ಬೆಂಗಳೂರು, ಜು.14– ವಿಧಾನಸಭೆ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಚಿವ ಎಂ.ಟಿ.ಬಿ.ನಾಗರಾಜ್ ಹಾಗೂ ಶಾಸಕ ಸುಧಾಕರ್ ಅವರು ಇಂದು ಸಂಧಾನ ಪ್ರಕ್ರಿಯೆಗಳನ್ನು ಧಿಕ್ಕರಿಸಿ ಮುಂಬೈ ಸೇರುತ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ತಳಮಳ ಆರಂಭಗೊಂಡಿದ್ದು, ಮುಂದಿನ ಕಾರ್ಯತಂತ್ರದ ಬಗ್ಗೆ ಗಂಭೀರ ಸಮಾಲೋಚನೆ ನಡೆಸಲಾಗಿದೆ.
ಎಂ.ಟಿ.ಬಿ.ನಾಗರಾಜ್ ಅವರು ನಿನ್ನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಡಿ.ಕೆ.ಶಿವಕುಮಾರ್, ಕೃಷ್ಣಭೆರೇಗೌಡ ಅವರು ನಡೆಸಿದ ಸಂಧಾನ ಪ್ರಕ್ರಿಯೆಗೆ ಆರಂಭದಲ್ಲಿ ಸಹಮತ ವ್ಯಕ್ತಪಡಿಸಿದ್ದರು.
ಆದರೆ, ಇದ್ದಕ್ಕಿದ್ದಂತೆ ಉಲ್ಟಾ ಹೊಡೆದ ಅವರು ಇಂದು ಬೆಳಗ್ಗೆ ಹೇಳದೆ ಕೇಳದೆ ಮುಂಬೈಗೆ ಹಾರಿದ್ದಾರೆ.ದೆಹಲಿಯಲ್ಲಿದ್ದ ಶಾಸಕ ಸುಧಾಕರ್ ಇಂದು ಮುಂಬೈ ಸೇರಿಕೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರು ಗೊಂದಲಕ್ಕೆ ಸಿಲುಕಿದ್ದು, ಈವರೆಗೂ ಇದ್ದ ಎಲ್ಲ ವಿಶ್ವಾಸವನ್ನೂ ಕಳೆದುಕೊಂಡಿದ್ದಾರೆ.
ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲೇಬೇಕೆಂಬ ಹೈಕಮಾಂಡ್ ಸೂಚನೆ ಮೇರೆಗೆ ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿ ಸಭೆ ಮೇಲೆ ಸಭೆ ನಡೆಸಿದ ಕಾಂಗ್ರೆಸಿಗರ ಪ್ರಯತ್ನ ನೀರಿನಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ.
ಇಬ್ಬರೂ ಅತೃಪ್ತ ಶಾಸಕರು ಮುಂಬೈ ಸೇರಿದ್ದಾರೆ ಎಂಬುದು ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ ಶಾಸಕರು ತಂಗಿರುವ ಖಾಸಗಿ ಹೊಟೇಲ್ಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದರು.
ಅತ್ತ ಇನ್ನೊಬ್ಬ ಶಾಸಕ ರಾಮಲಿಂಗಾರೆಡ್ಡಿ ಅವರ ಜತೆ ಎಚ್.ಕೆ.ಪಾಟೀಲ್ ಹಾಗೂ ಮತ್ತಿತರರು ಸಮಾಲೋಚನೆ ನಡೆಸಿದರು. ಆದರೂ ಸಮ್ಮಿಶ್ರ ಸರ್ಕಾರದ ರಕ್ಷಣೆಗೆ ಅಗತ್ಯವಿರುವ ಸಂಖ್ಯಾಬಲ ಕೂಡಿಸಲು ಕಾಂಗ್ರೆಸ್ ನಾಯಕರಿಂದ ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.