ಬೆಂಗಳೂರು, ಜು.14– ದಿನೇ ದಿನೇ ಬದಲಾಗುತ್ತಿರುವ ರಾಜಕೀಯ ಸನ್ನಿವೇಶಗಳಲ್ಲಿ ಈಗ ಇನ್ನಷ್ಟು ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ರಾಜೀನಾಮೆ ನೀಡಿರುವ ಕಾಂಗ್ರೆಸ್ ಶಾಸಕರ ಮನವೊಲಿಕೆ ಪ್ರಯತ್ನಗಳು ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ ಅತೃಪ್ತರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಗಳು ಕಂಡುಬರುತ್ತಿವೆ. ಇದರಿಂದ ರಾಜೀನಾಮೆ ನೀಡಿರುವ ಶಾಸಕರ ಆತಂಕ ದೂರ ಸರಿದಂತಾಗಿದ್ದು, ದೋಸ್ತಿಗಳ ಟೆನ್ಷನ್ ಹೆಚ್ಚತೊಡಗಿದೆ.
ನಾಳೆಯೊಳಗೆ ಸುಮಾರು ಆರು ಮಂದಿ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಕೆಲ ಶಾಸಕರ ಕೂಡ ನಾಟ್ ರೀಚಬಲ್ ಆಗಿದ್ದಾರೆ.
ದೋಸ್ತಿ ಪಾಳಯ ಎಷ್ಟೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೂ ಶಾಸಕರ ವಿಶ್ವಾಸ ಗಳಿಸಲು ಪ್ರಯಾಸ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಎಷ್ಟೇ ಪ್ರಯತ್ನಪಟ್ಟರೂ ನಿರೀಕ್ಷಿತ ಫಲ ದೊರೆಯುತ್ತಿಲ್ಲ. ಒಂದೊಮ್ಮೆ ಮತ್ತಷ್ಟು ಶಾಸಕರು ರಾಜೀನಾಮೆ ನೀಡಲು ಮುಂದಾದರೆ ಅನಿವಾರ್ಯವಾಗಿ ಮೈತ್ರಿ ಸರ್ಕಾರ ಇಕ್ಕಟ್ಟಿಗೆ ಸಿಲುಕುವುದು ನಿಶ್ಚಿತವಾಗಿದೆ.
ಮಂಗಳವಾರ ಸುಪ್ರೀಂಕೋರ್ಟ್ನಲ್ಲಿ ಬರುವ ತೀರ್ಪನ್ನು ಕೆಲವರು ಎದುರು ನೋಡುತ್ತಿದ್ದರೆ, ಇನ್ನೂ ಕೆಲವರು ಯಾವುದಕ್ಕೂ ಅಂಜದೆ ತಮ್ಮ ಸ್ವಾಭಿಮಾನ ಪಣಕ್ಕಿಟ್ಟು ರಾಜೀನಾಮೆ ನೀಡಲು ಮುಂದಾಗುತ್ತಿದ್ದಾರೆ.