ಬೆಂಗಳೂರು, ಜು.13-ರಾಜ್ಯ ರಾಜಕಾರಣದಲ್ಲಿ ಕ್ಷಣಕ್ಷಣಕ್ಕೂ ರೋಚಕ ಬೆಳವಣಿಗೆಗಳು ನಡೆಯುತ್ತಿರುವ ಬೆನ್ನಲ್ಲೇ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಐವರು ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ತಕ್ಷಣವೇ ರಾಜೀನಾಮೆ ಅಂಗೀಕರಿಸಲು ಸ್ಪೀಕರ್ಗೆ ನಿರ್ದೇಶನ ನೀಡುವಂತೆ ಮೇಲ್ಮನವಿ ಸಲ್ಲಿಸಿದ್ದಾರೆ.
ಶಾಸಕರಾದ ಎಂ.ಟಿ.ಬಿ.ನಾಗರಾಜ್, ಮುನಿರತ್ನ, ಆನಂದ್ಸಿಂಗ್, ರೋಷನ್ಬೇಗ್ ಹಾಗೂ ಡಾ.ಕೆ.ಸುಧಾಕರ್ ಇಂದು ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, 10 ಮಂದಿ ಶಾಸಕರ ಅರ್ಜಿ ವಿಚಾರಣೆ ವೇಳೆ ನಮ್ಮ ಮನವಿಯನ್ನು ಪುರಸ್ಕರಿಸಬೇಕೆಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೈ ಅವರಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ನಾವು ಎಲ್ಲ ಶಾಸಕರು ಸ್ವಯಂಪ್ರೇರಿತರಾಗಿ ಯಾರ ಒತ್ತಡಕ್ಕೂ ಮಣಿಯದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇವೆ. ಆದರೆ ವಿಧಾನಸಭೆ ಸ್ಪೀಕರ್ ರಾಜೀನಾಮೆಪತ್ರವನ್ನು ಅಂಗೀಕರಿಸದೆ ವಿಳಂಬಧೋರಣೆ ಅನುಸರಿಸುತ್ತಿದ್ದಾರೆ. ಕೂಡಲೇ ಅವರಿಗೆ ನ್ಯಾಯಾಲಯ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಲಾಗಿದೆ.
ನಾವೆಲ್ಲರೂ ಸಮ್ಮಿಶ್ರ ಸರ್ಕಾರದ ಆಡಳಿತದಿಂದ ಬೇಸತ್ತು ರಾಜೀನಾಮೆ ನೀಡಿದ್ದೇವೆ. ರಾಜೀನಾಮೆ ಪತ್ರ ಸರಿ ಇದ್ದರೂ ಸ್ಪೀಕರ್ ಅಂಗೀಕರಿಸದೆ ತಾಂತ್ರಿಕ ಕಾರಣಗಳನ್ನು ನೀಡುತ್ತಿದ್ದಾರೆ. ನ್ಯಾಯಾಲಯ ಮಧ್ಯಪ್ರವೇಶ ಮಾಡಬೇಕೆಂದು ಐವರು ಶಾಸಕರು ಮೇಲ್ಮನವಿಯಲ್ಲಿ ಕೋರಿದ್ದಾರೆ.
ವಿಧಾನಸಭೆ ಸ್ಪೀಕರ್ ಅವರು ನಮ್ಮ ರಾಜೀನಾಮೆ ಪತ್ರವನ್ನು ಅಂಗೀಕರಿಸುತ್ತಿಲ್ಲ. ಭ್ರಷ್ಟಾಚಾರದ ಆರೋಪಗಳನ್ನು ಹೊತ್ತಿರುವ ಸರ್ಕಾರದಲ್ಲಿ ನಾವು ಮುಂದುವರೆಯುವುದಿಲ್ಲ ಎಂದು ಹೇಳುತ್ತಿದ್ದರೂ ರಾಜೀನಾಮೆ ಪತ್ರವನ್ನು ಏಕೆ ಸ್ವೀಕರಿಸುತ್ತಿಲ್ಲ ಎಂದು ಶಾಸಕರು ಅಫಿಡೆವಿಟ್ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
ಬಹುಮತ ಕಳೆದುಕೊಂಡಿರುವ ಮುಖ್ಯಮಂತ್ರಿಯವರು ಉದ್ದೇಶಪೂರ್ವಕವಾಗಿ ಆಡಳಿತ ಯಂತ್ರ ಕುಸಿಯುವಂತೆ ಮಾಡುತ್ತಿದ್ದಾರೆ. ಶಾಸಕರೇ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡುತ್ತಿರುವಾಗ ಸ್ಪೀಕರ್ ಅಂಗೀಕರಿಸುವುದು ಸಂವಿಧಾನಬದ್ಧ ಕರ್ತವ್ಯ. ವಿಳಂಬ ನೀತಿ ಅನುಸರಿಸುವುದು ಸರಿಯೇ ಎಂಬುದನ್ನು ನ್ಯಾಯಾಲಯ ಪ್ರಶ್ನಿಸಬೇಕೆಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದ್ದಾರೆ.
