ಬೆಂಗಳೂರು, ಜು.14-ಕಾಂಗ್ರೆಸ್ನ ಮತ್ತಿಬ್ಬರು ಶಾಸಕರು ಇಂದು ಮುಂಬೈಗೆ ಹಾರಿದ್ದರಿಂದ ಸರ್ಕಾರದ ವಿರುದ್ಧ ಬಂಡೆದ್ದು ಮುಂಬೈನಲ್ಲಿ ನೆಲೆಯೂರಿರುವ ಅತೃಪ್ತ ಶಾಸಕರ ಸಂಖ್ಯೆ 15ನ್ನೂ ದಾಟಿದೆ. ನಿರೀಕ್ಷಿತ ಬೆಳವಣಿಗೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾರದ ವಿರುದ್ಧದ ಶಾಸಕರ ಸಂಖ್ಯಾಬಲ ದಿನೇ ದಿನೇ ಹೆಚ್ಚಾಗುತ್ತಿದೆ.
ಕಾಂಗ್ರೆಸ್ನ 13, ಜೆಡಿಎಸ್ನ ಮೂವರು ಸೇರಿ ಒಟ್ಟು 16 ಮಂದಿ ರಾಜೀನಾಮೆ ನೀಡಿದ್ದಾರೆ. ಅವರ ಪೈಕಿ ಜೆಡಿಎಸ್ನ ಎಚ್.ವಿಶ್ವನಾಥ್, ನಾರಾಯಣಗೌಡ, ಗೋಪಾಲಯ್ಯ, ಕಾಂಗ್ರೆಸ್ನ ರಮೇಶ್ಜಾರಕಿ ಹೊಳಿ, ಮಹೇಶ್ ಕುಮಟಳ್ಳಿ, ಪ್ರತಾಪ್ಗೌಡ ಪಾಟೀಲ್, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್, ಎಸ್.ಟಿ.ಸೋಮಶೇಖರ್, ಭೆರತಿ ಬಸವರಾಜ್, ಪಕ್ಷೇತರರಾದ ನಾಗೇಶ್, ಶಂಕರ್ ಅವರುಗಳು ಮುಂಬೈನಲ್ಲಿ ಕಳೆದ ಒಂದು ವಾರದಿಂದ ಠಿಕಾಣಿ ಹೂಡಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಆನಂದ್ಸಿಂಗ್, ರಾಮಲಿಂಗಾರೆಡ್ಡಿ, ಸುಧಾಕರ್, ಮುನಿರತ್ನ, ಎಂ.ಟಿ.ಬಿ.ನಾಗರಾಜ್ ಅವರು ಈವರೆಗೂ ಮುಂಬೈ ತಲುಪಿರಲಿಲ್ಲ.
ನಿನ್ನೆ ಕಾಂಗ್ರೆಸ್ ನಾಯಕರು ಸಂಧಾನ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತಿದ್ದಂತೆ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಸುಧಾಕರ್ ಯಾರ ಕೈಗೂ ಸಿಗದೆ ದೆಹಲಿಗೆ ತೆರಳಿದ್ದಾರೆ. ಇಂದು ಅವರು ಮುಂಬೈಗೆ ತೆರಳಿ ಅತೃಪ್ತ ಗುಂಪನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಇಂದು ಬೆಳಗ್ಗೆ ಎಂ.ಟಿ.ಬಿ.ನಾಗರಾಜ್ ಅವರು ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದು, 10.30ಕ್ಕೆ ಎಚ್ಎಎಲ್ನಲ್ಲಿ ಸಿದ್ಧವಾಗಿದ್ದ ವಿಶೇಷ ವಿಮಾನದ ಮೂಲಕ ಮುಂಬೈಗೆ ಹಾರಿದ್ದಾರೆ ಎನ್ನಲಾಗಿದೆ. ಬಿಜೆಪಿಯ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಈ ಸಂದರ್ಭದಲ್ಲಿ ಹಾಜರಿದ್ದು, ಎಂ.ಟಿ.ಬಿ.ನಾಗರಾಜ್ ಅವರನ್ನು ವಿಮಾನ ಹತ್ತಿಸಿದ್ದಾರೆ.
ಇನ್ನು ಈವರೆಗೂ ಮುಂಬೈ ತಲುಪದೆ ಹೊರಗಡೆಯೇ ತಿರುಗಾಡಿಕೊಂಡಿದ್ದ ಆನಂದ್ಸಿಂಗ್ ಕೂಡ ಮುಂಬೈ ಸೇರಲಿದ್ದಾರೆ ಎನ್ನಲಾಗುತ್ತಿದೆ.
