ಬೆಂಗಳೂರು, ಜು.15-ಬಹುಮತ ವಿಲ್ಲದ ಸರ್ಕಾರ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ಮೇಲ್ಮನೆಯಲ್ಲಿ ಧರಣಿ… ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ ಎಂದು ಆಡಳಿತ ಪಕ್ಷದವರ ಘೋಷಣೆಗಳು ಮೇಲ್ಮನೆಯಲ್ಲಿ ಪ್ರತಿಧ್ವನಿಸಿ ಗದ್ದಲ, ಕೋಲಾಹಲ ಉಂಟಾಗಿ ಸದನವನ್ನು ನಾಳೆಗೆ ಮುಂದೂಡಲಾಯಿತು.
ಎರಡನೇ ಬಾರಿ ಮೇಲ್ಮನೆ ಕಲಾಪ ಪ್ರಾರಂಭವಾದಾಗ ಆಡಳಿತ ಪಕ್ಷದ ಸದಸ್ಯ ಐವಾನ್ ಡಿಸೋಜಾ ಪ್ರಶ್ನೋತ್ತರಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿದಾಗ, ಪ್ರತಿಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಸರ್ಕಾರ ಬಹುಮತ ಕಳೆದುಕೊಂಡಿದೆ.ಮುಖ್ಯಮಂತ್ರಿಯವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಕೆಳ ಮನೆಯಲ್ಲಿ ಆಡಳಿತ ಪಕ್ಷದ 16 ಸದಸ್ಯರು ರಾಜೀನಾಮೆ ನೀಡಿದ್ದಾರೆ. ಸರ್ಕಾರ ಅಲ್ಪಮತಕ್ಕೆ ಕುಸಿದಿದೆ.ಇದಲ್ಲದೆ, ಎಲ್ಲಾ ಸಚಿವರೂ ಕೂಡ ರಾಜೀನಾಮೆ ನೀಡಿದ್ದಾರೆ.ಪ್ರಶ್ನೋತ್ತರ ಕಲಾಪ ನಡೆಸುವ ನೈತಿಕತೆ ಇಲ್ಲ. ಸರ್ಕಾರ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಭಾನಾಯಕಿ ಜಯಮಾಲಾ, ಸಚಿವರಾದ ಸಾ.ರಾ.ಮಹೇಶ್, ಪುಟ್ಟರಂಗಶೆಟ್ಟಿ, ಬಂಡೆಪ್ಪ ಕಾಶಂಪುರ್, ನಾವು ರಾಜೀನಾಮೆ ನಿಮಗೆ ನೀಡಿದ್ದೇವೆಯೇ? ನಮ್ಮ ರಾಜೀನಾಮೆ ಅಂಗೀಕಾರವಾಗಿದೆಯೇ? ನಿಮಗೆ ನೈತಿಕತೆ ಇದೆಯೇ?ನಮ್ಮ ಶಾಸಕರನ್ನು ಕೊಂಡೊಯ್ದು ಮುಂಬೈನಲ್ಲಿಟ್ಟುಕೊಂಡಿದ್ದೀರ ಎಂದು ತಿರುಗೇಟು ನೀಡಿದರು.
ಈ ಸಂದರ್ಭದಲ್ಲಿ ಆರೋಪ-ಪ್ರತ್ಯಾರೋಪ, ಮಾತಿನ ಚಕಮಕಿ ನಡೆಯಿತು. ಸಭಾಪತಿ ಸ್ಥಾನದಲ್ಲಿ ಉಪಸಭಾಪತಿಯವರು ಪ್ರಶ್ನೋತ್ತರಕ್ಕೆ ಅವಕಾಶ ಮಾಡಿಕೊಟ್ಟಿದ್ದೇನೆ ಎಂದು ಶರಣಪ್ಪ ಮಟ್ಟೂರು ಅವರಿಗೆ ಪ್ರಶ್ನೆಯನ್ನು ಕೇಳಲು ಸೂಚಿಸಿದರು.
ಆಗ ಆಕ್ರೋಶಗೊಂಡ ಪ್ರತಿಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬಿತ್ತಿಪತ್ರಗಳನ್ನು ಹಿಡಿದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಮುಂದಾದರು.
ಅಲ್ಪ ಮತಕ್ಕೆ ಕುಸಿದಿರುವ ಸರ್ಕಾರ ರಾಜೀನಾಮೆ ನೀಡಬೇಕು. ಬಹುಮತ ಕಳೆದುಕೊಂಡಿರುವ ಸರ್ಕಾರ ಅಧಿಕಾರದಿಂದ ಹೋಗಬೇಕು ಎಂದು ಘೋಷಣೆಗಳನ್ನು ಕೂಗಲಾರಂಭಿಸಿದರು.
ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು ಬಿಜೆಪಿ ವಿರುದ್ಧ ಭಿತ್ತಿಪತ್ರ ಫಲಕಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದರು. ಶಾಸಕರ ಖರೀದಿ ಮಾಡಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ಐವಾನ್ ಡಿಸೋಜಾ, ಟಿ.ಎ.ಶರವಣ ಮುಂತಾದವರು 100 ಕೋಟಿ, 50 ಕೋಟಿಗೆ ಶಾಸಕರನ್ನು ಖರೀದಿ ಮಾಡಲಾಗಿದೆ ಎಂದು ಭಿತ್ತಿ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಲಾರಂಭಿಸಿದರು.
