ಬೆಂಗಳೂರು, ಜು.11- ಮುಂದಿನ ನಡೆಯ ಬಗ್ಗೆ ನಾವಿನ್ನೂ ನಿರ್ಧಾರ ಮಾಡಿಲ್ಲ. ರಾಜೀನಾಮೆ ನೀಡಿರುವುದು ಶಾಸಕ ಸ್ಥಾನಕ್ಕೆ, ಕಾಂಗ್ರೆಸ್ ಸದಸ್ಯತ್ವಕ್ಕಲ್ಲ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಇಂದಿಲ್ಲಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಮಸ್ಯೆಗಳ ಬಗ್ಗೆ ಎಲ್ಲಾ ನಾಯಕರಿಗೂ ಹೇಳಿಕೊಂಡಿದ್ದೆವು.ಮುಖ್ಯಮಂತ್ರಿ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್, ದಿನೇಶ್ಗುಂಡೂರಾವ್ ಅವರೊಂದಿಗೆ ಮಾತುಕತೆ ನಡೆಸಿದ್ದೆವು. ಇಷ್ಟೆಲ್ಲವಾದರೂ ಸಮಸ್ಯೆ ಬಗೆಹರಿಸಲಿಲ್ಲ. ಎಐಸಿಸಿ ಅಧ್ಯಕ್ಷರ ಆದೇಶದಂತೆ 13 ತಿಂಗಳು ಅಧಿಕಾರ ನಡೆಸಿದ್ದೇವೆ. ಅವರು ಹೇಳಿದಂತೆ ನಡೆದಿದ್ದೇವೆ ಎಂದರು.
ಇದರ ನಡುವೆ ಸಾಕಷ್ಟು ಸಮಸ್ಯೆಗಳಾದವು.ಅವುಗಳನ್ನು 10-15 ಬಾರಿ ಸುದ್ದಿಗೋಷ್ಠಿ ನಡೆಸಿ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದೆವು.ಎಲ್ಲಾ ಅಧಿಕಾರಿಗಳೇ ನಡೆಸುವುದೇ ಆದರೆ ನಾವು ಏಕೆ ಎಂದು ಪ್ರಶ್ನಿಸಿದರು.
ಸಮಸ್ಯೆ ಬಗೆಹರಿಸಲು ಯಾರೂ ಕ್ರಮ ಕೈಗೊಳ್ಳಲಿಲ್ಲ ಎಂದು ಸೋಮಶೇಖರ್ ವಿಷಾದಿಸಿದರು.
ನಾವು ಈಗ ಸಧ್ಯಕ್ಕೆ ಯಾವುದೇ ನಾಯಕರನ್ನು ಭೇಟಿ ಮಾಡಲು ಹೋಗಲ್ಲ.ಸ್ಪೀಕರ್ ಅವರನ್ನು ಮಾತ್ರ ಭೇಟಿ ಮಾಡುತ್ತೇವೆ. ಅತೃಪ್ತರೆಲ್ಲ ಸೇರಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.