ಬೆಂಗಳೂರು, ಮಾ.28- ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆ ಹಾಲಿ-ಮಾಜಿ ಪುರಪಿತೃಗಳು ವಿಧಾನಸೌಧದ ಮೆಟ್ಟಿಲೇರುವ ಕನಸು ಕಾಣುತ್ತ ಟಿಕೆಟ್ಗಾಗಿ ತಮ್ಮ ಗಾಡ್ಫಾದರ್ಗಳ ಮೇಲೆ ಪ್ರಭಾವ ಬೀರತೊಡಗಿದ್ದಾರೆ.
ಹಾಲಿ ಮೇಯರ್ ಸಂಪತ್ರಾಜ್, ಮಾಜಿ ಮೇಯರ್ಗಳಾದ ಎಸ್.ಕೆ.ನಟರಾಜ್, ಶಾಂತಕುಮಾರಿ, ಪದ್ಮಾವತಿ, ಮಂಜುನಾಥ ರೆಡ್ಡಿ, ಕಟ್ಟೆ ಸತ್ಯನಾರಾಯಣ, ಡಿ.ವೆಂಕಟೇಶ್ ಮೂರ್ತಿ, ಮಾಜಿ ಉಪಮೇಯರ್ಗಳಾದ ಎಸ್.ಹರೀಶ್, ಎಲ್.ಶ್ರೀನಿವಾಸ್, ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ಬಿಬಿಎಂಪಿ ಸದಸ್ಯರಾದ ಉಮೇಶ್ ಶೆಟ್ಟಿ, ಭೆರಸಂದ್ರ ನಾಗರಾಜ್, ಗೌತಮ್, ಇಮ್ರಾನ್ ಪಾಷ, ಮಾಜಿ ಸದಸ್ಯರಾದ ಎಂ.ನಾಗರಾಜ್, ಎನ್.ಆರ್.ರಮೇಶ್, ಎ.ಎಲ್.ಶಿವಕುಮಾರ್, ಸದಾಶಿವ, ಎಚ್.ರವೀಂದ್ರ, ಎಂ.ಲಕ್ಷ್ಮೀನಾರಾಯಣ್, ಶ್ರೀಧರ್ರೆಡ್ಡಿ, ಪದ್ಮರಾಜ್, ರಾಮಚಂದ್ರ, ಆರ್.ಪ್ರಕಾಶ್, ಟಿ.ಮಲ್ಲೇಶ್ ಮತ್ತಿತರರು ವಿಧಾನಸಭಾ ಚುನಾವಣೆಯಲ್ಲಿ
ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿದ್ದಾರೆ.
ಮೇಯರ್ ಸಂಪತ್ರಾಜ್ ಸರ್ ಸಿ.ವಿ.ರಾಮನ್ನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಆಕಾಂಕ್ಷಿಯಾಗಿದ್ದಾರೆ.
ರಾಜಾಜಿನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಾಡಕ್ಕಿಳಿದು ವಿಧಾನಸೌಧ ಪ್ರವೇಶಿಸಲು ಮಾಜಿ ಮೇಯರ್ ಜಿ.ಪದ್ಮಾವತಿ ಅವರು ಕನಸು ಕಾಣುತ್ತಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಾಚರಣೆಗೆ ಇಳಿದಿದ್ದಾರೆ.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಮಾಜಿ ಮೇಯರ್ ಎಸ್.ಕೆ.ನಟರಾಜ್, ಹಾಲಿ ಸದಸ್ಯ ಭೆರಸಂದ್ರ ನಾಗರಾಜ್, ಮಾಜಿ ಸದಸ್ಯರಾದ ಸದಾಶಿವ, ಎನ್.ಆರ್.ರಮೇಶ್ ಪೈಪೆÇೀಟಿಗೆ ಇಳಿದಿದ್ದಾರೆ.
ಅದೇ ರೀತಿ ಮಾಜಿ ಸದಸ್ಯ ರಾಮಚಂದ್ರಪ್ಪ ಅವರು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತಿ ಹೊಂದಿದ್ದಾರೆ. ಇದುವರೆಗೂ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರ ಬಲಗೈ ಭಂಟ ಮಾಜಿ ಮೇಯರ್ ಡಿ.ವೆಂಕಟೇಶ್ ಮೂರ್ತಿ ಅವರು ಇತ್ತೀಚೆಗೆ ರಾಹುಲ್ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದು, ಇವರು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಆರ್.ಅಶೋಕ್ ವಿರುದ್ಧ ಅಖಾಡಕ್ಕಿಳಿಯುವ ಹುಮ್ಮಸ್ಸಿನಲ್ಲಿದ್ದಾರೆ.
ಆರ್.ಅಶೋಕ್ ಅವರ ಬಲಗೈ ಭಂಟ ಎಂದೇ ಗುರುತಿಸಿಕೊಂಡಿದ್ದ ಮಾಜಿ ಉಪಮೇಯರ್ ಎಲ್.ಶ್ರೀನಿವಾಸ್ ಅವರು ಕೂಡ ಕಾಂಗ್ರೆಸ್ನ ಕದ ತಟ್ಟಲು ಮುಂದಾಗಿದ್ದು, ಕೊನೆ ಗಳಿಗೆಯಲ್ಲಿ ತಮ್ಮ ತೀರ್ಮಾನದಿಂದ ಹಿಂದೆ ಸರಿದಿದ್ದಾರೆ. ಆದರೆ, ಅವರು ನನಗೆ ಯಾವುದಾದರೂ ಒಂದು ಕ್ಷೇತ್ರದಲ್ಲಿ ಟಿಕೆಟ್ ನೀಡುವಂತೆ ಬಿಜೆಪಿ ವರಿಷ್ಠರಿಗೆ ಮನವಿ ಮಾಡಿಕೊಂಡಿದ್ದಾರೆ.
