ಬೆಂಗಳೂರು, ಜು.14-ಕಳೆದ ಒಂದು ವಾರದಿಂದಲೂ ನಿರಂತರ ರಾಜಕೀಯ ಚಟುವಟಿಕೆಗಳಲ್ಲಿ ಮುಳುಗಿ ಹೋಗಿದ್ದ ಕಾಂಗ್ರೆಸ್ ನಾಯಕರು ಇಂದು ವಿಶ್ರಾಂತಿ ಮೂಡ್ನಲ್ಲಿದ್ದರು.
ಹಲವು ಸುತ್ತಿನ ಪ್ರಯತ್ನಗಳು ಫಲ ನೀಡದೆ ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ ನಾಯಕರಲ್ಲಿ ಒಂದು ರೀತಿಯ ಸಿನಿಕತೆ ಆವರಿಸಿದೆ ಎಂದು ಹೇಳಲಾಗಿದೆ. ಹಾಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರು ತಂಗಿರುವ ತಾಜ್ ವಿವಂತಾ ಹೊಟೇಲ್ಗೆ ತೆರಳಿ ಟಿ.ವಿ.ನೋಡುತ್ತಾ ಕಾಲ ಕಳೆದರು.
ಸಚಿವರಾದ ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ತಮ್ಮ ಮನೆಯಲ್ಲಿ ಉಳಿದುಕೊಂಡಿದ್ದು, ಯಾರನ್ನೂ ಭೇಟಿಯಾಗದೆ ತಮ್ಮ ಪಾಡಿಗೆ ತಾವಿದ್ದರು.
ಸಚಿವರಾಗಿದ್ದ ಎಂ.ಟಿ.ಬಿ. ನಾಗರಾಜ್ ಅವರ ಮನವೊಲಿಕೆ ಪ್ರಯತ್ನ ವಿಫಲವಾದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಕೈ ಚೆಲ್ಲಿದರು ಎಂದು ಹೇಳಲಾಗಿದೆ.