮೆ ಅತ್ಯಂತ ಅವಶ್ಯಕವಾಗಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ.
ಧಿಡೀರ್ ರಾಜಕೀಯ ಬೆಳವಣಿಗೆಗಳ ಬಗ್ಗೆ ಕ್ಷೇತ್ರದ ಜನರ ಕ್ಷಮೆ ಕೋರಿರುವ ಯಲ್ಲಾಪುರ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಅವರು, ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಈ ರಾಜೀನಾಮೆ ಅನಿವಾರ್ಯವೂ, ಅವಶ್ಯಕವೂ ಆಗಿದೆ ಎಂದು ಹೇಳಿಕೊಂಡಿದ್ದಾರೆ.
ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರುವುದು ಅಸಾಧ್ಯ ಎನಿಸುವಂಥ ಸ್ಥಿತಿ ನಿರ್ಮಾಣವಾಗಿತ್ತು, ಪಕ್ಷದ ಹಿರಿಯರು, ಜಿಲ್ಲಾ ಸಚಿವರೂ ಸಹ ನನ್ನ ಮನವಿಗೆ ಸ್ಪಂದಿಸುವ ವ್ಯವಧಾನ ತೋರಲಿಲ್ಲ. ಹಾಗಾಗಿ ಬಹಳ ಯೋಚಿಸಿ ರಾಜೀನಾಮೆ ನಿರ್ಧಾರ ತೆಗೆದುಕೊಂಡಿದ್ದೇನೆ. ಆದರೆ ಇದೀಗ ದೋಸ್ತಿ ನಾಯಕರಿಂದ ರಾಜೀನಾಮೆ ಪಡೆಯುವಂತೆ ಒತ್ತಡಗಳು ಬರುತ್ತಿವೆ. ಇದರಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಕಾಂಗ್ರೆಸ್ ನಾಯಕರಿಂದ ತನ್ನನ್ನು ರಕ್ಷಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಬಿಜೆಪಿ ಅಲೆ ಇದ್ದರೂ ಸಹ, ಅಭಿವೃದ್ಧಿ ದೃಷ್ಟಿಯಿಂದ ನನ್ನನ್ನು ಗೆಲ್ಲಿಸಿದ ನಿಮಗೆ ಧನ್ಯವಾದ. ಆದರೆ ಈ ರಾಜೀನಾಮೆ ಅತ್ಯವಶ್ಯಕವಾಗಿತ್ತು, ಈ ನಿರ್ಣಯದ ಬಗ್ಗೆ ಪಕ್ಷದ ಹಿರಿಯರಿಗೆ ಈ ಮೊದಲೇ ತಿಳಿಸಿದ್ದೆ ಎಂದಿರುವ ಶಿವರಾಮ್ ಹೆಬ್ಬಾರ್, ಈ 8-10 ದಿನಗಳು ಕ್ಷೇತ್ರದಿಂದ ದೂರ ಇರುತ್ತೇನೆ ಇದಕ್ಕಾಗಿ ಕ್ಷಮೆ ಇರಲಿ ಎಂದು ಬರೆದುಕೊಂಡಿದ್ದಾರೆ.
ಹಿರಿಯ ನಾಯಕರ ವಿರುದ್ಧ ಕಿಡಿಕಾರಿದ ರೆಬೆಲ್ ಶಾಸಕರು
ಮುಂಬೈ,ಜು.15-ಪದೇ ಪದೇ ಭೇಟಿ ಮಾಡಲು ಮುಂಬೈಗೆ ಬಂದು ನಮ್ಮ ಮನಃಶಾಂತಿ ಕೆಡಿಸುತ್ತಿದ್ದಾರೆ ಎಂದು ಮನವೊಲಿಕೆಗೆ ಬರುತ್ತಿರುವ ಮೈತ್ರಿ ಪಕ್ಷಗಳ ಹಿರಿಯ ನಾಯಕರ ವಿರುದ್ಧ ರೆಬೆಲ್ ಶಾಸಕರು ಕಿಡಿಕಾರಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಸೇರಿಕೊಂಡಿರುವ ಅತೃಪ್ತ ಶಾಸಕರ ಮನವೊಲಿಸಲು ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಇಂದು ಮುಂಬೈಗೆ ತೆರಳಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಈ ಹಿನ್ನೆಲೆಯಲ್ಲಿ ಮುಂಬೈ ನಗರಿ ಮತ್ತೊಂದು ಹೈಡ್ರಾಮಾಕ್ಕೆ ವೇದಿಕೆ ಆಗುತ್ತಾ ಎಂಬ ಪ್ರಶ್ನೆ ಹುಟ್ಟುಕೊಂಡಿದೆ.
