ಬೆಂಗಳೂರು, ಜು.15-ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ರಾಜಕೀಯ ಪಕ್ಷಗಳು ತಮ್ಮ ತಮ್ಮ ಪಕ್ಷದ ಶಾಸಕರನ್ನು ಒಟ್ಟಾಗಿ ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ರೆಸಾರ್ಟ್ ಹಾಗೂ ಖಾಸಗಿ ಹೊಟೇಲ್‍ಗಳಲ್ಲಿ ತಂಗಿದ್ದ ಶಾಸಕರು ನೇರವಾಗಿ ಇಂದು ವಿಧಾನಸೌಧಕ್ಕೆ ಆಗಮಿಸಿದರು.
ನಗರದ ಖಾಸಗಿ ಹೊಟೇಲ್‍ನಲ್ಲಿ ಬೀಡುಬಿಟ್ಟಿದ್ದ ಕಾಂಗ್ರೆಸ್ ಶಾಸಕರು ಇಂದು ಬೆಳಗ್ಗೆ ನಡೆದ ಶಾಸಕಾಂಗ ಪಕ್ಷದ ಸಭೆಯ ನಂತರ ಎಲ್ಲಾ ಶಾಸಕರು ಬಸ್‍ನಲ್ಲಿ ಒಟ್ಟಾಗಿ ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಲು ಆಗಮಿಸಿದ್ದರು.
ಅದೇ ರೀತಿ ರಾಜಾನುಕುಂಟೆ ಬಳಿಯ ಹೊಟೇಲ್‍ನಲ್ಲಿದ್ದ ಬಿಜೆಪಿ ಶಾಸಕರು ವಿಧಾನಸೌಧಕ್ಕೆ ಆಗಮಿಸಿದ್ದರು.
ದೇವನಹಳ್ಳಿ ಬಳಿಯ ರೆಸಾರ್ಟ್‍ನಲ್ಲಿ ಬೀಡುಬಿಟ್ಟಿದ್ದ ಜೆಡಿಎಸ್ ಶಾಸಕರು ಅಲ್ಲಿಂದಲೇ ಒಟ್ಟಾಗಿ ವಿಧಾನಸೌಧಕ್ಕೆ ಆಗಮಿಸಿದರು.
ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರೂ ಪಕ್ಷದ ಶಾಸಕರು ಒಟ್ಟೊಟ್ಟಾಗಿ ಆಗಮಿಸಿ ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಂಡರು.
ಆಪರೇಷನ್ ಕಮಲದ ಭೀತಿಯಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಪ್ರತ್ಯೇಕವಾಗಿ ಒಂದೆಡೆ ಸೇರಿಸಿ ಒಗ್ಗಟ್ಟನ್ನು ಕಾಯ್ದುಕೊಳ್ಳುವ ಪ್ರಯತ್ನ ನಡೆಸಲಾಗಿತ್ತು. ಅದೇ ರೀತಿ ಆಡಳಿತ ಪಕ್ಷದಿಂದ ರಿವರ್ಸ್ ಆಪರೇಷನ್ ಮಾಡಲಾಗುತ್ತದೆ ಎಂಬ ಭೀತಿಯಿಂದ ಬಿಜೆಪಿ ಶಾಸಕರನ್ನು ಕೂಡ ಖಾಸಗಿ ಹೊಟೇಲ್‍ನಲ್ಲಿ ಇರಿಸಲಾಗಿತ್ತು.
ಶುಕ್ರವಾರ ಅಧಿವೇಶನ ಮುಕ್ತಾಯಗೊಂಡ ನಂತರ ಜೆಡಿಎಸ್ ಶಾಸಕರು ರೆಸಾರ್ಟ್‍ಗೆ ತೆರಳಿದ್ದರೆ, ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರು ಖಾಸಗಿ ಹೊಟೇಲ್‍ಗಳಿಗೆ ತೆರಳಿದ್ದರು.