ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಸಂಬಂಧ ಮಹತ್ವದ ಸಭೆ

ಬೆಂಗಳೂರು, ಮಾ.28- ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಬೀದರ್, ಕೊಡಗು, ಬಳ್ಳಾರಿ, ಗುಲ್ಬರ್ಗ, ಯಾದಗಿರಿ ಜಿಲ್ಲೆಗಳ ಉಸ್ತುವಾರಿ ಸಚಿವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಜತೆ ಅಭ್ಯರ್ಥಿ ಆಯ್ಕೆ ಸಂಬಂಧ ಮಹತ್ವದ ಸಭೆ ನಡೆಸಿದರು.

ಕ್ಷೇತ್ರದಲ್ಲಿರುವ ಭಿನ್ನಾಭಿಪ್ರಾಯಗಳು, ಸ್ಥಳೀಯ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಇರುವ ಒಲವು-ನಿಲುವುಗಳ ಬಗ್ಗೆ ಪ್ರತ್ಯೇಕ ಮಾತುಕತೆ ನಡೆಸಿದರು.
ಚುನಾವಣಾ ಆಯ್ಕೆ ಸಮಿತಿ ಈಗಾಗಲೇ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಎರಡು ಸಭೆಗಳನ್ನು ನಡೆಸಿದ್ದು, ಆಯ್ಕೆ ಸಮಿತಿಯಲ್ಲಿ ಸಮಿತಿ ಸದಸ್ಯರು ಮಾತ್ರ ಹಾಜರಿದ್ದರಿಂದ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಅಧ್ಯಕ್ಷರುಗಳ ಅಭಿಪ್ರಾಯ ಪಡೆಯುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರು ಇಂದು ಸಭೆ ನಡೆಸಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿದರು.

ಅಭ್ಯರ್ಥಿಗಳ ಜತೆ ಜನಸಂಪರ್ಕ ಹೇಗಿದೆ, ಟಿಕೆಟ್ ನೀಡಿದರೆ ಗೆಲುವು ಸಾಧಿಸುವ ಸಾಧ್ಯಾಸಾಧ್ಯತೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಡಿಸಿಸಿ ಅಧ್ಯಕ್ಷರೊಂದಿಗೆ ಗಹನವಾದ ಚರ್ಚೆ ನಡೆಸಿದರು.

ಡಿಸಿಸಿ ಅಧ್ಯಕ್ಷರು ಹಾಲಿ ಶಾಸಕರ ವಿರುದ್ಧ ಈ ಸಂದರ್ಭದಲ್ಲಿ ಸಾಕಷ್ಟು ದೂರುಗಳನ್ನು ಹೇಳಿರುವುದು ಕೇಳಿಬಂದಿದೆ. ಶಾಸಕರು ಕಾಂಗ್ರೆಸ್ ಕಾರ್ಯಕರ್ತರಿಗಿಂತ ಅನ್ಯ ಪಕ್ಷದ ಕಾರ್ಯಕರ್ತರಿಗೆ ಮಣೆ ಹಾಕಿರುವುದೇ ಹೆಚ್ಚಾಗಿದೆ. ಪಕ್ಷದ ಕಚೇರಿಗೆ ಹೆಚ್ಚಾಗಿ ಬಂದಿಲ್ಲ. ಪಕ್ಷದ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿಲ್ಲ. ಚುನಾವಣೆಯಲ್ಲಿ ಇವೆಲ್ಲ ಸಾಕಷ್ಟು ವ್ಯತಿರಿಕ್ತ ಪರಿಣಾಮ ಬೀರುತ್ತವೆ ಎಂದು ಶಾಸಕರುಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ಈ ಎಲ್ಲ ಅಗತ್ಯ ವಿವರಗಳನ್ನೂ ಮುಖ್ಯಮಂತ್ರಿ ಮತ್ತು ಅಧ್ಯಕ್ಷರು ಸಂಗ್ರಹಿಸಿದ್ದಾರೆ. ಅದೇ ರೀತಿ ಇನ್ನೂ ಹಲವು ಜಿಲ್ಲೆಗಳ ಉಸ್ತುವಾರಿ ಹಾಗೂ ಜಿಲ್ಲಾ ಅಧ್ಯಕ್ಷರುಗಳ ಅಭಿಪ್ರಾಯ ಕ್ರೋಢೀಕರಿಸಿರುವ ಅವರು ಎಲ್ಲ ಮಾಹಿತಿಯನ್ನೂ ಸಂಗ್ರಹಿಸಿ ಹೈಕಮಾಂಡ್‍ಗೆ ಕಳುಹಿಸಿಕೊಡಲಿದ್ದಾರೆ. ಹೈಕಮಾಂಡ್ ಸದ್ಯದಲ್ಲೇ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಇರುವ ಆರಕ್ಕೆ ಆರೂ ವಿಧಾನಸಭಾ ಕ್ಷೇತ್ರಗಳನ್ನೂ ಕಾಂಗ್ರೆಸ್ ಗೆಲ್ಲಬೇಕು ಎಂದು ಉಸ್ತುವಾರಿ ಸಚಿವ ಆಂಜನೇಯ ಅವರಿಗೆ ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ತಾಕೀತು ಮಾಡಿದ್ದಾರೆ. ಸದ್ಯ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಇದ್ದು, ಉಳಿದ ಎರಡು ಕ್ಷೇತ್ರಗಳನ್ನು ತಮ್ಮದಾಗಿಸಿಕೊಳ್ಳಬೇಕೆಂದು ಅವರು ಸೂಚಿಸಿದ್ದಾರೆ.
ಚಿತ್ರದುರ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಚಿತ್ರನಟಿ ಭಾವನಾ ಹಾಗೂ ಮಾಜಿ ಸಂಸದ, ನಟ ಶಶಿಕುಮಾರ್ ಆಕಾಂಕ್ಷಿಗಳಾಗಿದ್ದಾರೆ. ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಲು ಉಗ್ರಪ್ಪ ಅರ್ಜಿ ಸಲ್ಲಿಸಿದ್ದಾರೆ.

ಭಾವನಾ ಅವರಿಗೆ ಪ್ರತಿಸ್ಪರ್ಧಿಯಾಗಿ ಮಂಜುನಾಥ್ ಮತ್ತು ಷಣ್ಮುಗಪ್ಪ ಅವರು ಅರ್ಜಿ ಸಲ್ಲಿಸಿದ್ದಾರೆ. ಹೈಕಮಾಂಡ್ ಯಾರನ್ನು ಪರಿಗಣಿಸಲಿದೆ ಎಂಬುದನ್ನು ಕಾದು ನೋಡಬೇಕು.
ಚಿತ್ರದುರ್ಗ ಆರಕ್ಕೆ ಆರೂ ಗೆಲ್ಲಬೇಕೆಂಬುದು ಮುಖ್ಯಮಂತ್ರಿಗಳ ಇರಾದೆಯಾಗಿದೆ. ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಉಸ್ತುವಾರಿ ಸಚಿವರೊಂದಿಗೆ ಸಿಎಂ ಹಾಗೂ ಕೆಪಿಸಿಸಿ ಸಚಿವರು ಈ ಸಂಬಂಧ ಚರ್ಚೆ ನಡೆಸಿದ್ದಾರೆ.
ಒಟ್ಟಾರೆ ಅಭ್ಯರ್ಥಿಗಳು ಅಖೈರುಗೊಂಡು ಚುನಾವಣಾ ಕಣಕ್ಕಿಳಿದ ನಂತರ ಸ್ಪಷ್ಟ ಚಿತ್ರಣ ಹೊರಬರಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