ತುಮಕೂರು, ಜು.15-ಮತ ಕೊಟ್ಟ ಪ್ರಭುಗಳನ್ನೇ ಧಿಕ್ಕರಿಸಿ ರೆಸಾರ್ಟ್ ರಾಜಕಾರಣ ಮಾಡಲು ಹೋಗಿರುವ ಶಾಸಕರ ವಿರುದ್ಧ ರೈತ ಸಂಘ ಇಂದು ವಿನೂತನವಾಗಿ ಪ್ರತಿಭಟನೆ ನಡೆಸಿತು.
ನಗರದ ಟೌನ್‍ಹಾಲ್ ವೃತ್ತದಲ್ಲಿ ರೈತ ಸಂಘಟನೆಯ ಆನಂದ್ ಪಟೇಲ್ ನೇತೃತ್ವದಲ್ಲಿ ನೂರಾರು ಮಂದಿ ರೈತರು ಪ್ರತಿಭಟನೆ ನಡೆಸಿ ರೆಸಾರ್ಟ್ ರಾಜಕಾರಣದಲ್ಲಿ ತೊಡಗಿಕೊಂಡಿರುವ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬಾಯಿ ಬಡಿದುಕೊಂಡು ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಈ ವೇಳೆ ಆನಂದ್ ಪಟೇಲ್ ಮಾತನಾಡಿ, ಈ ಸರ್ಕಾರ ಬದುಕಿದೆಯೋ, ಸತ್ತಿದೆಯೋ ಎಂದು ತಿಳಿಯುತ್ತಿಲ್ಲ. ಜಿಲ್ಲೆಯ 10 ತಾಲ್ಲೂಕುಗಳಲ್ಲಿ ಭೀಕರ ಬರಗಾಲ ತಲೆದೋರಿದೆ. ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಜಾನುವಾರುಗಳಿಗೆ ಮೇವಿಲ್ಲ. ಹನಿ ಹನಿ ನೀರಿಗೂ ಪರಿತಪಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.
ರೈತರು ಬೆಳೆದ ಬೆಳೆ ಕೈ ಸೇರಿಲ್ಲ, ಮುಂಗಾರು ಮಳೆ ಆರಂಭವಾಗಿ ಇಷ್ಟೆಲ್ಲ ಅವಾಂತರ ಸಂಭವಿಸಿದರೂ ಜನಪ್ರತಿನಿಧಿಗಳ್ಯಾರೂ ರೈತರ ನೆರವಿಗೆ ಧಾವಿಸಿಲ್ಲ. ಜನರ ಮತ್ತು ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಸರ್ಕಾರ ಇದ್ದರೆ ಅಲ್ಲವೇ ಅವರು ಕೆಲಸ ಮಾಡುವುದು, ಸರ್ಕಾರವೇ ಕೋಮಾ ಸ್ಥಿತಿಯಲ್ಲಿದೆ. ಇನ್ನು ಆಡಳಿತ ಎಲ್ಲಿಂದ ನಡೆಯುತ್ತದೆ. ರಾಜ್ಯಾದ್ಯಂತ ಜನರು ತಮ್ಮ ಪ್ರತಿನಿಧಿಗಳು ಆರಿಸಿ ವಿಧಾನಸಭೆಗೆ ಕಳುಹಿಸಿದರೆ ಇವರು ಮೋಜು ಮೋಸ್ತಿಗೆ ಹೋಗುತ್ತಿದ್ದಾರೆ. ಜನರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೆಸಾರ್ಟ್‍ಗಳಿಗೆ ಹೋಗಿ ಕೋಟ್ಯಂತರ ರೂ.ಹಣವನ್ನು ವ್ಯಯ ಮಾಡುತ್ತಿದ್ದಾರೆ. ಇದು ಯಾರ ದುಡ್ಡು? ಜನರು, ರೈತರು ಕಷ್ಟಪಟ್ಟು ದುಡಿದು ಕಟ್ಟುವ ತೆರಿಗೆ ಹಣದಲ್ಲಿ ಇವರು ಮೋಜು ಮಸ್ತಿ ಮಾಡುತ್ತಾರೆ. ಇದೇ ರೀತಿ ಮುಂದುವರೆದರೆ ನೀವಿರುವ ಜಾಗಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಶಾಸಕರಿಗೆ ಗಂಭೀರ ಎಚ್ಚರಿಕೆ ನೀಡಿದರು.
ಇನ್ನಾದರೂ ತಕ್ಷಣವೇ ಎಚ್ಚೆತ್ತುಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.