ಬೆಂಗಳೂರು, ಜು.15-ಸಚಿವರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದು, ಪ್ರಶ್ನೋತ್ತರ ಕಲಾಪದಲ್ಲಿ ಉತ್ತ ರ ನೀಡುವ ಅವಕಾಶವಿಲ್ಲ. ಸರ್ಕಾರ ಅಸ್ತಿತ್ವ ಕಳೆದುಕೊಂಡಿದೆ ಎಂದು ಪ್ರತಿಪಕ್ಷ ಬಿಜೆಪಿ ಮಾಡಿದ ಆರೋಪ ಮೇಲ್ಮನೆಯಲ್ಲಿ ಗದ್ದಲ, ಕೋಲಾಹಲ ಸೃಷ್ಟಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದು ಕಲಾಪವನ್ನು ಕೆಲ ಕಾಲ ಮುಂದೂಡಲಾಯಿತು.
ನಿಗದಿತ ಅವಧಿಗಿಂತ ಒಂದು ಗಂಟೆ ತಡವಾಗಿ ಕಲಾಪ ಪ್ರಾರಂಭವಾದಾಗ ಸಭಾಪತಿ ಸ್ಥಾನದಲ್ಲಿದ್ದ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರು ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಂಡಾಗ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಸದಸ್ಯರಾದ ನಾರಾಯಣಸ್ವಾಮಿ, ಆಯನೂರು ಮಂಜುನಾಥ್ ಸೇರಿದಂತೆ ಹಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಶ್ರೀನಿವಾಸಪೂಜಾರಿ ಮಾತನಾಡಿ, ಮುಖ್ಯಮಂತ್ರಿ ಒಬ್ಬರನ್ನು ಬಿಟ್ಟು ಸರ್ಕಾರದಲ್ಲಿ ಎಲ್ಲ ಸಚಿವರು ರಾಜೀನಾಮೆ ನೀಡಿದ್ದಾರೆ. ಯಾವ ಇಲಾಖೆಯಲ್ಲಿ ಏನಾಗುತ್ತಿದೆ ಎಂದು ಯಾವ ಸಚಿವರಿಗೂ ಗೊತ್ತಿಲ್ಲ. ಇನ್ನು ಪ್ರಶ್ನೆಗಳಿಗೆ ಉತ್ತರದ ಅಗತ್ಯವಿಲ್ಲ. ಕೆಳಮನೆಯಲ್ಲಿ 16 ಶಾಸಕರು ರಾಜೀನಾಮೆ ನೀಡಿದ್ದಾರೆ. ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಹೇಳಿದ ಮಾತು ಆಡಳಿತ ಪಕ್ಷದವರನ್ನು ಕೆರಳಿಸಿತು. ಸಭಾನಾಯಕಿ ಜಯಮಾಲಾ, ಸಚಿವರಾದ ಸಾ.ರಾ.ಮಹೇಶ್, ಪ್ರಿಯಾಂಕ್‍ಖರ್ಗೆ, ಎಂ.ಬಿ.ಪಾಟೀಲ್, ಪುಟ್ಟರಂಗಶೆಟ್ಟಿ ಒಮ್ಮೆಲೆ ಎದ್ದುನಿಂತು, ನಾವಿಲ್ಲಿ ಸಚಿವರಾಗಿದ್ದೇವೆ. ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡುತ್ತೇವೆ.
ನಿಯಮಾವಳಿಗಳ ಪ್ರಕಾರ ಸದನ ನಡೆಯಲಿ ಅವಕಾಶ ಮಾಡಿಕೊಡಿ. ನಮ್ಮ ರಾಜೀನಾಮೆ ಅಂಗೀಕಾರವಾಗಿಲ್ಲ ಎಂದು ಹೇಳಿದರು.
ಇದಕ್ಕೆ ತಿರುಗೇಟು ನೀಡಿದ ಕೋಟಾಶ್ರೀನಿವಾಸ್‍ಪೂಜಾರಿ, ನೂರಾರು ಪೊಲೀಸ್ ಅಧಿಕಾರಿಗಳ ವರ್ಗಾವಣೆಯಾಗಿದೆ. ಗೃಹ ಮಂತ್ರಿಗಳಿಗೆ ಗೊತ್ತಿಲ್ಲ. ಏನು ನಡೆಯುತ್ತಿದೆ ಎಂಬುದೇ ಸಚಿವರಿಗೆ ಗೊತ್ತಿಲ್ಲದಿರುವಾಗ ಪ್ರಶ್ನೋತ್ತರ ಕಲಾಪ ಬೇಕೇ? ಸರ್ವವೂ ಮುಖ್ಯಮಂತ್ರಿಗಳೇ ಆಗಿದ್ದಾರೆ. ಅವರು ಬಂದು ಉತ್ತರ ಕೊಡಲಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ, ಪರಸ್ಪರ ವಾಗ್ದಾಳಿ ನಡೆಯಿತು.
ಮಧ್ಯಪ್ರವೇಶಿಸಿದ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರು ನಿಯಮಾವಳಿ ಪ್ರಕಾರ ಸದನ ನಡೆಯಬೇಕು.ಸಮಯ ವ್ಯಯ ಮಾಡುವುದು ಬೇಡ. ಪ್ರಶ್ನೋತ್ತರಕ್ಕೆ ಅವಕಾಶ ಮಾಡಿಕೊಡಿ ಎಂದು ಎದ್ದು ನಿಂತು ಮನವಿ ಮಾಡಿದರು.
ಪ್ರತಿಪಕ್ಷಗಳ ಸದಸ್ಯರು ಮಾನ್ಯ ಮಾಡಲಿಲ್ಲ. ಸಭಾಪತಿ ಎದ್ದು ನಿಂತು ಮಾಡಿದ ಮನವಿಗೆ ಗೌರವ ಕೊಡದಿರುವುದಕ್ಕೆ ಎಸ್.ಆರ್.ಪಾಟೀಲ್ ಅವರು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸದಸ್ಯ ಹೊರಟ್ಟಿ ಅವರು, ಪ್ರತಿಪಕ್ಷದವರಿಗೆ ಮಾತನಾಡಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದಾಗ, ಮಾತನಾಡಲಿಕ್ಕೆ ಸರ್ಕಾರ ಇದೆಯೇ ? ಎಂದು ಪ್ರತಿಪಕ್ಷದ ಸದಸ್ಯರು ಮತ್ತೆ ಸದನದಲ್ಲಿ ಗದ್ದಲ, ಕೋಲಾಹಲ ಉಂಟು ಮಾಡಿದರು.
ಆಗ ಸಭಾಪತಿಯವರು ಸದನವನ್ನು ಅರ್ಧಗಂಟೆ ಕಾಲ ಮುಂದೂಡಿದರು.