ಕೇವಲ ನಾವು ಮಾತ್ರವಲ್ಲದೆ, ಈಗಾಗಲೇ ಅನೇಕ ಶಾಸಕರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.ನಮಗೆ ಸರ್ಕಾರದ ಮೇಲೆ ವಿಶ್ವಾಸವಿಲ್ಲ. 10 ಮಂದಿ ಅರ್ಜಿ ವಿಚಾರಣೆ ವೇಳೆ ನಮ್ಮ ಮನವಿಯನ್ನು ಪುರಸ್ಕರಿಸಿ ನ್ಯಾಯಪೀಠ ಸೂಕ್ತ ನಿರ್ದೇಶನ ನೀಡಬೇಕೆಂದು ಐವರು ಶಾಸಕರು ಕೋರಿದ್ದಾರೆ.
ಈಗಾಗಲೇ 10 ಮಂದಿ ಶಾಸಕರು ತಕ್ಷಣವೇ ತಾವು ನೀಡಿರುವ ರಾಜೀನಾಮೆಯನ್ನು ಅಂಗೀಕರಿಸಲು ಸ್ಪೀಕರ್ ಅವರಿಗೆ ನಿರ್ದೇಶನ ನೀಡಬೇಕೆಂದು ಸುಪ್ರೀಂಕೋರ್ಟ್ ಕದ ತಟ್ಟಿದ್ದಾರೆ. ಇದರ ನಡುವೆ ಇಂದು 5 ಶಾಸಕರು ರಾಜೀನಾಮೆ ಅಂಗೀಕರಿಸುವಂತೆ ಮೇಲ್ಮನವಿ ಸಲ್ಲಿಸಿರುವುದರಿಂದ ಸಮ್ಮಿಶ್ರ ಸರ್ಕಾರ ಉಳಿಯಲಿದೆಯೇ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ.
ಶಾಸಕರಾದ ಪ್ರತಾಪ್ಗೌಡ ಪಾಟೀಲ್, ರಮೇಶ್ ಜಾರಕಿ ಹೊಳಿ, ಎಸ್.ಟಿ.ಸೋಮಶೇಖರ್, ಗೋಪಾಲಯ್ಯ, ನಾರಾಯಣಗೌಡ, ಎಚ್.ವಿಶ್ವನಾಥ್, ಬಿ.ಸಿ.ಪಾಟೀಲ್, ಮಹೇಶ್ ಕುಮಟಳ್ಳಿ ಈಗಾಗಲೇ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದು, ತಕ್ಷಣವೇ ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ಅವರಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.
ಇದರ ಜೊತೆಗೆ ಶಾಸಕ ರಾಮಲಿಂಗಾರೆಡ್ಡಿ ಕೂಡ ರಾಜೀನಾಮೆ ನೀಡಿರುವುದು, ಇಬ್ಬರು ಪಕ್ಷೇತರ ಶಾಸಕರಾದ ನಾಗೇಶ್ ಮತ್ತು ಆರ್.ಶಂಕರ್ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆದಿರುವುದರಿಂದ ಸರ್ಕಾರದ ಸಂಖ್ಯಾಬಲ ಕುಸಿದಿದೆ.
ನಿನ್ನೆಯಷ್ಟೆ ಸುಪ್ರೀಂಕೋರ್ಟ್ ಎರಡೂ ಕಡೆಯ ವಾದ-ವಿವಾದ ನಡೆಸಿ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಆದೇಶ ನೀಡಿತ್ತು. ಸ್ಪೀಕರ್ ಅವರು ಶಾಸಕರ ರಾಜೀನಾಮೆ ಅಂಗೀಕರಿಸಬಾರದು ಹಾಗೂ ಅವರ ಸದಸ್ಯತ್ವ ಅನರ್ಹಗೊಳಿಸಬಾರದು ಎಂದು ಸೂಚನೆ ನೀಡಿತ್ತು.
ಪ್ರಸ್ತುತ ವಿಧಾನಸಭೆಯ 224 ಸದಸ್ಯರಲ್ಲಿ ಬಿಜೆಪಿ 105, ಇಬ್ಬರು ಪಕ್ಷೇತರ ಶಾಸಕರು ಬೆಂಬಲ ನೀಡಿರುವುದರಿಂದ 107ಕ್ಕೇರಿದೆ. 16ಮಂದಿ ಶಾಸಕರು ರಾಜೀನಾಮೆ ಕೊಟ್ಟಿರುವ ಕಾರಣ ದೋಸ್ತಿಗಳ ಬಲ 101ಕ್ಕೆ ಕುಸಿದಿದೆ.
ಈ ಬೆಳವಣಿಗೆಗಳ ನಡುವೆಯೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಹುಮತ ಸಾಬೀತುಪಡಿಸಲು ದಿನಾಂಕ ನಿಗದಿಪಡಿಸುವಂತೆ ಸ್ಪೀಕರ್ಗೆ ಮನವಿ ಮಾಡಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.