ಮತ್ತೊಬ್ಬ ಮಾಜಿ ಉಪಮೇಯರ್ ಎಸ್.ಹರೀಶ್ ಹಾಗೂ ಇತ್ತೀಚೆಗಷ್ಟೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿರುವ ಬಿಬಿಎಂಪಿ ಮಾಜಿ ಸದಸ್ಯ ಎಂ.ನಾಗರಾಜ್ ಅವರು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಹುರಿಯಾಳಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಸದಸ್ಯರಾದ ಶಾಂತಕುಮಾರಿ ಮತ್ತು ಉಮೇಶ್ ಶೆಟ್ಟಿ ಅವರು ಬಿಜೆಪಿ ಟಿಕೆಟ್ಗೆ ಲಾಬಿ ನಡೆಸುತ್ತಿದ್ದಾರೆ. ಮಾಜಿ ಸದಸ್ಯ ಎಚ್.ರವೀಂದ್ರ ಅವರು ವಿಜಯನಗರ ವಿಧಾನಸಭಾ ಕ್ಷೇತ್ರದಿಂದ ಹಾಗೂ ಮಾಜಿ ಉಪಮೇಯರ್ ಲಕ್ಷ್ಮಿನಾರಾಯಣ್ ಅವರು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಗಳಾಗುವ ಸಾಧ್ಯತೆಗಳಿವೆ.
ಬಿಬಿಎಂಪಿ ಮಾಜಿ ಸದಸ್ಯ ಆರ್.ಪ್ರಕಾಶ್ ಅವರು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಿಂದ ಹಾಗೂ ಟಿ.ಮಲ್ಲೇಶ್ ಅವರು ಸರ್.ಸಿ.ವಿ.ರಾಮನ್ನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಗಳಾಗುವ ಸಾಧ್ಯತೆಗಳಿವೆ.
ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಸೇರ್ಪಡೆಗೊಂಡಿರುವ ಶಾಸಕ ಜಮೀರ್ ಅಹಮ್ಮದ್ಖಾನ್ ವಿರುದ್ಧ ಅವರ ಬಲಗೈ ಭಂಟ ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ವರಿಷ್ಠ ದೇವೇಗೌಡರು ಮನಸ್ಸು ಮಾಡಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ಇಮ್ರಾನ್ ಪಾಷ ಅವರ ಬದಲಿಗೆ ಜಮೀರ್ ಅವರ ರಾಜಕೀಯ ಕಡುವೈರಿ ಎಂದೇ ಬಿಂಬಿಸಿಕೊಂಡಿರುವ ಅಲ್ತಾಫ್ ಅವರನ್ನು ಕಣಕ್ಕಿಳಿಸುವ ದಾಳ ಉರುಳಿಸಲಿದ್ದಾರೆ ಎನ್ನಲಾಗಿದೆ.
ಅದೇ ರೀತಿ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯರೆಡ್ಡಿ ಅವರಿಗೆ ಟಿಕೆಟ್ ನೀಡಲು ಹೈಕಮಾಂಡ್ ನಿರಾಕರಿಸಿದರೆ, ಮಾಜಿ ಮೇಯರ್ ಮಂಜುನಾಥರೆಡ್ಡಿ ಅವರು ಆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ.
ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಾರ್ಜ್ ವಿರುದ್ಧ ಕಡಿಮೆ ಅಂತರದಿಂದ ಸೋಲಪ್ಪಿದ್ದರು. ಈ ಬಾರಿಯೂ ಅವರೇ ಜಾರ್ಜ್ ಅವರಿಗೆ ಸವಾಲೊಡ್ಡುವ ಸಾಧ್ಯತೆಗಳಿವೆ.
ಬಿಜೆಪಿ ಸದಸ್ಯ ಗೌತಮ್ ಅವರು ಶಾಂತಿನಗರ ವಿಧಾನಸಭಾ ಕ್ಷೇತ್ರದಿಂದ, ಮಾಜಿ ಸದಸ್ಯ ಗೋಪಿ ಅವರು ಶಿವಾಜಿನಗರದಿಂದ, ಎ.ಎಲ್.ಶಿವಕುಮಾರ್ ಹಾಗೂ ಧನರಾಜ್ ಅವರು ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಪಡೆಯಲು ಗಾಡ್ಫಾದರ್ಗಳ ಮೊರೆ ಹೋಗಿದ್ದಾರೆ.
ಒಟ್ಟಾರೆ 20ಕ್ಕೂ ಹೆಚ್ಚು ಹಾಲಿ ಮತ್ತು ಮಾಜಿ ಬಿಬಿಎಂಪಿ ಸದಸ್ಯರು ವಿಧಾನಸೌಧದ ಮೆಟ್ಟಿಲೇರುವ ಕನಸು ಕಾಣುತ್ತಿದ್ದು, ಯಾರಿಗೆ ಟಿಕೆಟ್ ದೊರೆತು ಎಷ್ಟು ಮಂದಿ ಶಕ್ತಿಸೌಧದ ಮೆಟ್ಟಿಲೇರುವರೋ ಕಾದು ನೋಡಬೇಕು.