ಯಾಕೆಂದರೆ ಪದೇ ಪದೇ ಇಲ್ಲಿಗೆ ಬಂದು ನಮ್ಮ ಶಾಂತಿ ಕದಡುತ್ತಿದ್ದಾರೆಂದು ಭಿನ್ನಮತೀಯರು ದೂರಿದ್ದಾರೆ. ಅವರಿಂದ ನಮಗೆ ಜೀವಬೆದರಿಕೆಯಿದೆ.ಹೀಗಾಗಿ ರಕ್ಷಣೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಅಲ್ಲದೆ ಕಾಂಗ್ರೆಸ್ ಪಕ್ಷದ 10 ಶಾಸಕರು ತಮ್ಮ ಪಕ್ಷದ ಹಿರಿಯ ನಾಯಕರ ವಿರುದ್ಧ ದೂರು ನೀಡಲು ಮುಂದಾಗಿದ್ದು, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ , ಗುಲಾಂನಬಿ ಆಜಾದ್ ನಮ್ಮನ್ನು ಭೇಟಿ ಮಾಡಲು ಬರಲಿದ್ದಾರೆ. ನಮಗೆ ಯಾರನ್ನೂ ಭೇಟಿ ಮಾಡುವುದು ಇಷ್ಟವಿಲ್ಲವೆಂದು ಸ್ಥಳೀಯ ಠಾಣೆ ಮೂಲಕ ಮುಂಬೈ ಪೊಲೀಸ್ ಕಮೀಷನರ್‍ಗೆ ಪತ್ರ ಬರೆದಿದ್ದಾರೆ.
ಪೊವಾಯಿ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ಅವರಿಗೆ ಈ ಮನವಿ ಮಾಡಿಕೊಂಡಿರುವ 14 ಮಂದಿ ಅತೃಪ್ತ ಶಾಸಕರು, ಯಾವುದೇ ನಾಯಕರನ್ನು ಭೇಟಿ ಮಾಡಲು ಇಷ್ಟವಿಲ್ಲ. ನಾವು ಕೊಟ್ಟಿರುವ ರಾಜೀನಾಮೆಯನ್ನು ಹಿಂಪಡೆಯುವುದಿಲ್ಲ. ಹೀಗಾಗಿ ಕಾಂಗ್ರೆಸ್ ನಾಯಕರಿಂದ ನಮಗೆ ಬೆದರಿಕೆ ಇದೆ. ನಮ್ಮ ಭೇಟಿಗೆ ಯಾರಿಗೂ ಅವಕಾಶ ನೀಡಬಾರದೆಂದು ಪತ್ರದಲ್ಲಿ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.
ಸೂಕ್ತ ಭದ್ರತೆ ನೀಡುವಂತೆಯೂ ಮಹಾರಾಷ್ಟ್ರ ಪೊಲೀಸರಿಗೆ ಮನವಿ ಮಾಡಿರುವ ಅತೃಪ್ತರು, ಸುಪ್ರೀಂಕೋರ್ಟ್‍ಗೂ ಸಹ ಇಂದು ಮನವಿ ಸಲ್ಲಿಸಲು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕೋರ್ಟ್‍ಗೆ ಮತ್ತೊಂದು ಅರ್ಜಿ :
ತಾವು ರಾಜೀನಾಮೆ ಹಿಂಪಡೆಯುವುದಿಲ್ಲ ಎಂದರೂ ಕೆಲ ನಾಯಕರು ಪದೇಪದೇ ಬಂದು ರಾಜೀನಾಮೆ ಹಿಂಪಡೆಯುವಂತೆ ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ. ಅನಗತ್ಯವಾಗಿ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿ ರೆಬೆಲ್ ಶಾಸಕರು ಸುಪ್ರೀಂಕೋರ್ಟ್‍ನಲ್ಲಿ ಮತ್ತೊಂದು ಅರ್ಜಿ ದಾಖಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಶಾಸಕ ಸ್ಥಾನಕ್ಕೆ ಕೊಟ್ಟಿರುವ ರಾಜೀನಾಮೆಯನ್ನು ಅಂಗೀಕರಿಸಲು ವಿಧಾನಸಭಾಧ್ಯಕ್ಷರು ಅನಗತ್ಯ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ರೆಬೆಲ್ ಶಾಸಕರು ಈಗಾಗಲೆ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ.
ಈಗಾಗಲೇ ಒಮ್ಮೆ ವಿಚಾರಣೆ ಮಾಡಿರುವ ಸುಪ್ರೀಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಯ್ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ.
ಇದಕ್ಕೆ ಪೂರಕವಾಗಿ ಬಿ.ರಾಮಲಿಂಗಾ ರೆಡ್ಡಿ, ಎಂಟಿಬಿ ನಾಗರಾಜ್ ಸೇರಿ ಐವರು ಶಾಸಕರು ಕೂಡ ತಮ್ಮ ರಾಜೀನಾಮೆಯನ್ನು ಅಂಗೀಕರಿಸುವಂತೆ ವಿಧಾನಸಭಾಧ್ಯಕ್ಷರಿಗೆ ಸೂಚಿಸುವಂತೆ ಕೋರಿ ಸುಪ್ರೀಂಕೋರ್ಟ್‍ಗೆ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ.