ಬೆಂಗಳೂರು, ಜು.14-ಕಾಂಗ್ರೆಸ್-ಜೆಡಿಎಸ್ನ ಘಟನಾಘಟಿ ನಾಯಕರು ದಮ್ಮಯ್ಯ ಎಂದು ಅಂಗಲಾಚಿದರೂ ಅತೃಪ್ತ ಶಾಸಕರು ಮನಸ್ಸು ಬದಲಿಸದೆ ಮುನಿಸಿಕೊಂಡು ಹೋಗುತ್ತಿರುವುದರ ಹಿಂದೆ ಅದ್ಯಾವ ಶಕ್ತಿ ಕೆಲಸ ಮಾಡುತ್ತಿದೆ ಎಂಬ ಅಚ್ಚರಿ ಕಾಡಲಾರಂಭಿಸಿದೆ.
ಈಗ ರಾಜೀನಾಮೆ ನೀಡಿ ಬಂಡಾಯದ ಬಾವುಟ ಹಿಡಿದಿರುವವರ ಪೈಕಿ ರಾಮಲಿಂಗಾರೆಡ್ಡಿ, ರೋಷನ್ಬೇಗ್, ರಮೇಶ್ ಜಾರಕಿ ಹೊಳಿ,ವಿಶ್ವನಾಥ್ ಹೊರತುಪಡಿಸಿ ಉಳಿದ ಎಲ್ಲರೂ ಎರಡನೇ ಹಂತದ ನಾಯಕರು. ಕಳೆದ ಬಾರಿ ವಿಧಾನಸಭೆ ಚುನಾವಣೆ ವೇಳೆ ಟಿಕೆಟ್ಗಾಗಿ ಹಿರಿಯ ನಾಯಕರ ಮುಂದೆ ಕೈ ಕಟ್ಟಿನಿಂತಿದ್ದವರು. ಇಂದು ಅದೇ ಶಾಸಕರು ಹಿರಿಯ ನಾಯಕರ ಮಾತುಗಳಿಗೆ ಕಿವಿಗೊಡದೆ ಸೆಡ್ಡುಹೊಡೆಯುತ್ತಿರುವುದು ಎಲ್ಲರ ಹುಬ್ಬೇರಿಸಿದೆ.
ಕಾಂಗ್ರೆಸ್ ಮಟ್ಟಿಗೆ ಸದ್ಯದ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಪ್ರಶ್ನಾತೀತ ನಾಯಕರು.ಡಿ.ಕೆ.ಶಿವಕುಮಾರ್, ಪರಮೇಶ್ವರ್ ಮತ್ತಿತರರು ಸರ್ಕಾರದ ಪರವಾಗಿ ನಿಂತು ಸಂಧಾನ ನಡೆಸುತ್ತಿದ್ದಾರೆ.ಕಾಂಗ್ರೆಸ್ನ ಅತ್ಯಂತ ಹಿರಿಯ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ ಅವರೂ ಕೂಡ ಅಖಾಡಕ್ಕಿಳಿದಿದ್ದಾರೆ. ಇದು ಸಾಲದೂ ಎಂಬಂತೆ ದೆಹಲಿಯ ಹೈಕಮಾಂಡ್ ತಂಡದಲ್ಲಿರುವ ಗುಲಾಮ್ನಬಿ ಆಜಾದ್, ಕೆ.ಸಿ.ವೇಣುಗೋಪಾಲ್ ಅವರು ಬಂದು ಬೆಂಗಳೂರಿನಲ್ಲಿ ಸಂಧಾನ ಪ್ರಕ್ರಿಯೆ ನಡೆಸಿದ್ದಾರೆ.ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡ ಸರ್ಕಾರ ಉಳಿಸಿಕೊಳ್ಳಲು ಅತೃಪ್ತರ ಜೊತೆ ಹಲವಾರು ಬಾರಿ ಮಾತುಕತೆ ನಡೆಸಿದ್ದಾರೆ.ಆದರೆ ಇದ್ಯಾವುದಕ್ಕೂ ಬಂಡಾಯಗಾರರು ಜಗ್ಗಿಲ್ಲ.
ಏಕಾಏಕಿ ಈ ಎಲ್ಲಾ ಶಾಸಕರಿಗೆ ಈ ಮಟ್ಟಿನ ಧೈರ್ಯ, ಆತ್ಮವಿಶ್ವಾಸ ಬಂದಿದ್ದದಾದರೂ ಎಲ್ಲಿಂದ ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ಮೈತ್ರಿ ಸರ್ಕಾರ ಲೋಕಸಭೆ ಚುನಾವಣೆ ನಂತರ ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು ಧರ್ಮಸ್ಥಳದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಕಾಂಗ್ರೆಸ್ನ ಬಹಳಷ್ಟು ಶಾಸಕರು ಸಿದ್ದರಾಮಯ್ಯನವರೇ ಈಗಲೂ ನಮ್ಮ ಮುಖ್ಯಮಂತ್ರಿ ಎಂದು ಬಹಿರಂಗ ಹೇಳಿಕೆ ನೀಡುತ್ತಿದ್ದರು. ಅಲ್ಲಲ್ಲಿ ಕೆಲವು ನಾಯಕರು ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡುತ್ತಿದ್ದರು. ಮೊಟ್ಟ ಮೊದಲ ಬಾರಿಗೆ ಬೆಳಗಾವಿಯ ಗ್ರಾಮೀಣಾಭಿವೃದ್ಧಿ ಬ್ಯಾಂಕ್ನ ಚುನಾವಣೆ ರಾಜಕಾರಣ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಿಡಿ ಹೊತ್ತಿಸಿತ್ತು.
ಆಗಿನ ಸಚಿವ ರಮೇಶ್ ಜಾರಕಿ ಹೊಳಿ, ಡಿ.ಕೆ.ಶಿವಕುಮಾರ್ ಅವರ ನಡುವಿನ ವೈಯಕ್ತಿಕ ಸಂಘರ್ಷ ರಾಜಕೀಯಕ್ಕೆ ತಳಕು ಹಾಕಿಕೊಂಡಿತ್ತು. ಮಾಜಿ ಸಚಿವ ಸತೀಶ್ ಜಾರಕಿ ಹೊಳಿ, ಶಾಸಕಿ ಲಕ್ಷ್ಮಿಹೆಬ್ಬಾಳ್ಕರ್ ವಿರುದ್ಧ ಬ್ಯಾಂಕ್ನ ಚುನಾವಣೆಯಲ್ಲಿ ಕಿಡಿಕಾರಿದಾಗ ರಮೇಶ್ ಜಾರಕಿಹೊಳಿ ಮಧ್ಯಪ್ರವೇಶಿಸಿದ್ದರು. ಅಲ್ಲಿಂದ ರಾಜಕಾರಣ ದಿನೇ ದಿನೇ ಸಂಘರ್ಷದಲ್ಲೇ ಮುಂದುವರೆದಿತ್ತು.
ಒಂದು ಹಂತದಲ್ಲಿ ಕಾಂಗ್ರೆಸ್ ನಾಯಕರು ರಮೇಶ್ ಜಾರಕಿ ಹೊಳಿ ಅವರನ್ನು ಮೂಲೆಗುಂಪು ಮಾಡಿದರು. ಈ ಸೇಡಿಗಾಗಿ ಸರ್ಕಾರವನ್ನು ಪತನಗೊಳಿಸಲು ರಮೇಶ್ ಜಾರಕಿ ಹೊಳಿ ಪಣತೊಟ್ಟು ನಿರಂತರ ಪ್ರಯತ್ನ ನಡೆಸಿದರು.
ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಎಚ್.ವಿಶ್ವನಾಥ್ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಸಿಟ್ಟಿತ್ತು. ಜೊತೆಗೆ ಜೆಡಿಎಸ್ನಲ್ಲಿ ತಮ್ಮನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಅಸಹಾಯಕತೆಯೂ ಇತ್ತು. ಹಾಗಾಗಿ ಅವರು ಅತೃಪ್ತ ಬಣದ ನೇತೃತ್ವ ವಹಿಸಿದ್ದರು.
