ಬೆಂಗಳೂರು,ಜು.13-ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ನಾಯಕರು ಅಖಾಡಕ್ಕಿಳಿದಿದ್ದು ಅತೃಪ್ತರ ಮನವೊಲಿಕೆ ಕಾರ್ಯದಲ್ಲಿ ನಿರತರಾಗಿದ್ದಾರೆ.
ಇಂದು ಬೆಳಗ್ಗೆ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಅವರೊಂದಿಗೆ ನಡೆಸಿದ ಮಾತುಕತೆ ಬಹುತೇಕ ಫಲಪ್ರದವಾದಂತಿದೆ. ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರ ವಿರುದ್ಧ ಸೆಡ್ಡು ಹೊಡೆದಿದ್ದ ಎಂಟಿಬಿ ನಾಗರಾಜ್ ಯೂಟರ್ನ್ ಹೊಡೆದಿದ್ದಾರೆ.
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇಂದು ಬೆಳ್ಳಂಬೆಳಗ್ಗೆ ಎಂಟಿಬಿ ನಾಗರಾಜ್ ಅವರ ಮನೆಗೆ ತೆರಳಿ ಮನವೊಲಿಸುವ ಪ್ರಯತ್ನ ನಡೆಸಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ಅವರೊಂದಿಗೆ ಚರ್ಚೆ ನಡೆಸಿ ನಿಮ್ಮ ನಿಲುವು ಬದಲಿಸಿ ಸದನಕ್ಕೆ ಹಾಜರಾಗಿ ಯಾವುದೇ ಸಮಸ್ಯೆಗಳಿದ್ದರೂ ಬಗೆಹರಿಸುವ ಜವಾಬ್ದಾರಿ ನಮ್ಮದು. ಯಾರ ಮಾತನ್ನು ಕೇಳದೆ ರಾಜೀನಾಮೆಯನ್ನು ಹಿಂಪಡೆಯಿರಿ ಎಂದು ಹೇಳಿದ್ದಾರೆ.
ನಂತರ ಅವರ ನಿವಾಸಕ್ಕೆ ಉಪಮುಖ್ಯಮಂತ್ರಿ ಪರಮೇಶ್ವರ್ ಮತ್ತು ಕೃಷ್ಣಭೆರೇಗೌಡ ಭೇಟಿ ನೀಡಿ ರಾಜೀನಾಮೆ ವಾಪಸ್ ಪಡೆಯುವಂತೆ ಮನವೊಲಿಸಲು ಯತ್ನಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜ್, ನಾನು ಬೇಸೆತ್ತು ರಾಜೀನಾಮೆ ನೀಡಿದ್ದೆ. ಇಂದು ಡಾ.ಜಿ.ಪರಮೇಶ್ವರ್,ದಿನೇಶ್ ಗುಂಡೂರಾವ್, ಡಿ.ಕೆ.ಶಿವಕುಮಾರ್ ಮಾತುಕತೆ ನಡೆಸಿದರು. ಅಲ್ಲದೆ ಸಿದ್ದರಾಮಯ್ಯನವರು ಕೂಡ ದೂರವಾಣಿಯಲ್ಲಿ ಮಾತನಾಡಿ ರಾಜೀನಾಮೆ ಹಿಂಪಡೆಯುವಂತೆ ಮನವಿ ಮಾಡಿದರು.ನಾನು ಕಾಲಾವಕಾಶ ಕೇಳಿದ್ದೇನೆ ಎಂದರು.
ನಾನು ಹಾಗೂ ಸುಧಾಕರ್ ಅವರು ಒಂದೇ ಬಾರಿ ರಾಜೀನಾಮೆ ನೀಡಿದ್ದೆವು. ಅವರೊಂದಿಗೆ ಚರ್ಚಿಸುವುದಾಗಿ ಎಂಟಿಬಿ ಹೇಳಿದರು.