ಸದನದಲ್ಲಿ ಗದ್ದಲ, ಕೋಲಾಹಲದ ವಾತಾವರಣ ಉಂಟಾಯಿತು. ಮಧ್ಯಪ್ರವೇಶಿಸಿದ ಎಸ್.ಎಲ್.ಧರ್ಮೇಗೌಡ ಅವರು ಕಲಾಪವನ್ನು ನಾಳೆ 11.30ಕ್ಕೆ ಮುಂದೂಡಿದರು.
ಇದಕ್ಕೂ ಮುನ್ನ ಇಂದು ಬೆಳಗ್ಗೆ ನಿಗದಿತ ಅವಧಿಗಿಂತ ಒಂದು ಗಂಟೆ ತಡವಾಗಿ ಕಲಾಪ ಪ್ರಾರಂಭವಾದಾಗ ಸಭಾಪತಿ ಸ್ಥಾನದಲ್ಲಿದ್ದ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರು ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಂಡಾಗಲೂ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಸಚಿವರು ಸಾಮೂಹಿಕ ರಾಜೀನಾಮೆ ನೀಡಿರುವುದರಿಂದ, ಪ್ರಶ್ನೋತ್ತರ ಕಲಾಪದಲ್ಲಿ ಉತ್ತರ ನೀಡುವ ಅವಕಾಶವಿಲ್ಲ. ಸರ್ಕಾರ ಅಸ್ತಿತ್ವ ಕಳೆದುಕೊಂಡಿದೆ ಎಂದು ಪ್ರತಿಪಕ್ಷಗಳವರು ಮೇಲ್ಮನೆಯಲ್ಲಿ ಮಾಡಿದ ಆರೋಪ, ಗದ್ದಲ ಉಂಟಾಯಿತು.
ಶ್ರೀನಿವಾಸಪೂಜಾರಿ ಮಾತನಾಡಿ, ಮುಖ್ಯಮಂತ್ರಿ ಒಬ್ಬರನ್ನು ಬಿಟ್ಟು ಸರ್ಕಾರದಲ್ಲಿ ಎಲ್ಲ ಸಚಿವರು ರಾಜೀನಾಮೆ ನೀಡಿದ್ದಾರೆ. ಯಾವ ಇಲಾಖೆಯಲ್ಲಿ ಏನಾಗುತ್ತಿದೆ ಎಂದು ಯಾವ ಸಚಿವರಿಗೂ ಗೊತ್ತಿಲ್ಲ ಎಂದು ಆರೋಪಿಸುತ್ತಿದ್ದಂತೆ ಸಭಾನಾಯಕಿ ಜಯಮಾಲಾ, ಸಚಿವರಾದ ಸಾ.ರಾ.ಮಹೇಶ್, ಪ್ರಿಯಾಂಕ್ಖರ್ಗೆ, ಎಂ.ಬಿ.ಪಾಟೀಲ್, ಪುಟ್ಟರಂಗಶೆಟ್ಟಿ ಒಮ್ಮೆಲೆ ಎದ್ದುನಿಂತು, ನಾವಿಲ್ಲಿ ಸಚಿವರಾಗಿದ್ದೇವೆ. ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡುತ್ತೇವೆ. ನಿಯಮಾವಳಿಗಳ ಪ್ರಕಾರ ಸದನ ನಡೆಯಲಿ ಅವಕಾಶ ಮಾಡಿಕೊಡಿ. ನಮ್ಮ ರಾಜೀನಾಮೆ ಅಂಗೀಕಾರವಾಗಿಲ್ಲ ಎಂದು ಹೇಳಿದರು.
ಮಧ್ಯಪ್ರವೇಶಿಸಿದ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರು ನಿಯಮಾವಳಿ ಪ್ರಕಾರ ಸದನ ನಡೆಯಬೇಕು. ಸಮಯ ವ್ಯಯ ಮಾಡುವುದು ಬೇಡ. ಪ್ರಶ್ನೋತ್ತರಕ್ಕೆ ಅವಕಾಶ ಮಾಡಿಕೊಡಿ ಎಂದು ಎದ್ದು ನಿಂತು ಮನವಿ ಮಾಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸದಸ್ಯ ಹೊರಟ್ಟಿ ಅವರು, ಪ್ರತಿಪಕ್ಷದವರಿಗೆ ಮಾತನಾಡಲು ಅವಕಾಶ ಮಾಡಿದ ಮನವಿಗೆ, ಮಾತನಾಡಲಿಕ್ಕೆ ಸರ್ಕಾರ ಇದೆಯೇ ? ಎಂದು ಪ್ರತಿಪಕ್ಷದವರು ಕೇಳಿದಾಗ ಮತ್ತೆ ಮಾತಿನ ಚಕಮಕಿ ನಡೆದು ಸದನ ಗದ್ದಲದ ಗೂಡಾಯಿತು. ಆಗ ಸಭಾಪತಿಯವರು ಸದನವನ್ನು ಅರ್ಧಗಂಟೆ ಕಾಲ ಮುಂದೂಡಿದ್ದರು.
ನಂತರ ಆರಂಭವಾದ ಕಲಾಪದಲ್ಲೂ ಆಡಳಿತ-ಪ್ರತಿಪಕ್ಷದ ನಡುವೆ ಮಾತಿನ ಚಕಮಕಿ ಮುಂದುವರೆದು ನಾಳೆಗೆ ಕಲಾಪ ಮುಂದೂಡಲಾಯಿತು.