ಆನಂದ್ಸಿಂಗ್, ರಾಮಲಿಂಗಾರೆಡ್ಡಿ, ರೋಷನ್ಬೇಗ್ ಅವರ ಬೇಡಿಕೆಗಳು ಮತ್ತು ನಿಲುವುಗಳು ಪ್ರತ್ಯೇಕವಾಗಿವೆ. ಉಳಿದಂತೆ ಮಹೇಶ್ ಕುಮಟಳ್ಳಿ, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್, ಪ್ರತಾಪ್ಗೌಡ ಪಾಟೀಲ್ ಅವರ ರಾಜಕೀಯವೇ ಅರ್ಥವಾಗುತ್ತಿಲ್ಲ.
ಸಿದ್ದರಾಮಯ್ಯ ಅವರ ಕಟ್ಟಾ ಅನುಯಾಯಿಗಳಾಗಿದ್ದ ಸೋಮಶೇಖರ್, ಭೆರತಿ ಬಸವರಾಜ್, ಮುನಿರತ್ನ, ಎಂ.ಟಿ.ಬಿ.ನಾಗರಾಜ್, ಸುಧಾಕರ್ ಅವರುಗಳು ಅತೃಪ್ತ ಗುಂಪಿನಲ್ಲಿದ್ದು, ಯಾರ ಮಾತಿಗೂ ಮನ್ನಣೆ ನೀಡದಿರುವುದು ಆಶ್ಚರ್ಯ ತರಿಸಿದೆ.
ಎರಡನೇ ಬಾರಿ ರಾಜೀನಾಮೆ ನೀಡುವ ಸಂದರ್ಭದಲ್ಲಿ ಭೆರತಿ ಬಸವರಾಜ್ ಅವರು ಸ್ಪೀಕರ್ ಕಚೇರಿಗೆ ಓಡಿ ಬಂದದ್ದು, ನಿನ್ನೆ ಇಡೀ ದಿನ ನಡೆದ ಸಂಧಾನ ಸಭೆಯ ನಂತರವೂ ಎಂ.ಟಿ.ಬಿ.ನಾಗರಾಜ್ ಕಾಂಗ್ರೆಸ್ ನಾಯಕರ ಮಾತಿಗೆ ಸೊಪ್ಪು ಹಾಕದೆ ಮುಂಬೈಗೆ ಹಾರಿರುವುದು ನೋಡಿದರೆ ಈ ರಾಜಕೀಯ ವಿಪ್ಲವದ ಹಿಂದೆ ಬಿಜೆಪಿ ನಾಯಕರಿದ್ದಾರೋ ಅಥವಾ ಕಾಂಗ್ರೆಸ್ಸಿಗರೇ ಮಾರ್ಗದರ್ಶನ ಮಾಡುತ್ತಿದ್ದಾರೋ ಎಂಬ ಗೊಂದಲಗಳು ನಿರ್ಮಾಣವಾಗಿದೆ.
ಅತೃಪ್ತರ್ಯಾರೂ ತಾವೇಕೆ ರಾಜೀನಾಮೆ ನೀಡಿದರು, ತಮ್ಮ ನಿಜವಾದ ಬೇಡಿಕೆಗಳೇನು ಎಂಬುದನ್ನು ಬಹಿರಂಗಪಡಿಸಿಲ್ಲ. ಔಪಚಾರಿಕವಾಗಿ ಕೆಲವರು ತಮ್ಮ ಕ್ಷೇತ್ರದ ಅಭಿವೃದ್ಧಿಯಾಗುತ್ತಿಲ್ಲ ಎಂದರೆ, ಇನ್ನು ಕೆಲವರು ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಅಸಮಾಧಾನ ಹೊರಹಾಕಿದ್ದಾರೆ.
ಸಚಿವ ಸ್ಥಾನ ಇದ್ದರೂ ಎಂ.ಟಿ.ಬಿ.ನಾಗರಾಜ್, ಪಕ್ಷೇತರರಾದ ಶಂಕರ್, ನಾಗೇಶ್ ಅವರು ರಾಜೀನಾಮೆ ನೀಡಿದ್ದೇಕೆ ಎಂಬ ಪ್ರಶ್ನೆಗೆ ಉತ್ತರವಿಲ್ಲ.