ನಂತರ ಮಾತನಾಡಿದ ಡಿ.ಕೆ.ಶಿವಕುಮಾರ್, ಎಂಟಿಬಿ ನಾಗರಾಜ್ 40 ವರ್ಷಗಳಿಂದ ಕಾಂಗ್ರೆಸ್ನಲ್ಲಿದ್ದಾರೆ.ಅವರು ಗೆದ್ದಾಗಲೆಲ್ಲ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ.ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. ನಮ್ಮ ಮೈತ್ರಿ ಸರ್ಕಾರಕ್ಕೆ ಧಕ್ಕೆಯಾಗುವುದಿಲ್ಲ ಎಂದು ಹೇಳಿದರು.
ವಿವಿಧ ಕಾರಣಗಳಿಗೆ ಎಂಟಿಬಿ ನಾಗರಾಜ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನಂತರ ಅವರು ಬಿಜೆಪಿ ಪಾಳೆಯ ಸೇರುತ್ತಾರೆ. ಮುಂಬೈಗೆ ತೆರಳಿ ಈಗಾಗಲೇ ಅಲ್ಲಿ ಠಿಕಾಣಿ ಹೂಡಿರುವ ಅತೃಪ್ತ ಬಣ ಸೇರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಎಂಟಿಬಿ ನಾಗರಾಜ್ ಅವರು ಎಲ್ಲಿಗೂ ಹೋಗದೆ ಬೆಂಗಳೂರಿನಲ್ಲೇ ಉಳಿದಿದ್ದು, ತಾವು ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೂಲಗಳ ಪ್ರಕಾರ ನಾಗರಾಜ್ ಅವರು ಕಾಂಗ್ರೆಸ್ನಲ್ಲೇ ಉಳಿಯುವುದಾಗಿ ವಿಶ್ವಾಸ ಮತಯಾಚನೆ ವೇಳೆ ಸಮ್ಮಿಶ್ರ ಸರ್ಕಾರವನ್ನು ಬೆಂಬಲಿಸುವ ಭರವಸೆ ನೀಡಿದ್ದು, ತಮ್ಮ ಅಸಮಾಧಾನಕ್ಕಿರುವ ಕಾರಣಗಳನ್ನು ಸಂಧಾನಕಾರರ ಬಳಿ ಸಮಗ್ರವಾಗಿ ವರದಿ ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ರಾಜೀನಾಮೆ ನೀಡಿದ್ದು, ಅವರ ಮನವೊಲಿಕೆಗೆ ಪ್ರಯತ್ನ ನಡೆದಿವೆ. ಒಂದೆಡೆ ಮುಖ್ಯಮಂತ್ರಿಯವರು ಕಾಂಗ್ರೆಸ್ ಶಾಸಕರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಮನವೊಲಿಸುವ ಯತ್ನದಲ್ಲಿದ್ದಾರೆ. ಕಾಂಗ್ರೆಸ್ ನಾಯಕರು ಕೂಡ ಅಖಾಡಕ್ಕಿಳಿದು ಅತೃಪ್ತರ ಜೊತೆ ಮಾತುಕತೆ ನಡೆಸುತ್ತಿದ್ದಾರೆ.
ಮತ್ತೊಂದೆಡೆ ರಾಮಲಿಂಗಾರೆಡ್ಡಿ, ರೋಷನ್ ಬೇಗ್, ಆನಂದ್ ಸಿಂಗ್ ಜೊತೆಯೂ ಮಾತುಕತೆ ನಡೆಸಿದ್ದು, ಮುಂಬೈಗೆ ತೆರಳಿರುವ ಅತೃಪ್ತ ಶಾಸಕರನ್ನು ಸಹ ಮುಖಂಡರು ಸಂಪರ್ಕಿಸುತ್ತಿದ್ದಾರೆ.
ಹೀಗಾಗಿ ಬಿಜೆಪಿ ಪಡೆಯಲ್ಲಿ ಆತಂಕ ಸೃಷ್ಟಿಯಾಗಿದ್ದು ಸಮ್ಮಿಶ್ರ ಸರ್ಕಾರ ಪತನಗೊಳಿಸುವ ಕನಸು ಭಗ್ನವಾಗುವುದೇ ಎಂಬ ಚಿಂತೆ ಬಿಜೆಪಿಗೆ ಕಾಡುತ್ತಿದೆ.