ಸಿಎಂ ಕುಮಾರಸ್ವಾಮಿ ಹಳಿ ತಪ್ಪಿಯಾಗಿದೆ-ಶಾಸಕ ವಿ.ಸೋಮಣ್ಣ

ಬೆಂಗಳೂರು,ಜು.13- ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಕುರಿತಾದ ವಿಚಾರಣೆ ಸುಪ್ರೀಂಕೋರ್ಟ್ ಮುಂದಿದೆ.ತೀರ್ಪಿನ ಬಳಿಕ ಮೈತ್ರಿ ಪಕ್ಷಗಳಲ್ಲಿ ಯಾರು ಯಾರ ಕೊರಳ ಪಟ್ಟಿ ಹಿಡಿದುಕೊಂಡು ಬಡಿದಾಡಿಕೊಳ್ಳುತ್ತಾರೋ ಗೊತ್ತಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ವಿ.ಸೋಮಣ್ಣ ಲೇವಡಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಹಳಿ ತಪ್ಪಿಯಾಗಿದೆ.ಅತೃಪ್ತರ ರಾಜೀನಾಮೆ ಕುರಿತು ಮಂಗಳವಾರ ಸುಪ್ರೀಕೋರ್ಟ್ ತೀರ್ಪು ನೀಡಲಿದೆ.ಈ ತೀರ್ಪು ಬಹುತೇಕ ಅಸಮಾಧಾನಿತರ ಪರ ಇರುವುದು ಖಚಿತ ಎಂದರು.
ಒಂದು ವೇಳೆ ಅಸಮಾಧಾನಿತ ಶಾಸಕರ ಪರವಾಗಿ ನ್ಯಾಯಾಲಯ ತೀರ್ಪು ನೀಡಿದರೆ ಮೈತ್ರಿ ನಾಯಕರು ಪರಸ್ಪರ ಬಡಿದಾಡುವುದು ನಿಶ್ಚಿತ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಬರ ಪರಿಸ್ಥಿತಿ ಬಗ್ಗೆ ಯಡಿಯೂರಪ್ಪ ಒಬ್ಬರೇ ಏಕಾಂಗಿಯಾಗಿ ರಾಜ್ಯ ಪ್ರವಾಸ ಮಾಡಿದ್ದಾರೆ. ಆದರೆ ರಾಜ್ಯದ ಜನರ ಕಷ್ಟ ನಷ್ಟಗಳಿಗೆ ಸ್ಪಂದಿಸಬೇಕಾದ ಸಿಎಂ ಕುಮಾರಸ್ವಾಮಿ ಏನು ಮಾಡಿದರು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಟೀಕಿಸಿದರು.

ಕುಮಾರಸ್ವಾಮಿ ಅವರಿಗೀಗ ಬಹುಮತ ಇಲ್ಲ. ಮತ್ತೊಂದೆಡೆ ಇವರು ಎಷ್ಟೇ ಪ್ರಯತ್ನಪಟ್ಟರೂ ಬಿಜೆಪಿಯ ಯಾವುದೇ ಶಾಸಕರು ಬೇರೆ ಕಡೆ ಮುಖ ಮಾಡಲ್ಲ. ಅಷ್ಟು ಪಕ್ಷ ನಿಷ್ಠರಾಗಿದ್ದಾರೆ ಬಿಜೆಪಿ ಶಾಸಕರು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಅವರ ಕಾರ್ಯಚಟುವಟಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸೋಮಣ್ಣ, ಸ್ಪೀಕರ್ ಅವರ ಬಗ್ಗೆ ನಮಗೆ ತುಂಬಾ ಗೌರವ ಇದೆ. ಆದರೆ, ಅವರು ಯಾಕೆ ಹೀಗೆ ವರ್ತಿಸುತ್ತಿದ್ದಾರೆ ಎಂಬುದು ಗೊತ್ತಿದೆ. ಅವರಿಗೆ ಯಾರು ಕಡಿವಾಣ ಹಾಕಬೇಕೋ ಅವರು ಹಾಕುತ್ತಿದ್ದಾರೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