ಅತೃಪ್ತರ ಜೊತೆ ಬಿಜೆಪಿ ಉನ್ನತ ನಾಯಕರು ನೇರ ಸಂಪರ್ಕದಲ್ಲಿದ್ದಾರೆ. ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಭಾರೀ ಭರವಸೆಗಳನ್ನು ತುಂಬಿದ್ದಾರೆ. ಹೀಗಾಗಿ ಅತೃಪ್ತರು ಆತ್ಮವಿಶ್ವಾಸದಿಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಬಿಜೆಪಿ ತನ್ನ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ಸರ್ಕಾರ ರಚನೆ ಮಾಡಿದರೂ ಅಲ್ಲಿನ ರಾಜಕೀಯ ಪರಿಸ್ಥಿತಿ ಸಮ್ಮಿಶ್ರ ಸರ್ಕಾರಕ್ಕಿಂತಲೂ ಕೆಟ್ಟದಾಗಿರಲಿದೆ ಎಂಬ ಮುನ್ಸೂಚನೆಯಂತೂ ಇದೆ. ಆದರೂ ಅತೃಪ್ತರು ತಲೆ ಕೆಡಿಸಿಕೊಳ್ಳುತ್ತಿಲ್ಲ.
ಅಲ್ಲೊಮ್ಮೆ, ಇಲ್ಲೊಮ್ಮೆ ಗುಸುಗುಸುಗಳು ಕೇಳಿ ಬರುತ್ತಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದಾದರೆ ಅತೃಪ್ತರು ತಕ್ಷಣವೇ ಬೆಂಗಳೂರಿಗೆ ವಾಪಸ್ಸಾಗುತ್ತಾರೆ ಎಂಬ ಮಾತುಗಳಿವೆ. ಆದರೆ ಇದ್ಯಾವುದಕ್ಕೂ ತಲೆ ಬುಡ ಇಲ್ಲ.
ಸಚಿವ ಸ್ಥಾನ ಕೊಡುತ್ತೇವೆ, ವೈಯಕ್ತಿಕವಾದ ಎಲ್ಲಾ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿದರೂ ಅತೃಪ್ತರು ನಿಲುವು ಬದಲಿಸುತ್ತಿಲ್ಲ. ರಣಚಂಡಿ ಹಠ ಹಿಡಿದು ಸರ್ಕಾರವನ್ನು ಕೆಡವಲು ಟೊಂಕ ಕಟ್ಟಿ ನಿಂತಿರುವುದು ನೋಡಿದರೆ ಅಷ್ಟು ಸಿಟ್ಟಿಗೆ ಕಾರಣಗಳೇನು ಎಂಬುದು ನಿಗೂಢವಾಗಿದೆ.
ರಾಜೀನಾಮೆ ನೀಡಿರುವವರು
ಕಾಂಗ್ರೆಸ್ ಶಾಸಕರು
1. ಆನಂದ್ಸಿಂಗ್
2. ರಮೇಶ್ ಜಾರಕಿ ಹೊಳಿ
3. ಮಹೇಶ್ ಕುಮಟಳ್ಳಿ
4. ಪ್ರತಾಪ್ಗೌಡ ಪಾಟೀಲ್
5. ಬಿ.ಸಿ.ಪಾಟೀಲ್
6. ಶಿವರಾಮ್ ಹೆಬ್ಬಾರ್
7. ಎಸ್.ಟಿ.ಸೋಮಶೇಖರ್
8.ಭೆರತಿ ಬಸವರಾಜ್
9. ಮುನಿರತ್ನ
10. ರಾಮಲಿಂಗಾರೆಡ್ಡಿ
11.ರೋಷನ್ಬೇಗ್
12. ಸುಧಾಕರ್
13. ಎಂ.ಟಿ.ಬಿ.ನಾಗರಾಜ್
ಜೆಡಿಎಸ್ ಶಾಸಕರು
14. ವಿಶ್ವನಾಥ್
15. ನಾರಾಯಣಗೌಡ
16. ಗೋಪಾಲಯ್ಯ