ರಾಮಲಿಂಗಾರೆಡ್ಡಿ, ರೋಷನ್ಬೇಗ್ ಅವರುಗಳು ಮಾತ್ರ ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದಾರೆ.
ಇವರ ಜೊತೆಗೆ ಕಾಂಗ್ರೆಸ್ನಲ್ಲಿ ಅತೃಪ್ತರ ಪಟ್ಟಿ ಇನ್ನಷ್ಟು ಹೆಚ್ಚಿದ್ದು, ಶಾಸಕಿಯರಾದ ಅಂಜಲಿ ನಿಂಬಾಳ್ಕರ್, ಸೌಮ್ಯರೆಡ್ಡಿ, ಲಕ್ಷ್ಮಿಹೆಬ್ಬಾಳ್ಕರ್ ಸೇರಿದಂತೆ ಬಹಳಷ್ಟು ಮಂದಿ ಬಿಜೆಪಿ ಸೇರುವ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
ಸಮ್ಮಿಶ್ರ ಸರ್ಕಾರ ವಿಶ್ವಾಸಮತಯಾಚನೆಯಲ್ಲಿ ಸೋಲಲಿದೆ ಎಂಬುದು ಖಚಿತವಾದರೆ ಇನ್ನಷ್ಟು ಮಂದಿ ಶಾಸಕರು ಕಾಂಗ್ರೆಸ್ಗೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ದೋಸ್ತಿ ಪಕ್ಷಗಳ ನಾಯಕರು ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸದಲ್ಲಿ ನಿನ್ನೆ ಇಡೀ ದಿನ ಬಿರುಸಿನ ಕಾರ್ಯಾಚರಣೆ ನಡೆಸಿದರು. ಆದರೆ ಯಾವುದೂ ಫಲ ನೀಡಲಿಲ್ಲ.
ಸಮ್ಮಿಶ್ರ ಸರ್ಕಾರದ ದೋಸ್ತಿ ಪಕ್ಷಗಳಾಗಿರುವ ಕಾಂಗ್ರೆಸ್-ಜೆಡಿಎಸ್ನ ಸಂಖ್ಯಾಬಲ 118 ರಿಂದ 100ಕ್ಕೆ ಕುಸಿದಿದೆ. ಪ್ರತಿಪಕ್ಷವಾಗಿರುವ ಬಿಜೆಪಿ ತನ್ನ 105 ಮತ್ತು ಪಕ್ಷೇತರ ಇಬ್ಬರು ಶಾಸಕರನ್ನು ಒಳಗೊಂಡು 107 ಸಂಖ್ಯಾಬಲವನ್ನು ಹೊಂದಿದೆ. ಮುಂಬೈನಲ್ಲಿರುವ 18 ಮಂದಿ ಶಾಸಕರ ಪೈಕಿ ಯಾರೂ ಮನಸ್ಸು ಬದಲಿಸದಿದ್ದರೆ ಸಮ್ಮಿಶ್ರ ಸರ್ಕಾರ ವಿಶ್ವಾಸ ಮತಯಾಚನೆಯಲ್ಲಿ ಸೋಲುವುದು ಖಚಿತ ಎಂಬ ಲೆಕ್ಕಾಚಾರಗಳು ನಡೆದಿವೆ.
ಮುಂಬೈನಲ್ಲಿ ಬೀಡುಬಿಟ್ಟಿರುವ 12 ಮಂದಿ ಶಾಸಕರು ನಿನ್ನೆ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಪ್ರಮಾಣ ಮಾಡಿದ್ದು, ನಾವು ನಮ್ಮ ನಿಲುವಿನಿಂದ ಹಿಂದೆ ಸರಿಯುವುದಿಲ್ಲ ಎಂದು ಖಚಿತಪಡಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ನಾಯಕರ ಸಂಧಾನ ಪ್ರಕ್ರಿಯೆ ಪ್ರತಿ ಹಂತದಲ್ಲೂ ವಿಫಲವಾಗುತ್ತಿದೆ. ಆದರೂ ಸಮ್ಮಿಶ್ರ ಸರ್ಕಾರ ಉಳಿಯಲಿದೆ ಎಂದು ದೋಸ್ತಿ ನಾಯಕರು ಹೇಳುತ್ತಿರುವುದು ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.